ಕಲಬುರಗಿ: ಜಿಲ್ಲೆ ಹಾಗೂ ನಗರದಾದ್ಯಂತ ಬುಧುವಾರ ಈದ್-ಉಲ್-ಫಿತರ್ (ರಂಜಾನ್) ಹಬ್ಬದ ನಿಮಿತ್ತ ಮುಸ್ಲಿಮರು ನಗರದ ವಿವಿಧ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ನಗರದ ಸೇಡಂ ರಸ್ತೆ, ಹಾಗರಗಾ ರಸ್ತೆ, ಬಿದ್ದಾಪುರ ಕಾಲೊನಿ ರಸ್ತೆ, ರಾಜಾಪುರ ರಸ್ತೆಯಲ್ಲಿರುವ ಈದ್ಗಾ ಮೈದಾನಗಳಲ್ಲಿ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಒಂದು ತಿಂಗಳ ಕಾಲ ಉಪವಾಸ ಮಾಡಿದ್ದ ಮುಸ್ಲಿಮರು ರಮಜಾನ್ ಅಂಗವಾಗಿ ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸಿದರು. ಈದ್ಗಾಗಳಲ್ಲಿ ವಿಶೇಷ ನಮಾಜ್ ಸಲ್ಲಿಸಿದ ನಂತರ ಒಬ್ಬರಿಗೊಬ್ಬರು ಆಲಂಗಿಸಿಕೊಳ್ಳುವ ಮೂಲಕ ಪರಸ್ಪರ ಈದ್ ಮುಬಾರಕ್ ಶುಭಾಶಯ ವಿನಿಮಯ ಮಾಡಿಕೊಂಡರು.
ನಂತರ ಗೆಳೆಯರು ಹಾಗೂ ಆತ್ಮೀಯರನ್ನು ಮನೆಗಳಿಗೆ ಕರೆಸಿ ಹಾಲು-ಶಾವಿಗೆ ಮಿಶ್ರಿತ ಸುರಕುಂಬಾ ನೀಡಿ, ವಿವಿಧ ಖಾದ್ಯಗಳನ್ನು ಬಡಿಸಿ ಸಂಭ್ರಮಿಸಿದರು.
ಕುರಾನ್ ಅಸ್ತಿತ್ವಕ್ಕೆ ಬಂದ ದಿನವಾದ ರಮಜಾನ್ ಹಬ್ಬದ ಅಂಗವಾಗಿ ಇಸ್ಲಾಂ ಧರ್ಮದ ನಿಯಮದಂತೆ ಪ್ರತಿಯೊಬ್ಬ ಮುಸ್ಲಿಮರೂ ಪಾಲಿಸಬೇಕಾದ ತತ್ವಗಳಂತೆ ಜಕಾತ್(ತಮ್ಮ ಆದಾಯದಲ್ಲಿ ಅಲ್ಪ ಪ್ರಮಾಣವನ್ನು ಬಡವರಿಗೆ ವಿತರಿಸುವುದು)ಅಂಗವಾಗಿ ಬಡವರಿಗೆ ಜಕಾತ್ ನೀಡಲಾಯಿತು.
ಮುಸ್ಲಿಮ ಸಮುದಾಯದ ವರೊಂದಿಗೆ ಹಿಂದೂಗಳು ರಮಜಾನ್ ಅಂಗವಾಗಿ ಅವರ ಮನೆಗಳಿಗೆ ತೆರಳಿ ಅವರೊಂದಿಗೆ ಸುರಕುಂಬಾ ಸೇವಿಸಿ ಹಬ್ಬದ ಶುಭಾಶಯ ಕೋರಿದರು. ನೂತನವಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ತಿಪ್ಪಣ್ಣಪ್ಪ ಕಮಕನೂರ ಅವರು ಮುಸ್ಲಿಮ ಸಮುದಾಯದವರೊಂದಿಗೆ ಸೇರಿ ರಮಜಾನ್ ಆಚರಿಸಿದರು.