Advertisement

ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ಸಂಭ್ರಮ

01:04 PM Aug 18, 2019 | Naveen |

ಕಲಬುರಗಿ: ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ನಿಮಿತ್ತ ನಗರದ ಮಠಗಳಲ್ಲಿ ಶನಿವಾರ ಮಧ್ಯಾರಾಧನೆ ಸಂಭ್ರಮದಿಂದ ನೆರವೇರಿತು.

Advertisement

ಜೇವರ್ಗಿ ರಸ್ತೆಯ ಎನ್‌ಜಿಒ ಕಾಲೋನಿಯಲ್ಲಿರುವ ರಾಘವೇಂದ್ರಸ್ವಾಮಿ ಮಠದ ರಾಯರ ರಥ ಬೀದಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಜತ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಗಾಯತ್ರಿ ಯುವ ಸಂಘ, ಪ್ರಸನ್ನ ಮಾರುತಿ ಭಜನಾ ಸಂಘ ಮಂಡಳಿ, ಧ್ಯಾನಾಂಜನೇಯ ಭಜನಾ ಮಂಡಳಿಯವರು ರಥೋತ್ಸವದಲ್ಲಿ ಪಾಲ್ಗೊಂಡು ಗಾಯನ ಸೇವೆ ಸಲ್ಲಿಸಿದರು.

ಬೆಳಗ್ಗೆ ಫಲ, ಪಂಚಾಮೃತ ಅಭಿಷೇಕ, ಅಲಂಕಾರ, ವಿಶೇಷ ಪೂಜೆ-ಪುನಸ್ಕಾರಗಳು ಪಂ. ಗಿರೀಶಾಚಾರ್ಯ ಅವದಾನಿ ಅವರಿಂದ ನಡೆದವು. ನಂತರ ನೈವೇದ್ಯ, ಹಸ್ತೋದಕ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ರಥ ಬೀದಿಗಳಲ್ಲಿ ರಂಗೋಲಿ, ಹೂವಿನ ಅಲಂಕಾರ ಮಾಡಲಾಗಿತ್ತು.

ರಾಘವೇಂದ್ರಾಚಾರ್ಯ, ಮಾಧವರಾವ್‌ ತಾವರಗೇರಿ, ವಾಸುದೇವರಾವ್‌ ಮುಂಡರಗಿ, ಪ್ರಹ್ಲಾದ ಮಟಮಾರಿ, ನರೇಂದ್ರ ಫಿರೋಜಾಬಾದಕರ್‌, ವೆಂಕಟರಾವ್‌ ಜೋಗೂರ, ರಘು, ಎನ್‌.ವಿ. ಕುಲಕರ್ಣಿ, ಪವನ ಕೋರವಿ, ಪ್ರಸನ್ನ ದೇಶಾಪಂಡೆ, ಪ್ರಮೋದ ಕೋರವಿ, ಮುರಳಿ ಕೆ., ಗುರುರಾಜ ಕೆ., ಶ್ರೀಧರ ಪಾಟೀಲ, ವಾಣಿಶ್ರೀ ಸಾಲಿಮಠ ಹಾಗು ಮತ್ತಿತರರು ಇದ್ದರು.

ಬಿದ್ದಾಪುರ ಕಾಲೋನಿಯಲ್ಲಿ ಇರುವ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ವೈಭವದಿಂದ ಜರುಗಿತು. ಬೆಳಗ್ಗೆ ಸುಪ್ರಭಾತ, ವೇದಪಾರಾಯಣ, ಕ್ಷೀರಾಭಿಷೇಕ, ಫಲ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ ನೆರವೇರಿತು. ಬಳಿಕ ಭಕ್ತ ಸಮೂಹದ ಮಧ್ಯೆ ರಥೋತ್ಸವ ಜರುಗಿತು. ಲಕ್ಷ್ಮೀನಾರಾಯಣ ದೇವಸ್ಥಾನದ ಸದಾಶಿವ ಮಹಾರಾಜರು, ಸಂಸದ ಡಾ| ಉಮೇಶ ಜಾಧವ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರಿಗೆ ಫಲ ಮಂತ್ರಾಕ್ಷತೆ ವಿತರಿಸಲಾಯಿತು.

Advertisement

ಇದಕ್ಕೂ ಮುನ್ನ ಗುರುಸಾರ್ವಭೌಮರ ಆಶೀರ್ವಾದ ಪಡೆದು ಮಾತನಾಡಿದ ಉಮೇಶ ಜಾಧವ, ಬಿದ್ದಾಪುರ ಕಾಲೋನಿಯಲ್ಲಿ ನಮ್ಮ ಕುಟುಂಬ ವಾಸವಿದ್ದು, ಶ್ರೀಮಠದ ಸೇವೆಯನ್ನು ನಾನು ಸೇವಕನಂತೆ ಸಲ್ಲಿಸುತ್ತಿದ್ದೇನೆಂದು ಹೇಳಿದರು. ನವಲಿ ಕೃಷ್ಣಾಚಾರ್ಯ, ರಾಜೇಂದ್ರ ಕೆಲ್ಲೂರು, ಗಿರೀಶ ಕುಲಕರ್ಣಿ, ಶ್ರೀಕಾಂತ ದೇಸಾಯಿ, ಶ್ರೀನಿವಾಸ, ಗುರುರಾಜ ಕನಕಗಿರಿ, ಮಹಾಲಕ್ಷ್ಮೀ ಭಜನಾ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು. ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಪ್ರಯುಕ್ತ ಪಲ್ಲಕ್ಕಿ ಸೇವೆ ಜರುಗಿತು. ಗುಂಡಾಚಾರ್ಯ ನರಿಬೋಳ, ಡಿ.ವಿ.ಕುಲಕರ್ಣಿ, ಅನಿಲ ಕಕ್ಕರೆ, ಶಾಮರಾವ್‌ ಕುಲಕರ್ಣಿ ಹಾಗೂ ಮಹಿಳಾ ಮಂಡಳದ ಸದಸ್ಯರು ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next