ಕಲಬುರಗಿ: ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇರುತ್ತದೆ. ಈಗ ಮಳೆ ಬರುವ ಪ್ರಮಾಣವೂ ಕಡಿಮೆ ಆಗಲಿದೆ. ಆದ್ದರಿಂದ ಈಗಲೇ ಜಿಲ್ಲೆಯ ಎಲ್ಲ 29 ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಗೇಟ್ ಹಾಕಿ ನೀರು ಹರಿಸುವುದನ್ನು ನಿಲ್ಲಿಸಿ ಎಂದು ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಸಿಗೆಯಾಗಲಿ, ಮಳೆಗಾಲವಾಗಲಿ ನೀರಿನ ಸಮಸ್ಯೆಯಾಗಬಾರದು. ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಗೇಟ್‌ಗಳಲ್ಲಿ ದುರಸ್ತಿ ಇದ್ದರೆ ಮಾಡಿ. ಯಾವುದೇ ಕಾರಣಕ್ಕೂ ನೀರು ಸೋರಿಕೆಯಾಗದಂತೆ ತಡೆಯಿರಿ. ಎನ್‌ಡಿಆರ್ ಎಫ್‌ನಲ್ಲಿ 41.3 ಕೋಟಿ ರೂ. ಅನುದಾನ ಹಾಗೂ ಎಸ್‌ಡಿಆರ್‌ಎಫ್‌ನಲ್ಲಿ 21 ಕೋಟಿ ರೂ. ಅನುದಾನ ಇದೆ. ಹಣಕ್ಕೆ ಕೊರತೆ ಇಲ್ಲ. ಕೊಳವೆಬಾವಿ, ತೆರೆದ ಬಾವಿಗಳಿಂದ ರೈತರು ಬೆಳೆಗಳಿಗೆ ಬಳಸದೆ ಕುಡಿಯಲು ನೀರು ನೀಡಿದರೆ ಹಣ ಕೊಟ್ಟು, ಸಮಸ್ಯೆ ಇದ್ದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕು. ಅಲ್ಲದೇ, ನೀರಾವರಿ ಯೋಜನೆಯಡಿ ಕಾಲುವೆ ನೀರು ಕೊನೆ ಗ್ರಾಮದವರೆಗೆ ಹೋಗುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಡಿಸಿಸಿ ಬ್ಯಾಂಕ್ “ದಿವಾಳಿ’: ಸಣ್ಣ ಜಿಲ್ಲೆ ಬಾಗಲಕೋಟೆಯಲ್ಲಿ 800 ಕೋಟಿ ರೂ.ಯಷ್ಟು ಸಾಲ ಕೊಟ್ಟು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಆದರೆ, ಅವಿಭಜಿತ ಕಲಬುರಗಿ ಮತ್ತು ಯಾದಗಿರಿ ಸೇರಿ ಕೇವಲ 238 ಕೋಟಿ ರೂ. ಸಾಲ ಕೊಡಲಾಗಿದೆ. ಇದರಲ್ಲಿ 175 ಕೋಟಿ ರೂ. ಸಾಲ ಮನ್ನಾವಾಗಿದೆ.
ಡಿಸಿಸಿ ಬ್ಯಾಂಕ್ ಕೇವಲ ಶೇ.23ರಷ್ಟು ಮಾತ್ರ ಪ್ರಗತಿ ಕಂಡಿದೆ. ಇದನ್ನು ನೋಡಿದರೆ ಡಿಸಿಸಿ ಬ್ಯಾಂಕ್ “ದಿವಾಳಿ’ ಮಾಡಿದೀªರಿ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಕೃಷಿ ಸಹಕಾರ ಪತ್ತಿನ ಸಂಘಗಳನ್ನು ತೆಗೆಯಲು ಅನುಮತಿ ಕೊಡಿ. ಹೊಸ ಸಂಘ ಆರಂಭಿಸಲು ಸಹಕಾರ ಕೊಡದ ಸಂಘಗಳನ್ನು ಸೂಪರ್ ಸೀಡ್ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಡಿಸಿಸಿ ಬ್ಯಾಂಕ್ ಬಗ್ಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಹೇಳಿದರು.
ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಆರೋಗ್ಯ ಕೇಂದ್ರಗಳ ಬಗ್ಗೆ ಗಮನ ಸೆಳೆದರು. ತಮ್ಮ ಮತಕ್ಷೇತ್ರದ ವ್ಯಾಪ್ತಿಯ ಶಹಾಬಾದನಲ್ಲಿ ಆರೋಗ್ಯ ಕೇಂದ್ರ ಆರಂಭಿಸಲು ಮನವಿ ಮಾಡಲಾಗಿದೆ. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ, ಲೀಡ್ ಬ್ಯಾಂಕ್, ಕೃಷಿ ಇಲಾಖೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜೆಸ್ಕಾಂ, ಗೃಹ ಮಂಡಳಿ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಇಲಾಖೆಗಳ ಪ್ರಗತಿ ಬಗ್ಗೆ ಸಚಿವ ಕಾರಜೋಳ ಮಾಹಿತಿ ಪಡೆದರು.
ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ತೇಲ್ಕೂರ, ಶಾಸಕ ಸುಭಾಷ ಗುತ್ತೇದಾರ, ಡಾ| ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿಲ್ಲಾಧಿಕಾರಿ ಬಿ. ಶರತ್, ಜಿಪಂ ಸಿಇಒ ಡಾ| ಪಿ. ರಾಜಾ, ಎಸ್‌ಪಿ ವಿನಾಯಕ ಪಾಟೀಲ, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ಶರಣಪ್ಪ ಸತ್ಯಂಪೇಟ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.