Advertisement

ನಿಧಾನಗತಿ ಕಾಮಗಾರಿ ಸಹಿಸಲ್ಲ

12:57 PM Aug 14, 2019 | Naveen |

ಕಲಬುರಗಿ: ಹೈದ್ರಾಬಾದ ಕರ್ನಾಟಕದ 6 ಜಿಲ್ಲೆಗಳಿಗೆ ಹೋಲಿಸಿದರೆ ಕಲಬುರಗಿ ಜಿಲ್ಲೆಯಲ್ಲಿ ಎಚ್ಕೆಆರ್‌ಡಿಬಿ ಅಭಿವೃದ್ಧಿ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ಅವರು ಯಾವುದೇ ಕಾರಣಕ್ಕೂ ನಿಧಾನಗತಿಯಲ್ಲಿ ಕಾಮಗಾರಿ ಮಾಡಿದರೆ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ಎಚ್ಕೆಆರ್‌ಡಿಬಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2017-18 ಮತ್ತು 2018-19ನೇ ಸಾಲಿನಲ್ಲಿ ಮಂಡಳಿಯಿಂದ ಅನುಮೋದನೆಯಾಗಿರುವ ಎಲ್ಲ ಕಾಮಗಾರಿಗಳನ್ನು ಜೂನ್‌-2019ರ ಅಂತ್ಯಕ್ಕೆ ಮುಗಿಸುವಂತೆ ಗಡುವು ನೀಡಲಾಗಿತ್ತಾದರು ಇದೂವರೆಗೆ ಪೂರ್ಣಗೊಂಡಿಲ್ಲ ಎಂದು ಗರಂ ಆದರು.

ಮಂಡಳಿ ಅನುಮೋದನೆ ಕೊಟ್ಟ ಬಳಿಕ ಟೆಂಡರ್‌ ಪ್ರಕ್ರಿಯೆ ಹಿಡಿದುಕೊಂಡು ಕಾಮಗಾರಿ ಮುಗಿಯುವರೆ‌ಗೆ ಎಲ್ಲವೂ ನಿಧಾನಗತಿಯಾದರೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಆಗುವುದಿಲ್ಲ. ಹೀಗಾದಲ್ಲಿ ಸರ್ಕಾರಕ್ಕೆ ಆರ್ಥಿಕ ಮತ್ತು ಭೌತಿಕ ಪ್ರಗತಿ ಮಾಹಿತಿ ಸಲ್ಲಿಸುವುದಾದರು ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಸಣ್ಣ-ಪುಟ್ಟ ಕಾಮಗಾರಿಗಳು ಸಹ ಪೂರ್ಣಗೊಳ್ಳದಿರುವುದು ವಿಷಾಧನೀಯವಾಗಿದೆ ಎಂದು ಹೇಳಿದರು.

Advertisement

ಎಚ್ಕೆಆರ್‌ಡಿಬಿ ಕಾಮಗಾರಿಯನ್ನು ಅನುಷ್ಠಾನ ಏಜೆನ್ಸಿಗಳು ಕಾಮಗಾರಿಗಳವಾರು ಪ್ರತಿ ದಿನದ ಭೌತಿಕ ಮಾಹಿತಿಯನ್ನು ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್‌ ಮಾಡದ ಕಾರಣ ಇಂದಿನ ವಸ್ತುಸ್ಥಿತಿ ಪ್ರಗತಿ ಮಾಹಿತಿ ದೊರೆಯುತ್ತಿಲ್ಲ. ಪ್ರತಿ ದಿನದ ಪ್ರಗತಿ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

2018-19ನೇ ಸಾಲಿನಲ್ಲಿ ಗುತ್ತಿಗೆ ಆಧಾರದ ಮೇಲೆ ವಹಿಸಿದ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಕಾರಣ ಸಕಾಲದಲ್ಲಿ ಮೂರನೇ ವ್ಯಕ್ತಿಯಿಂದ ತಪಾಸಣೆ ನಡೆಸಲು ಸಹ ಕಷ್ಟಸಾಧ್ಯವಾಗುತ್ತದೆ. ಕಾಮಗಾರಿಗಳ ವಿಳಂಬ ಕುರಿತು ಸೌಲಭ್ಯ ಪಡೆಯುವ ಇಲಾಖೆ ಮತ್ತು ಅನುಷ್ಠಾನ ಏಜೆನ್ಸಿ ಅಧಿಕಾರಿಗಳು ಆಗಾಗ ಸಭೆ ನಡೆಸಿ ಕಾಮಗಾರಿ ಪೂರ್ಣಕ್ಕೆ ಇರುವ ಅಡೆ-ತಡೆಗಳನ್ನು ಪರಸ್ಪರ ಸಮನ್ವಯತೆಯಿಂದ ಬಗೆಹರಿಸಿಕೊಳ್ಳಬೇಕು. ಕುಡಿಯುವ ನೀರಿನ 163 ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅನುದಾನ ಸದ್ಬಳಕೆ ಮಾಡಿಕೊಳ್ಳಿ: ರಾಜ್ಯ ಸರ್ಕಾರ ಹೈ.ಕ.ಭಾಗದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ನೀಡುತ್ತಿದೆ. ಆದ್ದರಿಂದ ಇದರ ಪ್ರಯೋಜನ ಪಡೆದು

ಅಧಿಕಾರಿಗಳು ಈ ಭಾಗದ ಅಭಿವೃದ್ಧಿಗೆ ಶ್ರಮಿಸಬೇಕು. ಅನುದಾನ ಬಿಡುಗಡೆಯಾದರು ನಿರೀಕ್ಷಿತ ಮಟ್ಟದಲ್ಲಿ ಕೆಲಸವಾಗುತ್ತಿಲ್ಲ. ಮಂಡಳಿಯಿಂದ ಅನುಮೋದನೆ ನೀಡಿರುವ ಮತ್ತು ಈಗಾಗಲೆ ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿಗಳ ಸಮಗ್ರ ಮಾಹಿತಿಯೊಂದಿಗೆ ಪಟ್ಟಿ ಮಾಡಿ ಮಾಹಿತಿ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಾತನಾಡಿ, ಅಧಿಕಾರಿಗಳು ಸಭೆಗೆ ಬರುವಾಗ ಇಲಾಖಾವಾರು ಮಂಡಳಿ ಕಾಮಗಾರಿಗಳ ಬಗ್ಗೆ ಸರಿಯಾದ ಮಾಹಿತಿ ಇಟ್ಟುಕೊಂಡು ಬರಬೇಕು ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ. ರಾಜಾ, ಸಹಾಯಕ ಆಯುಕ್ತ ರಾಹುಲ ತುಕಾರಾಂ ಪಾಂಡ್ವೆ, ಎಚ್ಕೆಆರ್‌ಡಿಬಿ ಉಪ ಕಾರ್ಯದರ್ಶಿ ಡಾ| ಬಿ.ಸುಶೀಲಾ, ಸೂಪರಿಂಟೆಂಡೆಂಟ್ ಇಂಜಿನಿಯರ್‌ ಶಿವಶಂಕರಪ್ಪ ಗುರಗುಂಟಿ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಅನುಷ್ಠಾನ ಏಜೆನ್ಸಿಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next