ಕಲಬುರಗಿ: ಜಿಲ್ಲೆಯಾದ್ಯಂತ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ಅತಿಕ್ರಮಣಕಾರರ ಸಮಗ್ರ ಮಾಹಿತಿ ಕಲೆ ಹಾಕಿ, ಒತ್ತುವರಿ ತೆರವುಗೊಳಿಸುವ ಮೂಲಕ ಅತಿಕ್ರಮಣಕಾರರ ಮೇಲೆ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಿ ಎಂದು ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಖಡಕ್ ಆದೇಶ ನೀಡಿದರು.
ನಗರದ ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ 11,625 ಎಕರೆ ಸರ್ಕಾರಿ ಜಮೀನು ಅತಿಕ್ರಮಣ ಆಗಿರುವುದನ್ನು ಗುರುತಿಸಲಾಗಿದ್ದು, ಇದನ್ನು ವಶಕ್ಕೆ ಪಡೆಯುವುದು ಆಯಾ ತಹಶೀಲ್ದಾರ್‌ಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಒತ್ತುವರಿ ತೆರವುಗೊಳಿಸುವ ಮುನ್ನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಬಾಳುವ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಬಲಾಡ್ಯರ, ಶ್ರೀಮಂತರ ಪ್ರಕರಣಗಳನ್ನು ಮೊದಲು ಕೈಗೆತ್ತಿಕೊಳ್ಳಿ. ತದನಂತರ ಉಳಿದ ಪ್ರಕರಣಗಳ ತೆರವಿಗೆ ಮುಂದಾಗಬೇಕು. ಒತ್ತುವರಿ ತೆರವುಗೊಳಿಸಿದ ನಂತರ ಕಾನೂನು ಪ್ರಕಾರ ಮೊಕದ್ದಮೆ ದಾಖಲಿಸುವುದಲ್ಲದೇ, ಈ ಕುರಿತು ವ್ಯಾಪಕ ಪ್ರಚಾರ ಸಹ ನೀಡಿ. ನಿರ್ದಿಷ್ಟವಾಗಿ ಮೂರು ಪ್ರಕರಣಗಳಲ್ಲಾದರೂ ಹೀಗೆ ಮಾಡಿದಲ್ಲಿ ಉಳಿದವರು ಎಚ್ಚರಗೊಳ್ಳುತ್ತಾರೆ ಎಂದರು.
ಖಾಲಿ ಹುದ್ದೆ ಭರ್ತಿ ಮಾಡಿ: ಬರ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬಾಡಿಗೆ ಜಲಮೂಲದಿಂದ ಮತ್ತು ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಿದವರಿಗೆ ಸಕಾಲದಲ್ಲಿ ಹಣ ಪಾವತಿಸಬೇಕು. ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗ, ಕಂದಾಯ ನಿರೀಕ್ಷಕ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಭರ್ತಿಗೆ ನಿಯಮಾನುಸಾರ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.
ಸರ್ವೇ ಕಾರ್ಯ ಚುರುಕುಗೊಳಿಸಿ: ಜಿಲ್ಲೆಯಲ್ಲಿ 101 ಸರ್ವೇಯರ್‌ಗಳಿದ್ದರೂ ಪೋಡಿ ಮುಕ್ತ ಗ್ರಾಮಕ್ಕೆ ಸರ್ವೇಯರ್‌ಗಳಿಂದ ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ನಡೆಯುತ್ತಿಲ್ಲ. ಬೇರೆ ಜಿಲ್ಲೆಗೆ ಹೋಲಿಸಿದಲ್ಲಿ ಸರ್ವೇ ಕಾರ್ಯ ತೃಪ್ತಿಕರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರಾದೇಶಿಕ ಆಯಕ್ತರು, ಕೂಡಲೇ ಜಿಲ್ಲೆಯ ಎಲ್ಲ ಸರ್ವೇಯರ್‌ಗಳ ಸಭೆ ಕರೆದು ಸರ್ವೇ ಕಾರ್ಯ ಚುರುಕುಗೊಳಿಸುವಂತೆ ಸೂಚನೆ ನೀಡಬೇಕು. ಇಷ್ಟಾದರೂ ಸರ್ವೇ ಕಾರ್ಯ ವೇಗ ಪಡೆದುಕೊಳ್ಳದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಸಾಗುವಳಿ ಭೂಮಿ ಒತ್ತುವರಿ ಸಕ್ರಮಕ್ಕೆ ಕೋರಿ 25,330 ಅರ್ಜಿಗಳನ್ನು ಸಲ್ಲಿಸಿದ್ದು, ಇದುವರೆಗೆ 11,925 ಅರ್ಜಿ ವಿಲೇವಾರಿ ಮಾಡಿ ಸಾಗುವಳಿ ಚೀಟಿ ನೀಡಲಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡವರಿಗೆ ಸಕ್ರಮಗೊಳಿಸಿ ಕಾಯ್ದೆಯ 94(ಸಿ)ಅನ್ವಯ ಸ್ವೀಕೃತ 13,825ರಲ್ಲಿ 3,569 ಅರ್ಜಿಗಳನ್ನು ವಿಲೇವಾರಿ ಮಾಡಿ ಹಕ್ಕು ಚೀಟಿ ವಿತರಿಸಲಾಗಿದೆ. ಇನ್ನು ನಗರ-ಪಟ್ಟಣ ಪ್ರಕರಣಗಳಲ್ಲಿ ಕಾಯ್ದೆ 94(ಸಿಸಿ)ಅನ್ವಯ ಸ್ವೀಕೃತ 1,381ರಲ್ಲಿ 34 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಕಂದಾಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ವರದಿಯಾದ 63 ರೈತ ಆತ್ಮಹತ್ಯೆ ಪ್ರಕರಣದಲ್ಲಿ ಅರ್ಹ 42 ಕುಟಂಬಗಳಿಗೆ ತಲಾ 5 ಲಕ್ಷ ರೂ. ಗಳಂತೆ 2.10 ಕೋಟಿ ರೂ. ಪರಿಹಾರ ಮೊತ್ತವನ್ನು ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾಗಿದೆ. 2019-20ನೇ ಸಾಲಿನಲ್ಲಿ ಇದುವರಗೆ ನಾಲ್ಕು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗೂರ ತಿಳಿಸಿದರು.
ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಅಪರ ಜಿಲ್ಲಾಧಿಕಾರಿ ಬಿ. ಶರಣಪ್ಪ, ಸಹಾಯಕ ಆಯುಕ್ತ ರಾಹುಲ್ ಪಾಂಡ್ವೆ, ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ ಹಾಗೂ ತಹಶೀಲ್ದಾರ್‌ಗಳು, ಕಂದಾಯ ಅಧಿಕಾರಿಗಳು ಹಾಜರಿದ್ದರು.