Advertisement

ಮೇವು ಬ್ಯಾಂಕ್‌ ಸ್ಥಾಪನೆಗೆ ನಿರ್ದೇಶನ

09:53 AM Jul 12, 2019 | Naveen |

ಕಲಬುರಗಿ: ಪ್ರಸಕ್ತವಾಗಿ ಮುಂಗಾರು ಆರಂಭವಾಗಿ ಒಂದೂವರೆ ತಿಂಗಳಾದರೂ ಸಮರ್ಪಕ ಮಳೆ ಬಾರದೇ ಇರುವುದರಿಂದ ಮೇವಿನ ಕೊರತೆಯಾಗದಂತೆ ಸಾಧ್ಯವಾದರೆ ಇನ್ನೂ ಹೆಚ್ಚಿನ ಮೇವು ಬ್ಯಾಂಕ್‌ ಸ್ಥಾಪಿಸುವಂತೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುವರ್ಣಾ ಮಲಾಜಿ ನಿರ್ದೇಶನ ನೀಡಿದರು.

Advertisement

ಶುಕ್ರವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆಗೆ ಮೂರು ತಿಂಗಳು ಮಾತ್ರ ಎಂಬುದಿಲ್ಲ. ಹೀಗಾಗಿ ಟ್ಯಾಂಕರ್‌ ನೀರು ಪೂರೈಕೆ ಮುಂದುವರಿಸಬೇಕು. ಮಳೆ ಸಮಪರ್ಕಕವಾಗಿ ಬಾರದೇ ಇರುವುದರಿಂದ ಟ್ಯಾಂಕರ್‌ ನೀರು ಪೂರೈಕೆ ಸ್ಥಗಿತಗೊಳಿಸಬಾರದು ಎಂದು ತಾಕೀತು ಮಾಡಿದರು.

ಶೇ. 50ರಷ್ಟು ಮಳೆ ಕೊರತೆ: ಪ್ರಸಕ್ತವಾಗಿ ಜುಲೈ ತಿಂಗಳಿನ ಹತ್ತು ದಿನಗಳಲ್ಲಿ ಶೇ. 50ರಷ್ಟು ಮಳೆ ಕೊರತೆಯಾಗಿದೆ. ಜೂನ್‌ದಿಂದ ಇಲ್ಲಿಯ ವರೆಗೆ ಶೇ. 28ರಷ್ಟು ಮಳೆ ಕೊರತೆಯಾಗಿದ್ದು, ಸರಾಸರಿ 153 ಮಿ.ಮೀ ಮಳೆ ಪೈಕಿ 119 ಮಿ.ಮೀ ಮಾತ್ರ ಮಳೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 7.50 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ 3.50 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದೆ ಎಂದು ಅಂದಾಜಿಸಲಾಗಿದೆ. ಚಿಂಚೋಳಿ, ಸೇಡಂ, ಚಿತ್ತಾಪುರ ತಾಲೂಕಿನಲ್ಲಿ ಶೇ. 80ರಷ್ಟು ಹಾಗೂ ಅಫ‌ಜಲಪುರ, ಆಳಂದ ತಾಲೂಕಿನಲ್ಲಿ ಶೇ. 50ರಷ್ಟು ಬಿತ್ತನೆಯಾದರೆ ಜೇವರ್ಗಿ ತಾಲೂಕಿನಲ್ಲಿ ಬಿತ್ತನೆ ಶುರುವಾಗಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ರತೀಂದ್ರನಾಥ ಸೂಗುರು ಸಭೆಗೆ ವಿವರಣೆ ನೀಡಿದರು.

ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್‌ ರೇವಣಸಿದ್ಧಪ್ಪ ಅವರು, ಜಿಲ್ಲೆಯಲ್ಲಿ ಒಟ್ಟು 229 ಸಮಸ್ಯಾತ್ಮಕ ಹಳ್ಳಿಗಳಿದ್ದು, 122 ಟ್ಯಾಂಕರ್‌ ಮೂಲಕ ಪ್ರತಿದಿನ 527 ಟ್ರಿಪ್‌ ನೀರು ಪೂರೈಸಲಾಗುತ್ತಿದೆ. 117 ಹಳ್ಳಿಗಳಲ್ಲಿ 136 ಬೋರ್‌ವೆಲ್ ಬಾಡಿಗೆ ಪಡೆದು ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಡಿಡಿ ತರಾಟೆಗೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಅಂಗನವಾಡಿಗಳಿಗೆ ಕಳಪೆ ಆಹಾರ ಸಾಮಾಗ್ರಿಗಳು ಪೂರೈಕೆಯಾಗುತ್ತಿವೆ. ಸ್ವತಃ ಅಧ್ಯಕ್ಷರಾದ ನಾವು ಹಾಗೂ ಉಪಾಧ್ಯಕ್ಷರು ಭೇಟಿ ನೀಡಿ ಕಳಪೆ ಸಾಮಗ್ರಿಗಳನ್ನು ತಮಗೊಪ್ಪಿಸಲಾಗಿದೆ. ಹೀಗಿದ್ದರೂ ಪರಿಸ್ಥಿತಿ ಸುಧಾರಣೆಯಾಗುತ್ತಿಲ್ಲ. ಜತೆಗೆ ಇಲಾಖಾ ಕಾರ್ಯಕ್ರಮಗಳನ್ನು ಸರಿಯಾಗಿ ನಿರ್ವಹಿಸಲಿಕ್ಕಾಗುತ್ತಿಲ್ಲ. ಆದ್ದರಿಂದ ನೀವು ಕೆಲಸ ಮಾಡಲು ಅರ್ಹರಲ್ಲ. ಇಲಾಖೆಯಿಂದ ಬಿಡುಗಡೆ ಹೊಂದುವುದು ಸೂಕ್ತ ಎಂದು ಅಧ್ಯಕ್ಷರು ಹಾಗೂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ತರಾಟೆಗೆ ತೆಗೆದುಕೊಂಡರು.

Advertisement

ಕಳಪೆ ಕಾಮಗಾರಿ: ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ದೌಲತರಾವ್‌ ಪಾಟೀಲ ಮಾತನಾಡಿ, ಮಡಕಿ ಮತ್ತು ಕುಂದಗೋಳ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಸಿಇಒ ಡಾ| ಪಿ. ರಾಜಾ ಅವರು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ಸೂಚಿಸಿದರು.

ಇದೇ ವೇಳೆ ಲೋಕೋಪಯೋಗಿ ಇಲಾಖೆ ನಡೆಸುತ್ತಿರುವ ಎಸ್‌ಸಿಪಿ-ಟಿಎಸ್‌ಪಿ ಯೋಜನೆ ಕಾಮಗಾರಿಗಳಿಂದ ಹರಿಜನ ಮತ್ತು ಗಿರಿಜನರು ಹಾಗೂ ಈ ಸಮುದಾಯದ ಗುತ್ತಿಗೆದಾರರಿಗೆ ಯಾವುದೇ ಅನುಕೂಲವಾಗುತ್ತಿಲ್ಲ. ಪ್ಯಾಕೇಜ್‌ ಟೆಂಡರ್‌ ನಡೆಸಬೇಕು ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಪ್ಪ ಕೂಡಲಗಿ ವಿಷಾದ ವ್ಯಕ್ತಪಡಿಸಿದರು.

50 ಲಕ್ಷ ರೂ. ಒಳಗಿನ ಕಾಮಗಾರಿಗಳಿಗೆ ಮಾತ್ರ ಗುತ್ತಿಗೆ ಕುರಿತ ಮೀಸಲಾತಿ ನೀತಿ ಅನ್ವಯವಾಗಲಿದೆ. ಶೇಕಡಾ 25 ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹಾಗೂ ಉಳಿದ ಶೇ.75 ಕಾಮಗಾರಿಗಳ ಗುತ್ತಿಗೆಯನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗುವುದು. ಸರ್ಕಾರದ ಆದೇಶದ ಪ್ರಕಾರವೇ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್‌ ಅಮೀನ್‌ ಮುಖ್ತಾರ್‌ ಸ್ಪಷ್ಟಪಡಿಸಿದರು.

ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ಧು ಸಿರಸಗಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. ಜಿಪಂ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next