Advertisement

ಕಿಯೋಸ್ಕ್ ಕೇಂದ್ರ ಆರಂಭ ವಿಳಂಬ: ಬೇಸರ

04:42 PM Jun 26, 2019 | Naveen |

ಕಲಬುರಗಿ: ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸಲಾದ ಕಿಯೋಸ್ಕ್ ಕೇಂದ್ರಗಳ ಇನ್ನೂ ಸೇವೆ ಆರಂಭಿಸದ ಅಧಿಕಾರಿಗಳ ವಿರುದ್ಧ ಹೈ.ಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಗ್ರಂಥಾಲಯಾಧಿಕಾರಿಗಳು ಮತ್ತು ಬಿಎಸ್‌ಎನ್‌ಎಲ್ ಅಧಿಕಾರಿಗಳೊಂದಿಗೆ ಕಿಯೋಸ್ಕ್ ಕೇಂದ್ರದ ಪ್ರಗತಿ ಕುರಿತಂತೆ ಪರಿಶೀಲನಾ ಸಭೆ ನಡೆಸಿದರು.

ಹೈದ್ರಾಬಾದ ಕರ್ನಾಟಕ ಭಾಗದ ಕಲಬುರಗಿ, ಬೀದರ್‌, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಒಟ್ಟು 70 ಗ್ರಾಮ ಪಂಚಾಯಿತಿಯ ಕೇಂದ್ರಸ್ಥಾನದ ಗ್ರಂಥಾಲಯಗಳಲ್ಲಿ ಪ್ರಾಯೋಗಿಕವಾಗಿ ಕಿಯೋಸ್ಕ್ ಕೇಂದ್ರ ಸ್ಥಾಪಿಸಿ, ಪಹಣಿ ಸೇರಿದಂತೆ ಅಂತರ್ಜಾಲ ಆಧಾರಿತ ಸೇವೆಗಳನ್ನು ನೀಡಲು ಸಹಕಾರಿಯಾಗುತ್ತದೆ. ಆದರೆ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇದುವರೆಗೆ ತಲಾ ಆರು ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದ ಗ್ರಂಥಾಲಯಗಳಲ್ಲಿ ಡಿಜಿಟಲ್ ಕಿಯೋಸ್ಕ್ ಕೇಂದ್ರಗಳು ಸ್ಥಾಪಿಸಲಾಗಿದ್ದರೂ ಸಹ ಬ್ರಾಡ್‌ಬ್ಯಾಂಡ್‌ ಸಂಪರ್ಕ ಇಲ್ಲದ ಕಾರಣ ಸೇವೆ ಆರಂಭಿಸದಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ಕಿಯೋಸ್ಕ್ ಕೇಂದ್ರಗಳಿಗೆ ಜು.6ರೊಳಗೆ ಬ್ರಾಡ್‌ಬ್ಯಾಂಡ್‌ ಸಂಪರ್ಕ ಒದಗಿಸಬೇಕು ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದ ಅವರು, ಕರ್ತವ್ಯ ನಿರ್ವಹಣೆ ಲೋಪದ ಮೇಲೆ ಕಲಬುರಗಿ ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿಗೆ ನೋಟಿಸ್‌ ಜಾರಿಗೊಳಿಸುವಂತೆ ಸೂಚನೆ ನೀಡಿದರು.

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಕಿಯೋಸ್ಕ್ ಕೇಂದ್ರಗಳನ್ನು ಕೂಡಲೇ ಸ್ಥಳೀಯ ಜನಪ್ರತಿನಿಧಿಗಳಿಂದ ಉದ್ಘಾಟಿಸಿ ಸಾರ್ವಜನಿಕರಿಗೆ ಸೇವೆ ಒದಗಿಸಬೇಕು. ಸಣ್ಣ-ಪುಟ್ಟ ತಾಂತ್ರಿಕ ಲೋಪದೋಷಗಳಿದ್ದಲ್ಲಿ ಅದನ್ನು ಸರಿಪಡಿಸಿ ಎಂದು ಅನುಷ್ಠಾನ ಏಜೆನ್ಸಿಯವರಿಗೆ ನಿರ್ದೇಶನ ನೀಡಿದರು.

Advertisement

ಕೇಂದ್ರಗಳ ಆರಂಭದ ವೆಚ್ಚ ಭರಿಸಲು ಮಂಡಳಿಯಿಂದ ಪ್ರತಿ ಕಿಯೋಸ್ಕ್ ಕೇಂದ್ರಕ್ಕೆ 8ರಿಂದ 10 ಸಾವಿರ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಇದನ್ನು ಬಳಸಿಕೊಂಡು ಸೇವೆ ನೀಡಲು ಮುಂದಾಗಿ ಎಂದು ತಾಕೀತು ಮಾಡಿದರು.

ಕಿಯೋಸ್ಕ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ಮತ್ತು ಸೇವೆ ನೀಡಲು ಗ್ರಂಥಾಲಯ ಮೇಲ್ವಿಚಾರಕರಿಗೆ ಒಂದು ಹಂತದ ತರಬೇತಿ ನೀಡಲಾಗಿದ್ದು, ಅದು ಸಾಕಾಗುವುದಿಲ್ಲ. ಎರಡನೇ ಹಂತದ ತರಬೇತಿಯನ್ನು ಇದೇ ವಾರದಲ್ಲಿ ನೀಡಬೇಕು. ಕಿಯೋಸ್ಕ್ ಕೇಂದ್ರ ಆರಂಭದ ನಂತರ ಒಂದು ವರ್ಷದ ವರೆಗೆ ಬ್ರಾಡ್‌ಬ್ಯಾಂಡ್‌ ಶುಲ್ಕದ ವೆಚ್ಚವನ್ನು ಸಹ ಮಂಡಳಿಯೇ ಪಾವತಿಸಲಾಗುವುದು. ತದನಂತರದ ವೆಚ್ಚವನ್ನು ಆಯಾ ಗ್ರಾಪಂಗಳು ಭರಿಸಬೇಕಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next