ಕಲಬುರಗಿ: ಮೂರು ಸದಸ್ಯರ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಪೂರ್ಣ ಪೀಠವು ಮಾನವ ಹಕ್ಕುಗಳ ಪ್ರಕರಣಗಳನ್ನು ದೂರು ಆಲಿಸಿದ ಮೂರು ತಿಂಗಳೊಳಗೆ ವಿಲೇವಾರಿ ಮಾಡುವ ಉದ್ದೇಶ ಹೊಂದಿದ್ದು, ಮುಂದಿನ ದಿನಗಳಲ್ಲಿ ಕಲಬುರಗಿ, ಬೀದರ, ಧಾರವಾಡ, ಬೆಳಗಾವಿದಂತಹ ಜಿಲ್ಲಾ ಕೇಂದ್ರಗಳಲ್ಲಿ ಬಾಕಿ ಪ್ರಕರಣಗಳ ವಿಚಾರಣೆ ನಡೆಸಿ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕುಮಾರ ದತ್ತಾ ತಿಳಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಮಾತನಾಡಿದರು. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ದಾಖಲಾದ ಮೂರು ತಿಂಗಳೊಳಗೆ ವಿಲೇವಾರಿ ಮಾಡುವ ಆಶಯವನ್ನು ಆಯೋಗವು ಹೊಂದಿದೆ. ಪ್ರಕರಣ ದಾಖಲಾದ ನಂತರ ಸಂಬಂಧಿಸಿದ ಇಲಾಖೆಗಳಿಗೆ ನೋಟಿಸ್ ನೀಡಿ ಉತ್ತರ ಪಡೆಯಲಾಗುತ್ತದೆ. ಉತ್ತರ ಬಾರದಿದ್ದಾಗ ನೆನಪೋಲೆ, ಸಮನ್ಸ್ ನೀಡಲಾಗುತ್ತೆ. ಸಮನ್ಸ್ ನೀಡಿದ ನಂತರ ಅಧಿಕಾರಿಗಳು ಸ್ಪಂದಿಸುತ್ತಿದ್ದು, ಇದು ಆಡಳಿತದ ವೈಖರಿಯಲ್ಲ. ಅರ್ಜಿದಾರರಿಗೆ ನ್ಯಾಯ ವಿಳಂಬವಾದರೆ ವ್ಯರ್ಥವಾದಂತೆ ಎಂದರು.
ಸಮನ್ಸ್‌ಗೆ ಕಾಯದೆ ನೋಟಿಸ್ ಪಡೆದ ಕೂಡಲೇ ಉತ್ತರ ನೀಡುವ ಪ್ರವೃತ್ತಿ ಅಧಿಕಾರಿಗಳು ಬೆಳೆಸಿಕೊಳ್ಳಬೇಕು. ಬೇರೆ ಜಿಲ್ಲೆಗೆ ಹೋಲಿಸಿದರೆ ಕಲಬುರಗಿಯಲ್ಲಿ ಹೊಸದಾಗಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿಲ್ಲ. ಆದರೆ 5-6 ವರ್ಷಗಳ ಹಿಂದಿನ ಪ್ರಕರಣಗಳಿಗೆ ಮುಕ್ತಿ ನೀಡಬೇಕಾಗಿದೆ ಎಂದರು.
ಕಲಬುರಗಿ ನಗರದಲ್ಲಿ ಹಂದಿಗಳ ಹಾವಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂದಿ ಸಾಕುವ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ತೆಗೆದುಕೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ಕಳುಹಿಸಿಕೊಡಿ ಎಂದು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರಿಗೆ ರೂಪಕುಮಾರ ದತ್ತಾ ನಿರ್ದೇಶನ ನೀಡಿದರು. ರಾಜ್ಯ ಮಹಿಳಾ ವಸತಿ ನಿಲಯದ ಮಗು ಸಾವನಪ್ಪಿದ ಪ್ರಕರಣ ಕುರಿತಂತೆ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಏನಾದರು ಕ್ರಮ ತೆಗೆದುಕೊಳ್ಳಲಾಗಿದೆಯೇ ಎಂದು ರೂಪಕುಮಾರ ದತ್ತಾ ಅಧಿಕಾರಿಗಳಿಗೆ ವಿವರಣೆ ಕೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಜಿ.ಎಸ್. ಗುಣಾರಿ ಮಾತನಾಡಿ, ಕಡಿಮೆ ತೂಕವಿದ್ದ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದ್ದು, ಇದರಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ಇಲ್ಲ ಎಂದರು. ಜೇವರ್ಗಿ ತಾಲೂಕಿನ ಬಿರಾಳ ಗ್ರಾಮದಲ್ಲಿ ಬಾವಿಯ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡ ಪ್ರಕರಣ ಕುರಿತಂತೆ ಮಾತನಾಡಿದ ಆಯೋಗದ ಸದಸ್ಯರು, ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಎಲ್ಲಿಯೂ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಶರತ್ ಬಿ., ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಡಿ.ಸಿ.ಪಿ. ಕಿಶೋರ ಬಾಬು, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ.ರಾಜಾ, ಹೆಚ್ಚುವರಿ ಜಿಲ್ಲಾ ಧಿಕಾರಿ ಡಾ| ಶಂಕರ ವಣಿಕ್ಯಾಳ್, ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ಗೋಪಾಲಕೃಷ್ಣ ಬಿ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.