Advertisement

ತಗ್ಗಿದ ಬಿಸಿಲು: 10 ರಿಂದ ಶಾಲೆ ಆರಂಭ?

09:47 AM Jun 07, 2019 | Naveen |

ರಂಗಪ್ಪ ಗಧಾರ
ಕಲಬುರಗಿ:
ಜಿಲ್ಲೆಯಲ್ಲಿ ಬಿರು ಬಿಸಿಲಿನಿಂದಾಗಿ ಜೂ.14ಕ್ಕೆ ಮುಂದೂಡಲ್ಪಟ್ಟಿರುವ ಪ್ರಾಥಮಿಕ ಶಾಲೆಗಳ ಪ್ರಾರಂಭೋತ್ಸವವನ್ನು ಜೂ.10ರಂದೇ ಆರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಮಳೆ ಸುರಿದು ವಾತಾವರಣ ಸ್ಪಲ್ಪ ಮಟ್ಟಿಗೆ ತಂಪಾಗಿರುವುದರಿಂದ ಇಂತಹದೊಂದು ಚರ್ಚೆ ಶುರುವಾಗಿದೆ.

Advertisement

ರಾಜ್ಯಾದ್ಯಂತ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳು ಮೇ 29ರಿಂದಲೇ ಪ್ರಾರಂಭಗೊಂಡಿವೆ. ಆದರೆ, ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ ಕಾರಣದಿಂದಾಗಿ ಪ್ರಾಥಮಿಕಶಾಲೆಗಳ ಬೇಸಿಗೆ ರಜೆಯನ್ನುಜೂನ್‌ 14ರ ವರೆಗೆ ವಿಸ್ತರಿಸಲಾಗಿದೆ. ಮೇ 29ರಂದು ಪ್ರೌಢ ಶಾಲೆಗಳು ಮಾತ್ರ ಆರಂಭಗೊಂಡಿವೆ.

ಮೇ ತಿಂಗಳಲ್ಲಿ ಗರಿಷ್ಠ 45 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಆದ್ದರಿಂದ ಬಿಸಿಲಿನ ಪ್ರಖರತೆ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಅಧಿಕಾರಿಗಳು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಬೇಸಿಗೆ ರಜೆ ವಿಸ್ತರಣೆಗೆ ಮನವಿ ಮಾಡಿದ್ದರು.

ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳ ಆರಂಭ ಮುಂದೂಡುವಂತೆ ಕೋರಿ ಜಿಲ್ಲಾಧಿಕಾರಿಗಳು ಮೇ 25ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಅಲ್ಲದೇ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವೂ ಶಾಲೆಗಳ ರಜೆ ವಿಸ್ತರಿಸುವಂತೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಮೇ 28ರಂದು ಪ್ರಾಥಮಿಕ ಶಾಲೆಗಳ ಪ್ರಾರಂಭೋತ್ಸವ ಮುಂದೂಡಿ ಆದೇಶ ಹೊರಡಿಸಿತ್ತು.

ಎರಡು ವಾರಗಳ ಕಾಲ ಶಾಲಾ ತರಗತಿಗಳ ಆರಂಭದ ಕೊರತೆ ದಿನಗಳನ್ನು ಪ್ರತಿ ಶನಿವಾರ ಪೂರ್ಣದಿನವಾಗಿ ಉಪಯೋಗಿಸಿಕೊಳ್ಳುವುದು ಹಾಗೂ ರಜಾ ಅವಧಿಯಲ್ಲಿ ಸರಿದೂಗಿಸಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿತ್ತು.

Advertisement

ಮಳೆ ತಂದ ತಂಪು: ಕಳೆದ ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ಮಳೆಯಾದ ಪರಿಣಾಮ ಉಷ್ಣಾಂಶದಲ್ಲಿ ಕಡಿಮೆಯಾಗಿದ್ದು, ಬಿಸಿಲಿನ ಧಗೆಯಲ್ಲಿ ಕೊಂಚ ಕಡಿಮೆಯಾಗಿದೆ. ಶಾಲಾ ಪ್ರಾರಂಭೋತ್ಸವವಾಗಬೇಕಿದ್ದ ಮೇ 29ರಂದು ಗರಿಷ್ಠ 44.7 ಡಿಗ್ರಿ ಸೆಲಿಯಸ್‌ ತಾಪ ಇತ್ತು. ಕನಿಷ್ಠ ಉಷ್ಣಾಂಶ 30.2 ಡಿಗ್ರಿಯಷ್ಟು ದಾಖಲಾಗಿತ್ತು. ಇದೀಗ ಗರಿಷ್ಠ 41 ಡಿಗ್ರಿ ಉಷ್ಣಾಂಶ ಹಾಗೂ ಕನಿಷ್ಠ 27 ಡಿಗ್ರಿ ಸೆಲಿಯಸ್‌ ಉಷ್ಣಾಂಶ ಇದೆ. ಜತೆಗೆ ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ಸ್ವಲ್ಪ ತಂಪಿನ ವಾತಾವರಣ ಇದೆ.

ಆದ್ದರಿಂದ ಪ್ರಾಥಮಿಕ ಶಾಲೆಗಳ ಪ್ರಾರಂಭೋತ್ಸವವನ್ನು ಜೂ.14ರ ಬದಲಿಗೆ ಮುಂಚಿತವಾಗಿ ಆರಂಭಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ಕಳೆದಮೂರು ದಿನಗಳಿಂದ ಚಿಂತನೆ ನಡೆಯುತ್ತಿದೆ. ಈ ನಡುವೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಹ ಜೂ.14ರ ಬದಲು ಜೂನ್‌ 10ರಂದೇ ಶಾಲೆಗಳು ಆರಂಭಿಸುವಂತೆ ಡಿಡಿಪಿಐ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದೆ.

ಶಿಕ್ಷಕರ ಸಂಘ ಪತ್ರ
ಮೇ 29ಕ್ಕೂ ಮುನ್ನ ದಾಖಲೆ ಪ್ರಮಾಣದಲ್ಲಿ ಉಷ್ಠಾಂಶ ಇತ್ತು. ಇದೀಗ ಮಳೆಯಿಂದಾಗಿ ತಾಪಮಾನದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದ್ದರಿಂದ ಜೂ.14ರ ಬದಲಿಗೆ ಜೂ.10ರಂದು ಪ್ರಾಥಮಿಕ ಶಾಲೆಗಳನ್ನು ಸಹ ಪ್ರಾರಂಭಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.
•ಮಲ್ಲಯ್ಯ ಗುತ್ತೇದಾರ,
ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಮುಂಚಿತ ಆರಂಭದ ಲಾಭವೇನು?
ಪ್ರಾಥಮಿಕ ಶಾಲೆಗಳ ಪ್ರಾರಂಭೋತ್ಸವವನ್ನು ಜೂ.14ಕ್ಕಿಂತ ಮುಂಚಿತವಾಗಿ ಆರಂಭಿಸುವುದರಿಂದ ತರಗತಿಗಳು ಬೇಗ ಪ್ರಾರಂಭಿಸಿದಂತಾಗುತ್ತದೆ. ಅಲ್ಲದೇ, ತರಗತಿಗಳ ಕೊರತೆ ದಿನಗಳನ್ನು ಇದು ಕಡಿಮೆ ಮಾಡಲಿದೆ. ಶನಿವಾರ ಪೂರ್ಣದಿನ ಮತ್ತು ರಜಾ ಅವಧಿಯಲ್ಲಿ ತರಗತಿಗಳು ನಡೆಸುವುದು ತಪ್ಪಿಸಬಹುದಾಗಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next