Advertisement

‘ಕಿಸಾನ್‌’ಗೆ ಎರಡನೇ ಕಂತಿನ ಸಮ್ಮಾನ್‌ ನಿಧಿ

02:01 PM Aug 10, 2019 | Naveen |

ರಂಗಪ್ಪ ಗಧಾರ
ಕಲಬುರಗಿ:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಎರಡನೇ ಕಂತಿನ ಹಣ ಜಮೆ ಪ್ರಕ್ರಿಯೆ ಆರಂಭವಾಗಿದ್ದು, ಇದುವೆರೆಗೂ ಹೈದ್ರಾಬಾದ್‌-ಕರ್ನಾಟಕ ಭಾಗದ ಆರು ಜಿಲ್ಲೆಗಳ ಪೈಕಿ ರಾಯಚೂರಿನಲ್ಲಿ ಅತಿ ಹೆಚ್ಚು ರೈತರ ಖಾತೆಗೆ ಹಣ ಜಮಾ ಆಗಿದೆ.

Advertisement

ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ 2,70,081 ರೈತರು ಹೆಸರು ನೋಂದಾಯಿಸಿದ್ದು, ಇದುವರೆಗೆ ಕೇಂದ್ರ ಸರ್ಕಾರ 1,50,601 ರೈತರನ್ನು ಫಲಾನುಭವಿಗಳೆಂದು ಘೋಷಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಮೊದಲ ಕಂತಿನಲ್ಲಿ 97,410 ರೈತರ ಖಾತೆಗೆ ಎರಡು ಸಾವಿರ ರೂ. ಜಮೆ ಆಗಿದೆ. ಎರಡನೇ ಕಂತಿನಲ್ಲಿ ಇದುವರೆಗೆ 5,350 ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗಿದೆ.

ರಾಯಚೂರು ಜಿಲ್ಲೆಯಲ್ಲಿ 2,08,402 ರೈತರು ಹೆಸರು ನೋಂದಾಯಿಸಿಕೊಂಡಿದ್ದು, 1,39,805 ರೈತರನ್ನು ಫಲಾನುಭವಿಗಳೆಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದರಲ್ಲಿ ಮೊದಲ ಕಂತಿನ ಎರಡು ಸಾವಿರ ರೂ. 1,17,455 ರೈತರ ಖಾತೆಗೆ ಜಮೆಯಾಗಿದೆ. ಎರಡನೇ ಕಂತಿನಲ್ಲಿ 20,946 ರೈತರಿಗೆ ಕಿಸಾನ್‌ ಸಮ್ಮಾನ್‌ ನಿಧಿ ಜಮೆ ಆಗಿದೆ.

ಅದೇ ರೀತಿ ಬಳ್ಳಾರಿ ಜಿಲ್ಲೆಯಲ್ಲಿ 2,07,419, ಬೀದರ್‌ ಜಿಲ್ಲೆಯಲ್ಲಿ 1,83,062, ಕೊಪ್ಪಳ ಜಿಲ್ಲೆಯಲ್ಲಿ 1,53,073 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 1,22,993 ರೈತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಕ್ರಮವಾಗಿ ಬಳ್ಳಾರಿ-1,22,384, ಬೀದರ್‌-1,27,483 ಕೊಪ್ಪಳ-1,19,669 ಮತ್ತು ಯಾದಗಿರಿ ಜಿಲ್ಲೆಯ 79,664 ರೈತರನ್ನು ಫಲಾನುಭವಿಗಳೆಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಬಳ್ಳಾರಿಯಲ್ಲಿ ಮೊದಲ ಕಂತು 62,018, ಎರಡನೇ ಕಂತು 8,865, ಬೀದರ್‌ ಜಿಲ್ಲೆಯಲ್ಲಿ ಮೊದಲ ಕಂತು 95,041, ಎರಡನೇ ಕಂತು 2,155, ಕೊಪ್ಪಳ ಜಿಲ್ಲೆಯಲ್ಲಿ 1,03,617, ಎರಡನೇ ಕಂತು 12,365 ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಮೊದಲ ಕಂತು 63,914, ಎರಡನೇ ಕಂತಿನಲ್ಲಿ 9,006 ರೈತರ ಖಾತೆಗೆ ನೇರವಾಗಿ ತಲಾ ಎರಡು ಸಾವಿರ ರೂ. ಜಮೆಯಾಗಿದೆ. ಇದರಲ್ಲಿ ಕೆಲ ರೈತರಿಗೆ ಎರಡೂ ಕಂತಿನ ನಾಲ್ಕು ಸಾವಿರ ರೂ. ಪಾವತಿಯಾಗಿದೆ.

Advertisement

ಫಲಾನುಭವಿ ಯಾರು?: ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಹಾಗೂ ಅತಿ ಸಣ್ಣ ರೈತರು ಕಿಸಾನ್‌ ಸಮ್ಮಾನ್‌ ಯೋಜನೆ ಫಲಾನುಭವಿಗಳಾಗಿದ್ದಾರೆ. ಸಾಂವಿಧಾನಿಕ ಹುದ್ದೆಗಳನ್ನು ಹೊಂದಿದವರು, ಹತ್ತು ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುವ ಸರ್ಕಾರಿ ನೌಕಕರು, ಪಿಂಚಣಿದಾರರು ಮತ್ತು ಡಾಕ್ಟರ್‌, ಎಂಜಿನಿಯರ್‌, ವಕೀಲರು ಮತ್ತಿತರ ವೃತ್ತಿಪರ ಕುಂಟುಂಬದವರು ಯೋಜನೆ ಫಲಾನುಭವಿಗಳು ಅಲ್ಲ.

ಪ್ರಕ್ರಿಯೆ ಹೇಗೆ?: ರೈತ ಸಂಪರ್ಕ ಕೇಂದ್ರ, ಅಟಲ್ ಜನಸ್ನೇಹಿ ಕಚೇರಿಗಳಿಗೆ ಅರ್ಹ ರೈತರು ಖುದ್ದು ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಅರ್ಜಿ ನಮೂನೆ-ಸಿ ಹಾಗೂ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಅರ್ಜಿ ನಮೂನೆ-ಡಿಯನ್ನು ಪಡೆದು ಬ್ಯಾಂಕ್‌ ಖಾತೆ ಸಂಖ್ಯೆ, ಆಧಾರ್‌ ಸಂಖ್ಯೆಯೊಳಗೊಂಡ ಸ್ವ-ವಿವರಗಳನ್ನು ರೈತರು ಸಲ್ಲಿಸಬೇಕು.

ಯೋಜನೆ ತ್ವರಿತವಾಗಿ ಅನುಷ್ಠಾನ ಗೊಳಿಸಲು ಕೃಷಿಯೊಂದಿಗೆ ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಕಿಸಾನ್‌ ಸಮ್ಮಾನ್‌ ಯೋಜನೆಗೆಂದೇ ಫಾರ್ಮರ್‌ ರಿಜಿಸ್ಟ್ರೇಷನ್‌ ಆ್ಯಂಡ್‌ ಯುನಿಫೈಡ್‌ ಬೆನಿಫಿಶರಿ (ಪ್ರೂಟ್ಸ್‌) ಎನ್ನುವ ಆನ್‌ಲೈನ್‌ ತಂತ್ರಾಂಶ (ವೆಬ್‌ಸೈಟ್) ಅಭಿವೃದ್ಧಿ ಪಡಿಸಿದ್ದು, ಅಧಿಕಾರಿಗಳು ಈ ವೆಬ್‌ಸೈಟ್‌ನಲ್ಲಿ ರೈತರ ಮಾಹಿತಿಯನ್ನು ಅಳವಡಿಸುತ್ತಾರೆ. ಅಲ್ಲಿಂದ ನೇರವಾಗಿ ತಹಶೀಲ್ದಾರ್‌ ಪರಿಶೀಲಿಸಿ ಅರ್ಜಿಗೆ ಅನುಮೋದನೆ ನೀಡಿ ರಾಜ್ಯ ಮಟ್ಟಕ್ಕೆ ರವಾನಿಸುತ್ತಾರೆ.

ಕೇಂದ್ರ ಕೃಷಿ ಇಲಾಖೆ ‘ಪಿಎಂ-ಕಿಸಾನ್‌’ ಎನ್ನುವ ವೆಬ್‌ಸೈಟ್ ಅಭಿವೃದ್ಧಿ ಪಡಿಸಿದ್ದು, ಅಲ್ಲಿ ರಾಜ್ಯಗಳಿಂದ ಬರುವ ಫಲಾನುಭವಿ ರೈತರ ಸಂಖ್ಯೆ ಮತ್ತು ಯಾವ ಕಂತಿನಲ್ಲಿ ಎಷ್ಟು ರೈತರಿಗೆ ಹಣ ಜಮೆಯಾಗಿದೆ ಎಂಬುವುದನ್ನು ಪ್ರಕಟಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next