Advertisement

ಪಿಂಚಣಿ ಸಮಸ್ಯೆ ಬಗೆಹರಿಸಿ:ಡಿಸಿ

10:03 AM Aug 24, 2019 | Naveen |

ಕಲಬುರಗಿ: ರಾಜ್ಯ ಹಾಗೂ ಕೇಂದ್ರ ನಿವೃತ್ತಿ ನೌಕರರ ಪಿಂಚಣಿ ಸಮಸ್ಯೆ ಬಗೆಹರಿಸಲು ಶುಕ್ರವಾರ ನಡೆದ ಪಿಂಚಣಿ ಅದಾಲತ್‌ಗಳಲ್ಲಿ ಸಲ್ಲಿಕೆಯಾದ 54 ಅರ್ಜಿಗಳ ಪೈಕಿ ನಾಲ್ಕು ಪ್ರಕರಣಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿ, 45 ಪ್ರಕರಣಗಳನ್ನು ಒಂದು ವಾರದೊಳಗೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಬ್ಯಾಂಕ್‌ ಮತ್ತು ಖಜಾನಾಧಿಕಾರಿಗೆ ಆದೇಶ ಹೊರಡಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆ ಸಹಯೋಗದಲ್ಲಿ ಕೇಂದ್ರ ಹಾಗೂ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಪಿಂಚಣಿ ಅದಾಲತ್‌ ಉದ್ಘಾಟಿಸಿದ ನಂತರ ನಡೆದ ಪಿಂಚಣಿದಾರರ ಅಹವಾಲು ಸ್ವೀಕರಿಸಿದ ಅವರು, ಅದಾಲತ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಐದು ಅರ್ಜಿಗಳು ತಿರಸ್ಕೃತವಾಗಿವೆ ಎಂದು ತಿಳಿಸಿದರು.

ನಗರದ ಪ್ರಗತಿ ಕಾಲೋನಿ ನಿವಾಸಿ ಮಡಿವಾಳಪ್ಪ ಅವರು ಪರಿಷ್ಕೃತ ವೇತನ ಶ್ರೇಣಿಯಂತೆ ತಮಗೆ ಬ್ಯಾಂಕಿನಿಂದ ಪಿಂಚಣಿ ಪಾವತಿಸುತ್ತಿಲ್ಲ ಎಂದು ದೂರಿದರು. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಜಿಲ್ಲಾಧಿಕಾರಿಗಳು ವಾರದೊಳಗೆ ಪರಿಷ್ಕೃತ ವೇತನ ಅನ್ವಯ ಪಿಂಚಣಿ ಪಾವತಿಸುವಂತೆ ಎಸ್‌ಬಿಐ ಓಂ ನಗರ ಶಾಖೆ ವ್ಯವಸ್ಥಾಪಕರಿಗೆ ನಿರ್ದೇಶಿಸಿದರು.

ಏಪ್ರಿಲ್ ಮತ್ತು ಮೇ-2019 ತಿಂಗಳ ಪಿಂಚಣಿ ಹಣ ಇನ್ನು ಕೈಸೇರಿಲ್ಲ ಎಂಬ ನಗರದ ಟಿಪ್ಪು ಸಲ್ತಾನ್‌ ಚೌಕ್‌ ನಿವಾಸಿ ಸೈಯ್ಯದ್‌ ಯೂಸೂಫ್‌ ಅಲಿ ಅವರ ಅರ್ಜಿ ಇತ್ಯರ್ಥಗೊಳಿಸಿ ಒಂದು ವಾರ ಕಾಲಮಿತಿ ನೀಡಿ, ತಡೆ ಹಿಡಿಯಲಾದ ಹಣ ಪಿಂಚಣಿದಾರರಿಗೆ ಪಾವತಿಸುವಂತೆ ಸಿಂಡಿಕೇಟ್ ಬ್ಯಾಂಕಿನ ಪ್ರಾದೇಶಿಕ ಅಧಿಕಾರಿಗಳಿಗೆ ಸೂಚಿಸಿದರು.

ಆಳಂದ ತಾಲೂಕಿನ ವಿ.ಕೆ. ಸಲಗರ ಗ್ರಾಮದ ಮಲ್ಲಪ್ಪ ಪೀರಪ್ಪ ಅವರು 15 ವರ್ಷ ಕಳೆದರು ಕಮುಟೇಷನ್‌ ರಿಕವರಿ ಹಣ ಕಡಿತ ಬ್ಯಾಂಕಿನಿಂದ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಕೆ.ಸಿ.ಎಸ್‌.ಆರ್‌. 376 ನಿಯಮದ ಅನ್ವಯ 15 ವರ್ಷಗಳ ನಂತರ ಕಡಿತ ನಿಲ್ಲಿಸಬೇಕಾಗುತ್ತದೆ. ಹೀಗಾಗಿ ಹೆಚ್ಚುವರಿ ಕಡಿತ ಮಾಡಲಾದ ಮೊತ್ತವನ್ನು ಪಿಂಚಣಿದಾರರಿಗೆ ಪಾವತಿಸುವಂತೆೆ ಎಸ್‌ಬಿಐ ಆಳಂದ ವ್ಯವಸ್ಥಾಪಕರಿಗೆ ಆದೇಶಿಸಿದರು.ಆಳಂದ ನಿವಾಸಿ ವಿಮಲಾಬಾಯಿ ಪಂಡಿತ ಅವರಿಗೆ 01 ಏಪ್ರಿಲ್ 2018ರಿಂದ ಜಾರಿಗೆ ಬರುವಂತೆ ಪರಿಷ್ಕೃತ ಪಿಂಚಣಿ ಪಾವತಿಸಬೇಕು ಎಂದು ತಿಳಿಸಿದರು.

Advertisement

ಅದಾಲತ್‌ನಲ್ಲಿ ಬಹುತೇಕ ಪಿಂಚಣಿದಾರರು ತಮಗೆ ಸಕಾಲಕ್ಕೆ ಪಿಂಚಣಿ ಪಾವತಿಯಾಗುತ್ತಿಲ್ಲ, ಪಿಂಚಣಿಯಲ್ಲಿ ಅನಗತ್ಯ ಹಣ ಕಡಿತಗೊಳಿಸಲಾಗುತ್ತಿದೆ. 15 ವರ್ಷ ಕಳೆದರೂ ಕಮುಟೇಷನ್‌ ರಿಕವರಿ ಹಣ ನಿರಂತರವಾಗಿ ಕಡಿತ ಮಾಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಜಿಪಂ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಡಾ| ಪಿ. ರಾಜಾ ಮಾತನಾಡಿ, ನಿವೃತ್ತ ನೌಕರರ ಪಿಂಚಣಿ ಸಮಸ್ಯೆಗಳನ್ನು ಅಧಿಕಾರಿಗಳು ಕಾಲಮಿತಿಯಲ್ಲಿ ಬಗೆಹರಿಸಿದಲ್ಲಿ ಹಿರಿಯ ಜೀವಿಗಳ ಅಲೆದಾಟ ತಡೆಯಬಹುದಾಗಿದೆ ಎಂದರು.

ಅದಾಲತ್‌ನಲ್ಲಿ ಲೀಡ್‌ ಬ್ಯಾಂಕ್‌ ಚೀಫ್‌ ಮ್ಯಾನೇಜರ್‌ ಸಿ.ಹೆಚ್. ಹವಾಲ್ದಾರ, ಜಿಲ್ಲಾ ಖಜಾನಾಧಿಕಾರಿಗಳಾದ ವಿರೂಪಾಕ್ಷಪ್ಪ, ದತ್ತಪ್ಪ ಗೊಬ್ಬೂರ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆ ಸಹಾಯಕ ನಿರ್ದೇಶಕ ಎ.ಬಿ. ಭಜಂತ್ರಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಪಿಂಚಣಿದಾರರು ಭಾಗವಹಿಸಿದ್ದರು.

ನಿವೃತ್ತರಾದ ನೌಕರರಿಗೆ ವಯಸ್ಸಾಗಿರುವ ಕಾರಣ ಪಿಂಚಣಿ ಸಮಸ್ಯೆಗಳಿಗೆ ಬ್ಯಾಂಕ್‌, ಕಚೇರಿ ಎಂದು ಅಲೆದಾಡಲು ಸಾಧ್ಯವಾಗುವುದಿಲ್ಲ. ಇದನ್ನು ಅರಿತು ಬ್ಯಾಂಕ್‌, ಖಜಾನೆ ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಿ, ಒಂದೇ ವೇದಿಕೆಯಲ್ಲಿ ಪಿಂಚಣಿ ಸಮಸ್ಯೆ ಬಗೆಹರಿಸಲು ಶುಕ್ರವಾರ ರಾಷ್ಟ್ರಾದಾದ್ಯಂತ ಪಿಂಚಣಿ ಅದಾಲತ್‌ ನಡೆಸಲಾಗುತ್ತಿದೆ. ಬ್ಯಾಂಕ್‌, ಖಜಾನೆ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು, ಸಮಸ್ಯೆ ಇತ್ಯರ್ಥ ಪಡಿಸಲಾಗುವುದು.
ಆರ್‌. ವೆಂಕಟೇಶಕುಮಾರ,
ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next