ಕಲಬುರಗಿ: ಬೆಲೆ ಸ್ಥಿರೀಕರಣ ನಿಧಿ ಬೆಂಬಲ ಬೆಲೆ (ಪಿಎಸ್‌ಎಫ್) ಯೋಜನೆ ಅಡಿ ಮತ್ತೆ 10 ಕ್ವಿಂಟಲ್ ತೊಗರಿ ಖರೀದಿಗೆ ಕೇಂದ್ರ ಅನುಮತಿ ನೀಡಿದ್ದು, ಈ ಕುರಿತು ರಾಜ್ಯದ ಸಹಕಾರ ಇಲಾಖೆ ಬುಧವಾರ ಅಧಿಕೃತ ಆದೇಶ ಹೊರಡಿಸಿದೆ.
ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ನಿಯಮಾವಳಿ ಪಾಲಿಸುವಂತೆ ಹೆಸರು ನೋಂದಾಯಿಸಿದ ರೈತರಿಂದ ಇನ್ನು 10 ಕ್ವಿಂಟಲ್ ಖರೀದಿ ಮಾಡುವಂತೆ ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಬಿ.ಎಸ್. ಮಂಜುನಾಥ ಆದೇಶ ಹೊರಡಿಸಿದ್ದಾರೆ. ಆದರೆ ಮತ್ತೆ 10 ಕ್ವಿಂಟಲ್ ಖರೀದಿ ಮಾಡಲು ಕನಿಷ್ಠ ಮೂರು ಎಕರೆ ಭೂಮಿ ಹೊಂದಿರಬೇಕೆಂಬ ಷರತ್ತು ವಿಧಿಸಲಾಗಿದೆ. ಎಕರೆಗೆ 7.50 ಕ್ವಿಂಟಲ್ ಖರೀದಿಗೆ ಅನುಮತಿ ನೀಡಲಾಗಿದೆ. ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟಾರೆ 487 ಖರೀದಿ ಕೇಂದ್ರಗಳ ಮುಖಾಂತರ ಪ್ರತಿ ರೈತನಿಂದ 10 ಕ್ವಿಂಟಲ್ ಖರೀದಿ ಮಾಡಲಾಗಿದ್ದು, ಕನಿಷ್ಠ 20 ಕ್ವಿಂಟಲ್ ಖರೀದಿ ಮಾಡಬೇಕೆಂಬುದು ರೈತರ ಒಕ್ಕೊರಲಿನ ಆಗ್ರಹವಾಗಿತ್ತು. ಈಗ ಮತ್ತೆ 10 ಕ್ವಿಂಟಲ್ ಖರೀದಿಗೆ ಅನುಮತಿ ನೀಡಲಾಗಿದೆ.
ತೊಗರಿ ಖರೀದಿ ಪ್ರಕ್ರಿಯೆ ಕಳೆದ ಮಾರ್ಚ್ 11ರಿಂದ ಸ್ಥಗಿತವಾಗಿದೆ. ಈಗ ಒಂದುವರೆ ತಿಂಗಳ ನಂತರ ಮತ್ತೆ 10 ಕ್ವಿಂಟಲ್ ಖರೀದಿಗೆ ಅನುಮತಿ ನೀಡಿರುವುದು ಎಷ್ಟರ ಮಟ್ಟಿಗೆ ರೈತರಿಗೆ ಲಾಭವಾಗುತ್ತದೆ ಎನ್ನುವುದೇ ತಿಳಿಯದಂತಾಗಿದೆ. ಈಗಾಗಲೇ ಹಲವು ರೈತರು ಸರ್ಕಾರದಿಂದ ಖರೀದಿ ಮಾಡುವುದಿಲ್ಲ ಎಂದು ನಿರಾಸೆಯಾಗಿ ಮಾರುಕಟ್ಟೆಯಲ್ಲಿ ಇದ್ದ ಬೆಲೆಗೆ ಮಾರಾಟ ಮಾಡಿ ಕೈ ತೊಳೆದುಕೊಂಡಿದ್ದಾರೆ. ಒಟ್ಟಾರೆ ಸರ್ಕಾರದ ಈ ತಡ ನಿರ್ಧಾರ ರೈಲು ಹೋದ ಮೇಲೆ ಟಿಕೆಟ್ ಕೊಂಡಂತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಫೆಬ್ರುವರಿ 7ರಂದು ಪ್ರತಿ ರೈತನಿಂದ 20 ಕ್ವಿಂಟಲ್ ಖರೀದಿ ಮಾಡಲಾಗುವುದು ಎಂದು ಬೀದರ್‌ದಲ್ಲಿ ಹೇಳಿದ್ದರು. ಆದರೆ ಸಿಎಂ ಹೇಳಿಕೆ ಕಾರ್ಯರೂಪಕ್ಕೆ ಬರಲೇ ಇಲ್ಲ. ಈಗ ಕೇಂದ್ರ ಅನುಮತಿ ನೀಡಿದ್ದರಿಂದ ಕಾರ್ಯರೂಪಕ್ಕೆ ಬರುವಂತಾಗಿದೆ. ಬೆಂಬಲ ಬೆಲೆಯಲ್ಲಿ ತೊಗರಿ ಕನಿಷ್ಠ 20 ಕ್ವಿಂಟಲ್ ಖರೀದಿ ಮಾಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ನೇತೃತ್ವದಲ್ಲಿ 42 ದಿನಗಳ ಕಾಲ ಜಿಲ್ಲಾಧಿಕಾರಿ ಕಚೇರಿ ಎದರು ಧರಣಿ ಸತ್ಯಾಗ್ರಹ ನಡೆಸಲಾಗಿತ್ತು.
ಸಿಎಂ ನುಡಿ ಕಾರ್ಯರೂಪಕ್ಕೆ: 20 ಕ್ವಿಂಟಲ್ ಖರೀದಿ ಮಾಡುತ್ತೇವೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಈಗ ಕಾರ್ಯರೂಪಕ್ಕೆ ಬಂದಂತಾಗಿದೆ. ಸರ್ಕಾರದ ಈ ಆದೇಶ ರೈತರಿಗೆ
ಅನುಕೂಲವಾಗಲಿದೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ತಿಳಿಸಿದ್ದಾರೆ.