ಕಲಬುರಗಿ: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸಂಸದ ಡಾ| ಉಮೇಶ ಜಾಧವ ನೇತೃತ್ವದಲ್ಲಿ ಬಿಜೆಪಿ ಮುಖಂಡರು ರವಿವಾರ ನಗರದಲ್ಲಿ ಮನೆ-ಮನೆಗೆ ತೆರಳಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರತಿಪಕ್ಷಗಳು ಜನರ ದಿಕ್ಕು ತಪ್ಪಿಸುತ್ತಿವೆ. ಆದರೆ, ಬಿಜೆಪಿ ಸರ್ಕಾರ ತಂದಿರುವ ಕಾಯ್ದೆಯಿಂದ ಯಾವುದೇ ಸಮುದಾಯದವರಿಗೂ ತೊಂದರೆ ಇಲ್ಲ. ಹೀಗಾಗಿ ಬಿಜೆಪಿ ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಡಾ| ಉಮೇಶ ಜಾಧವ ಹೇಳಿದರು.
ಕಲಬುರಗಿ ಉತ್ತರ ಮತಕ್ಷೇತ್ರದ ವಾರ್ಡ್ ನಂ.18ರ ಆಳಂದ ಕಾಲೋನಿ ಮತ್ತು ವಿಜಯನಗರ ಕಾಲೋನಿಯಲ್ಲಿ ಮನೆ-ಮನೆಗೆ ತೆರಳಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿದರು. ಜತೆಗೆ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕರ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿದರು.
ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ರಾಜಕೀಯ ಉದ್ದೇಶಕ್ಕಾಗಿ ಪೌರತ್ವ ಕಾಯ್ದೆ ವಿರೋಧಿಸುತ್ತಿವೆ. ದೇಶದ ಜನರ ದಾರಿ ತಪ್ಪಿಸಿ ಪ್ರತಿಭಟನೆಗೆ ಇಳಿಸಲಾಗುತ್ತಿದೆ. ಕಾಯ್ದೆ ಬಗ್ಗೆ ಸಂಸತ್‌ನಲ್ಲಿ ಗೃಹ ಸಚಿವರಾದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಾಯ್ದೆಯಿಂದ ದೇಶದ ಯಾವುದೇ ನಾಗರಿಕರಿಗೆ ಧಕ್ಕೆಯಾಗುವುದಿಲ್ಲ. ಇದು ಪೌರತ್ವ ಕೊಡುವ ಕಾಯ್ದೆ. ಮತ್ತೂಬ್ಬರ ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ದೇಶದ ನಾಗರಿಕರು ಕಿಡಿಕೊಡಬಾರದು ಎಂದು ಮುಖಂಡರು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಗರಾಧ್ಯಕ್ಷ ಬಿ.ಜಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಯುವ ಮುಖಂಡ ಚಂದು ಪಾಟೀಲ, ಅರವಿಂದ ನವಲಿ, ಉಮೇಶ ಪಾಟೀಲ, ಚನ್ನವೀರ ಲಿಂಗನವಾಡಿ, ಸಿದ್ದ ಪಾಟೀಲ, ಗಂಗಾಧರ ಬಿಲಗುಂದಿ, ಜಯಸಿಂಗ್ ಠಾಕೂರ, ವಿಜಯಕುಮಾರ, ವಿಜ್ಜು ಮುನ್ನಳ್ಳಿ, ಶಾಂತು ಬಿರಾದಾರ, ಸಂತೋಷ ರಾಮಪುರೆ, ರಾಚಪ್ಪ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.