ಕಲಬುರಗಿ: ಕೇಂದ್ರ ಸರ್ಕಾರ ದೇಶಾದ್ಯಂತ ‘ಹಿಂದಿ ದಿವಸ್’ ಆಚರಿಸುವುದನ್ನು ಖಂಡಿಸಿ ಮತ್ತು ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಸಮಾನ ಸ್ಥಾನಮಾನ ನೀಡಿ ಭಾರತದ ಭಾಷಾ ಸಮಾನತೆ ದಿನವನ್ನಾಗಿ ಆಚರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದಿ ಭಾಷೆಯುಳ್ಳ ಪ್ರತಿ ಸುಟ್ಟು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರ ಹಿಂದಿ ಸಂಪರ್ಕ ಭಾಷೆಯಾದ ಮಾತ್ರಕ್ಕೆ ರಾಷ್ಟ್ರೀಯ ಮಾನ್ಯತೆ ನೀಡಲು ಮುಂದಾಗಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಯ ವಿರೋಧಿ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಒಕ್ಕೂಟ ರಾಷ್ಟ್ರದಲ್ಲಿ ಪ್ರತಿಯೊಂದು ರಾಜ್ಯವೂ ಒಂದೊಂದು ಭಾಷೆ ಹಾಗೂ ಸಂಸ್ಕೃತಿ ಹೊಂದಿದೆ. ಹಿಂದಿ ಭಾಷೆಗಿಂತಲೂ ಪುರಾತನ ಮತ್ತು ಪ್ರಾಚೀನ ಇತಿಹಾಸ ದೇಶದ ಹಲವು ರಾಜ್ಯಗಳ ರಾಜ್ಯ ಭಾಷೆಗಳಿಗೆ ಇದೆ. ಕರ್ನಾಟಕದ ಪ್ರತಿಯೊಂದು ರಂಗದಲ್ಲಿಯೂ ರಾಷ್ಟ್ರ ಭಾಷೆ ಹೆಸರಿನಲ್ಲಿ ಹಿಂದಿಯನ್ನು ಕೇಂದ್ರ ಸರ್ಕಾರ ಬಲವಂತವಾಗಿ ಹೇರುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಎಲ್ಲ ಉದ್ಯೋಗ ನೇಮಕಾತಿಗಳ ಪರೀಕ್ಷೆಗಳು ಕಡ್ಡಾಯವಾಗಿ ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿಯೇ ಬರೆಯಲು ಆದೇಶಿಸಿರುವುದು ಮತ್ತು ನಾಮಫಲಕ, ಪ್ರಾಥಮಿಕ ಹಾಗೂ ಪದವಿ ಶಿಕ್ಷಣ, ಅಂಚೆ ಕಚೇರಿ ಹೀಗೆ ಸಿಕ್ಕ ಸಿಕ್ಕ ಕಡೆ ಹಿಂದಿ ರಾಷ್ಟ್ರ ಭಾಷೆ ಹೆಸರಿನಲ್ಲಿ ಕಡ್ಡಾಯ ಮಾಡುತ್ತಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ಮಾಡಿದ ದ್ರೋಹವಾಗಿದೆ ಎಂದು ಖಂಡಿಸಿದರು.
ಹಿಂದಿ ಕಲಿತರೆ ಬಹುಮಾನ, ಹಿಂದಿ ಬಳಸಿದರೆ ಮುಂಬಡ್ತಿ, ಹಿಂದಿ ಮಾತನಾಡಿದರೆ ರಾಷ್ಟ್ರ ಪ್ರೇಮಿ ಬಿರುದು ಕೊಡುವ ಆಮಿಷವನ್ನು ಕೇಂದ್ರ ಸರ್ಕಾರ ಬಿಡಬೇಕು. ಕರ್ನಾಟಕದಲ್ಲಿರುವ ಎಲ್ಲ ಕೇಂದ್ರ ಸರ್ಕಾರ ಸ್ವಾಮ್ಯದ ಎಲ್ಲ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹರಿಸುವಂತೆ ನೋಡಿಕೊಳ್ಳಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರವಿ ದೇಗಾಂವ, ಪ್ರಶಾಂಶ ಮಠಪತಿ, ಸಂತೋಷ ಪಾಟೀಲ, ಆನಂದ ಪಾಲಕೆ, ಸತೀಶ ಪಾಟೀಲ, ನವಿನ ಬಿರಾದಾರ, ಬಸವರಾಜ ಮೇತ್ರೆ, ಶಿವು ಪಾಟೀಲ, ಧರ್ಮ, ಪ್ರಶಾಂಶ ಕೋರೆ, ಮಲ್ಲಿಕಾರ್ಜುನ ಬೋಳಾ, ಅಶೋಕ ಪಾಟೀಲ ಪಾಲ್ಗೊಂಡಿದ್ದರು.