Advertisement

ಕಾರ್ಖಾನೆ ತ್ಯಾಜ್ಯ ಬಿಟ್ಟರೆ ಕ್ರಮ

03:41 PM Jul 05, 2019 | Naveen |

ಕಲಬುರಗಿ: ಕಾರ್ಖಾನೆಗಳು ಸೇರಿದಂತೆ ಇತರ ಯಾವುದೇ ಘಟಕಗಳು ಹಾಗೂ ಸಂಘ- ಸಂಸ್ಥೆಗಳು ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಬೇಕಾಬಿಟ್ಟಿಯಾಗಿ ಬಿಟ್ಟು ಪರಿಸರ ಕಲುಷಿತಗೊಳಿಸಿದರೆ ಅಂತಹವರ ವಿರುದ್ಧ ನಿಷೇಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಡಾ| ಕೆ. ಸುಧಾಕರ ಎಚ್ಚರಿಕೆ ನೀಡಿದರು.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಘನತ್ಯಾಜ್ಯ ವಿಲೇವಾರಿ ಹಾಗೂ ನಗರದ ವಾಯು ಮಾಲಿನ್ಯ ನಿಯಂತ್ರಣ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಕ್ಕರೆ, ಸಿಮೆಂಟ್ ಕಾರ್ಖಾನೆಗಳು ಹಾಗೂ ಇತರ ಘಟಕದವರು ತ್ಯಾಜ್ಯವನ್ನು ನದಿಗೆ ಹರಿ ಬಿಡುತ್ತಿದ್ದಾರೆ ಎನ್ನುವುದಾಗಿ ದೂರು ಬಂದಿದೆ. ಪರಿಸರ ಕಲುಷಿತ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾರ್ಖಾನೆ ಕಾರ್ಯ ನಿಷೇಧಿಸುವಂತಹ ಕಾಯ್ದೆ ಮಂಡಳಿಯಡಿ ಇದೆ ಎಂದು ಸ್ಪಷ್ಟಪಡಿಸಿದರು.

ಶುಕ್ರವಾರ ಸಾಧ್ಯವಾದರೆ ಇವೆಲ್ಲ ಸ್ಥಳಗಳಿಗೆ ಭೇಟಿ ನೀಡಿ ಖುದ್ದಾಗಿ ವೀಕ್ಷಿಸಲಾಗುವುದು. ಪರಿಸರ ಕಲುಷಿತ ಕಂಡು ಬಂದಲ್ಲಿ ನಿಷೇಧ ಕ್ರಮಕ್ಕೆ ಮುಂದಾಗಲಾಗುವುದು ಎಂದು ತಿಳಿಸಿದ ಡಾ| ಸುಧಾಕರ್‌, ಪಾಲಿಕೆ ತ್ಯಾಜ್ಯವನ್ನು ವೈಜ್ಷಾನಿಕವಾಗಿ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

ಸಭೆ: ಇದಕ್ಕೂ ಮುಂಚೆ ಅಧಿಕಾರಿಗಳ ಸಭೆ ನಡೆಸಿದ ಡಾ| ಕೆ. ಸುಧಾಕರ, ರಾಜ್ಯದಲ್ಲಿ ಹೆಚ್ಚಿನ ವಾಯು ಮಾಲಿನ್ಯ ಹೊಂದಿರುವ ನಾಲ್ಕು ಜಿಲ್ಲೆಗಳಲ್ಲಿ ಸಿಮೆಂಟ್ ನಗರಿ ಕಲಬುರಗಿ ಒಂದಾಗಿದ್ದು, ವಾಯು ಮಾಲಿನ್ಯ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಜಿಲ್ಲೆಯಲ್ಲಿ ಸಿಮೆಂಟ್ ಕಾರ್ಖಾನೆ, ದೂಡ್ಡ ಕಟ್ಟಡಗಳ ನಿರ್ವಹಣೆ, ಕೈಗಾರಿಕೆ ನಿರ್ವಹಣೆ ಪ್ರದೇಶದಿಂದ ಹೆಚ್ಚಾಗಿ ಧೂಳು ಉತ್ಪತ್ತಿಯಾಗಿ ಜನರಿಗೆ ಅಸ್ತಮಾ, ಅಲರ್ಜಿ, ಚರ್ಮ ರೋಗಗಳು ಬರುವ ಸಂಭವವಿದ್ದು, ಇಂತಹ ಪ್ರದೇಶಗಳಿಗೆ ವಾಯು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಭೇಟಿ ಕೊಟ್ಟು ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ವಾಯು ಮಾಲಿನ್ಯ ನಿಯಂತ್ರಣ ಕಾರ್ಯಕ್ಕೆ ಅಧಿಕಾರಿಗಳು ಅಸಡ್ಡೆ ತೋರಿದಲ್ಲಿ ಇಡೀ ನಾಗರಿಕ ಸಮುದಾಯ ಕೆಟ್ಟ ಪರಿಸರದಲ್ಲಿ ಉಳಿಯಬೇಕಾಗುತ್ತದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಕೆಸಿಪಿಸಿಬಿ ಅಧಿಕಾರಿಗಳನ್ನು ಬೇರೆ ಕಾರ್ಯಗಳಿಗೆ ನಿಯೋಜಿಸಬಾರದು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಗಣೇಶ ಹಬ್ಬ ಸಮೀಪಿಸುತ್ತಿದೆ. ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶ ವಿಗ್ರಹಗಳ ಮಾರಾಟಕ್ಕೆ ಉಚ್ಛ ನ್ಯಾಯಾಲಯವು ನಿಷೇಧಿಸಿರುವ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಿ. ಪಿಓಪಿ ವಿಗ್ರಹಗಳನ್ನು ಕೆರೆ ಅಥವಾ ನದಿಯಲ್ಲಿ ಎಸೆಯುವುದರಿಂದ ಜಲ ಮಾಲಿನ್ಯಕ್ಕೆ ಕಾರಣವಾಗಿ ಜಲಚರಗಳ ಪ್ರಾಣಕ್ಕೆ ಆಪತ್ತಿಯಾಗುತ್ತಿದೆ. ಮಣ್ಣಿನ ವಿಗ್ರಹಗಳನ್ನು ಬಳಸುವಂತೆ ಜನರಲ್ಲಿ ಅರಿವು ಮೂಡಿಸುವಂತಹ ಕೆಲಸ ಮಂಡಳಿ ಅಧಿಕಾರಿಗಳು ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಾತನಾಡಿ ಸಿಮೆಂಟ್ ಕಾರ್ಖಾನೆ ಮತ್ತು ರಸ್ತೆ ಬದಿಯಲ್ಲಿನ ಧೂಳಿನಿಂದ ಇಲ್ಲಿ ವಾಯು ಮಾಲಿನ್ಯವಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿದಿನ 351 ಟನ್‌ ಘನತ್ಯಾಜ್ಯ ವಸ್ತು ಉತ್ಪತ್ತಿಯಾಗುತ್ತಿದೆ. ಸ್ಥಳದಲ್ಲೇ ಹಸಿ ಕಸ, ಒಣ ಕಸ, ಪ್ಲಾಸ್ಟಿಕ್‌ ಪದಾರ್ಥ, ಗಾಜಿನ ಬಾಟಲ್ಗಳು ಪ್ರತ್ಯೇಕವಾಗಿ ಪಡೆದು ಅದರಂತೆ ವಿಲೇವಾರಿ ಮಾಡಲಾಗುತ್ತಿದೆ. ಹಸಿಕಸವನ್ನು ವೈಜ್ಞಾನಿಕ ರೀತಿಯಲ್ಲಿ ಸಾವಯವ ಗೊಬ್ಬರವನ್ನಾಗಿ ಮಾಡಿ ರೈತರಿಗೆ ನೀಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next