ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೇಳಿದ ಕೆಲಸ ಮಾಡದಿದ್ದರೆ ಹೇಗೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕು ತಡೆಗಟ್ಟಲು ಕೈಗೊಂಡಿರುವ ಕ್ರಮಗಳು ಕುರಿತಂತೆ ಸಭೆ ನಡೆಸಿ ಅವರು ಮಾತನಾಡಿದರು. ಕೋವಿಡ್ ಸೋಂಕಿತ ವ್ಯಕ್ತಿಗಳ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವುದು ಅತ್ಯಗತ್ಯವಾಗಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚದಿದ್ದಲ್ಲಿ ಸೋಂಕು ನಿಯಂತ್ರಣ ಅಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ಎಲ್ಲ ಮನೆಗಳ ಸಮೀಕ್ಷೆ ನಡೆಸುವಂತೆ ಈ ಹಿಂದಿನ ಮೂರು ಸಭೆಗಳಲ್ಲಿಯೂ ಸೂಚನೆ ನೀಡಲಾಗಿತ್ತು ಎಂದರು.
ಕಲಬುರಗಿ ನಗರ ಪ್ರದೇಶ ಮಾತ್ರವಲ್ಲದೇ, ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲೂ ಮನೆ-ಮನೆ ಸಮೀಕ್ಷೆ ಮಾಡಬೇಕು. ಈಗಾಗಲೇ ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಪತ್ತೆ ಹಚ್ಚುವ ಕಾರ್ಯ ಚುರುಕಾಗಿ ಮಾಡಬೇಕು. ಸಂಶಯಸ್ಪಾದ ವ್ಯಕ್ತಿಗಳು ಕಂಡು ಬಂದರೆ ಅಂತಹವರನ್ನು ಕ್ವಾರಂಟೈನ್ ಸೆಂಟರ್‌ಗೆ ಕಳುಹಿಸಬೇಕೆಂದು ತಾಕೀತು ಮಾಡಿದರು. ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್, ಮನೆ-ಮನೆ ಸಾರ್ವತ್ರಿಕ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಕಲಬುರಗಿ ನಗರದಲ್ಲಿ 3000 ಸಿಬ್ಬಂದಿಗಳ 680 ತಂಡ ರಚಿಸಲಾಗಿದೆ ಎಂದು ತಿಳಿಸಿದರು.
ಏ.25ರ ನಂತರ ಜಿಲ್ಲೆಗೆ ಬಂದವರೆಷ್ಟು?: ರಾಜ್ಯ ಸರ್ಕಾರ ಲಾಕ್‌ಡೌನ್‌ನಲ್ಲಿ ಸಿಲುಕಿರುವ ಕಾರ್ಮಿಕರನ್ನು ಆಯಾ ಜಿಲ್ಲೆಗಳಿಗೆ ಸ್ಥಳಾಂತರಿಸಲು ಏ.25ರಿಂದ ಅವಕಾಶ ನೀಡಿದೆ. ಅಲ್ಲಿಂದ ಇಲ್ಲಿ ವರೆಗೆ ಬೇರೆ-ಬೇರೆ ಜಿಲ್ಲೆಗಳಿಂದ ಜಿಲ್ಲೆಗೆ ಎಷ್ಟು ಜನರು ಮರಳಿದ್ದಾರೆ ಎಂದು ಡಿಸಿಎಂ ಕಾರಜೋಳ ಪ್ರಶ್ನಿಸಿದರು. ಅಲ್ಲದೇ, ಜಿಲ್ಲಾದ್ಯಂತ ಎಷ್ಟು ಚೆಕ್‌ಪೋಸ್ಟ್ ಕಾರ್ಯನಿರ್ವಹಿಸುತ್ತಿವೆ ಎಂದು ಕೇಳಿದರು. ಈ ವೇಳೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಲು ತಡವರಿಸಿದರು. ನಂತರ 18 ಅಂತಾರಾಜ್ಯ ಗಡಿಯಲ್ಲಿ ಒಟ್ಟು 40 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ ಎಂದಷ್ಟೇ ಅಧಿಕಾರಿಗಳು ಹೇಳಿದರು. ಆದರೆ, ಜಿಲ್ಲೆಗೆ ಮರಳಿದ ಕಾರ್ಮಿಕರ ಸಂಖ್ಯೆಯನ್ನು ಕೊನೆಯವರೆಗೂ ನೀಡಲೇ ಇಲ್ಲ. ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವಂತೆ, ಕ್ಷೌರಿಕರಿಗೆ ಮತ್ತು
ಆಟೋಚಾಲಕರಿಗೆ ಆಹಾರದ ಕಿಟ್ ನೀಡುವಂತೆ ಕಳೆದ ಸಭೆಗಳಲ್ಲಿ ಸೂಚನೆ ನೀಡಿದ್ದೆ. ಆದರೆ ಅದನ್ನು ಇದುವರೆಗೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ಷೌರಿಕರ ಕಿಟ್ ವಿತರಣೆಗೆ ವಿಳಂಬ: ಕ್ಷೌರಿಕರಿಗೆ ಆಹಾರ ದಿನಸಿ ಕಿಟ್ ವಿತರಣೆ ವಿಳಂಬಕ್ಕೂ ಡಿಸಿಎಂ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು. ಕ್ಷೌರಿಕರ ಅಂಡಿಗಳು ಬಂದ್ ಆಗಿರುವುದರಿಂದ ಕ್ಷೌರಿಕರು ಸಂಕಷ್ಟದಲ್ಲಿದ್ದು, ಎಲ್ಲ ಕುಟುಂಬಗಳಿಗೆ 1200ರೂ. ಮೊತ್ತದ ದಿನಸಿ ಕಿಟ್ ವಿತರಿಸುವಂತೆ ಈ ಹಿಂದಿನ ಸಭೆಯಲ್ಲಿ ನೀಡಲಾಗಿತ್ತು. ಆದರೆ, 10 ದಿನಗಳಾದರೂ ವಿತರಿಸಿಲ್ಲ ಎಂದು ಸಿಡಿಮಿಡಿಗೊಂಡರು.
ಈ ಸಮಯದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ನಗರದಲ್ಲಿರುವ ಗೌಳಿಗರ ಕುಟುಂಬಗಳಿಗೂ ಕಿಟ್ ವಿತರಿಸುವಂತೆಯೂ ಸೂಚಿಸಲಾಗಿತ್ತು. ಅವರಿಗೂ ಕಿಟ್ ತಲುಪಿಲ್ಲ ಎಂದು ಡಿಸಿಎಂ ಗಮನಕ್ಕೆ ತಂದರು. ಮೂರು ದಿನಗಳಲ್ಲಿ ಎಲ್ಲರಿಗೂ ಕಿಟ್ ವಿತರಣೆ ಮಾಡುವಂತೆ ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ ಕಾರಜೋಳ ತಾಕೀತು ಮಾಡಿದರು. ಸಭೆಯಲ್ಲಿ ಸಂಸದರಾದ ಡಾ| ಉಮೇಶ ಜಾಧವ, ಭಗವಂತ ಖೂಬಾ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಎಂ.ವೈ. ಪಾಟೀಲ, ಖನೀಜ್ ಫಾತೀಮಾ, ಅವಿನಾಶ ಜಾಧವ, ಬಸವರಾಜ ಮತ್ತಿಮಡು, ಸುಭಾಷ ಗುತ್ತೇದಾರ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಿ.ಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಜಿ.ಪಂ ಸಿಇಒ ಡಾ| ಪಿ. ರಾಜಾ, ಎಸ್‌ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್. ಸತೀಶಕುಮಾರ ಮತ್ತಿತರ ಅಧಿಕಾರಿಗಳು ಇದ್ದರು.