ಕಲಬುರಗಿ: ಕಳೆದ ಮೂರು ತಿಂಗಳಿನಲ್ಲಿ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 90 ಕ್ಕಿಂತ ಹೆಚ್ಚು ಡಿಫ್ತಿರಿಯಾ ಪ್ರಕರಣಗಳು ಕಂಡುಬಂದಿದ್ದು, ರೋಗ ಉಲ್ಬಣವಾಗದಂತೆ ಹಾಗೂ ವ್ಯಾಕ್ಸಿನ್‌ಗಳ ಕೊರತೆಯಾಗದಂತೆ ಆಸ್ಪತ್ರೆ ಅಧಿಕಾರಿಗಳು ಮುನ್ನೆಚರಿಕೆ ವಹಿಸಬೇಕು ಎಂದು ಲೋಕಸಭಾ ಸದಸ್ಯ ಡಾ|ಉಮೇಶ ಜಾಧವ ಹೇಳಿದರು.
ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಮತ್ತು ಜಿಮ್ಸ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಡಿಫ್ತಿರಿಯಾ ರೋಗವು ತುಂಬಾ ಮಾರಕವಾಗಿದ್ದು, ಸೋಂಕು ತಗುಲಿದ ನಂತರ 48 ಗಂಟೆ ತುಂಬಾ ನಿಗಾ ವಹಿಸಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಗಂಟಲು ಮಾರಿ ಸೋಂಕಿನ ರೋಗಿಗಳಿಗೆ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಬೇಕಲ್ಲದೆ ಅಗತ್ಯ ವ್ಯಾಕ್ಸಿನ್‌ಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು ಎಂದರು.
ಗಂಟಲು ಮಾರಿ ಸೋಂಕು ಕುರಿತು ನಗರ-ಪಟ್ಟಣ, ಸ್ಲಂ ಪ್ರದೇಶದಲ್ಲಿ ಐ.ಇ.ಸಿ ಚಟುವಟಿಕೆಗಳ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ಆಸ್ಪತ್ರೆಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಅ. 26 ರಂದು ಶ್ರಮದಾನ ಆಯೋಜಿಸಬೇಕು. ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ರೋಗದ ಬಗ್ಗೆ ಜನರಲ್ಲಿ ತಿಳಿಹೇಳುವಂತೆ ನಿರ್ದೇಶನ ನೀಡಬೇಕು ಎಂದ ಅವರು, ಕಲಬುರಗಿಯಲ್ಲಿ ಡೈಯಾಲಸಿಸ್ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಘಟಕಕ್ಕೆ ನೀರು ಮತ್ತು ಆರೈಕೆ ಸಿಬ್ಬಂದಿ ಸಮಸ್ಯೆಯಿದ್ದು, ಪ್ರಾದೇಶಿಕ ಆಯುಕ್ತರು ಈ ಬಗ್ಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
108 ವಾಹನ ಸಿಬ್ಬಂದಿ ಮೇಲೆ ನಿಗಾ ಇಡಿ: ತುರ್ತು ಸಂದರ್ಭದಲ್ಲಿ ರೋಗಿಗಳನ್ನು ತೆಗೆದುಕೊಂಡು ಹೋಗುವ 108 ವಾಹನಗಳ ಸಿಬ್ಬಂದಿಗಳು ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳ ಬದಲಾಗಿ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲು ಪ್ರಾಶಸ್ತ್ಯ ನೀಡುತ್ತಿರುವ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಸಿಬ್ಬಂದಿ ಕಾರ್ಯವೈಖರಿ ಮೇಲೆ ನಿಗಾ ಇಡಬೇಕು ಎಂದರು.
ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಮಾತನಾಡಿ, ಜಿಮ್ಸ್ ಆವರಣದಲ್ಲಿ ರೋಗಿಗಳಿಗೆ ನೆರವಾಗಲು ಕ್ಯಾಂಟಿನ್, ವೈಫೈ, ಗ್ರಂಥಾಲಯ, ಎಟಿಎಂ ಸೌಲಭ್ಯ ಕಲ್ಪಿಸಬೇಕು. ಡಿಫ್ತಿರಿಯಾ ಪ್ರಕರಣಕ್ಕೆ ಸಂಬಂಧಿ ಸಿದಂತೆ ಅಗತ್ಯ ಆ್ಯಂಟಿ ಡಿಫ್ತಿರಿಯಾ ಸೀರಮ್ ಖರೀದಿಸಲು ರಾಜ್ಯದಲ್ಲಿ ಯಾರೂ ಪೂರೈಕೆದಾರರು ಇಲ್ಲದಿರುವುದರಿಂದ ಮುಂಬೈ, ಬಿಹಾರದ ಪಟನಾದಿಂದ ಖರೀದಿಸಲು 4ಜಿ ವಿನಾಯಿತಿ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಮ್ಸ್ ನಿರ್ದೇಶಕ ಡಾ| ಉಮೇಶ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಮಾಧವರಾವ ಕೆ. ಪಾಟೀಲ ಮತ್ತು ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿಗಳು ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜಾ ಪಿ., ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ನಳಿನಿ ಅತುಲ್, ಜಿಲ್ಲಾ ಆಸ್ಪತ್ರೆ ಶಸ್ತ್ರಜ್ಞ ಡಾ| ಶಿವಾನಂದ ಸುರಗಾಳಿ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ| ಅಂಬಾರಾಯ
ರುದ್ರವಾಡಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.