Advertisement

ಮಾತುಕತೆಗೆ ಎನ್‌ಎಸ್‌ಎಲ್‌ ಆಡಳಿತ ಮಂಡಳಿಗೆ ಡಿಸಿ ನಿರ್ದೇಶನ

06:54 PM Oct 04, 2019 | Naveen |

ಕಲಬುರಗಿ: ಪ್ರತಿ ಮೆಟ್ರಿಕ್‌ ಟನ್‌ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ಶುಲ್ಕವಾಗಿ 850ರೂ. ವಿಧಿಸುತ್ತಿರುವುದಕ್ಕೆ ರೈತರ ವಿರೋಧವಿದ್ದು, ಈ ದರ ಕಡಿಮೆಗೊಳಿಸಲು ಕಂಪನಿ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಎರಡು ದಿನದಲ್ಲಿ ಪೂರಕವಾಗಿ ಸಕಾರಾತ್ಮಕ ಪ್ರತಿಕ್ರಿಯೆಯೊಂದಿಗೆ ಮಾತುಕತೆಗೆ ಬರುವಂತೆ ಜಿಲ್ಲಾಧಿಕಾರಿ ಬಿ. ಶರತ್‌ ಅವರು ಆಳಂದನ ಎನ್‌.ಎಸ್‌.ಎಲ್‌ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ರಾಧಾಕೃಷ್ಣ ಅವರಿಗೆ ನಿರ್ದೇಶನ ನೀಡಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಎನ್‌. ಎಸ್‌.ಎಲ್‌ ಕಾರ್ಖಾನೆಯವರು ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೆಚ್ಚಿಗೆ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಕಂಪನಿ ಅಧಿಕಾರಿಗಳು ಮತ್ತು ರೈತ ಮುಖಂಡರ ಸಭೆ ನಡೆಸಿದರು.

ಜಿಲ್ಲೆಯಲ್ಲಿ ರೇಣುಕಾ ಶುಗರ್, ಉಗಾರ ಶುಗರ್‌ ಇನ್ನಿತರ ಕಂಪನಿಗಳು 650ರಿಂದ 680ರೂ.ಗಳಂತೆ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ವಿಧಿಸುತ್ತಿದ್ದಾರೆ. ಇದೇ ಪ್ರಮಾಣವನ್ನು ಎನ್‌.ಎಸ್‌. ಎಲ್‌ ಕಂಪನಿಯೂ ಅನುಸರಿಸಬೇಕು ಎಂಬ ಬೇಡಿಕೆಯಿಂದ ರೈತರು ಧರಣಿ ಕುಳಿತಿದ್ದಾರೆ. ಕಾರ್ಖಾನೆಯ ವ್ಯಾಪ್ತಿ 110 ಕಿ.ಮೀ ಇರುವುದರಿಂದ ಅದೆಲ್ಲವನ್ನು ಲೆಕ್ಕ ಹಾಕಿ ಸರಾಸರಿ ಆಧಾರದ ಮೇಲೆ ನಿಗದಿಪಡಿಸಿರುವ ಶುಲ್ಕ ಸರಿಯಾದ ಕ್ರಮವಲ್ಲ ಎಂದ ಜಿಲ್ಲಾಧಿಕಾರಿಗಳು, ಪ್ರಸ್ತುತ ವಿಧಿಸುತ್ತಿರುವ ದರಕ್ಕಿಂತ ಕಡಿಮೆ ದರ ನಿಗದಿಪಡಿಸಿ ರೈತರ ಹಿತ ಕಾಪಾಡಬೇಕು ಎಂದರು.

ಬ್ಯಾಂಕ್‌ ಸಾಲದ ಸಮಸ್ಯೆ ಬಗೆಹರಿಸಿ: 2013-14ನೇ ಸಾಲಿನಲ್ಲಿ ಓರಿಯಂಟಲ್‌
ಬ್ಯಾಂಕ್‌ ಆಫ್‌ ಕಾಮರ್ಸ್‌ನಿಂದ ಕಾರ್ಖಾನೆ ಜಾಮೀನಿನ ಮೇಲೆ ರೈತರು ಸಾಲ ಪಡೆದಿದ್ದು, ಸಾಲದ ಹಣವನ್ನು ಕಬ್ಬು ಪೂರೈಸಿದ ರೈತರಿಗೆ ಪಾವತಿಸಬೇಕಾದ ಮೊತ್ತದಲ್ಲಿ, ಕಾರ್ಖಾನೆ ಹಿಡಿದಿಟ್ಟುಕೊಂಡು ಇನ್ನು ಕೆಲ ರೈತರ ಸಾಲದ ಹಣವನ್ನು ಬ್ಯಾಂಕಿಗೆ ಪಾವತಿಸಿದೆ. ಕಾರಣ ರೈತರಿಗೆ ಸಾಲ ಪಡೆಯಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಕೂಡಲೇ ಬಾಕಿ ಹಣ ಬ್ಯಾಂಕ್‌ಗೆ ಪಾವತಿಸುವಂತೆ ಕಾರ್ಖಾನೆ ಅಧಿಕಾರಿಗಳಿಗೆ ಸೂಚಿಸಿದರು.

ಆಳಂದ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಡಿಮೆಗೊಳಿಸಬೇಕು. ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ನಿಂದ ಪಡೆದ ಬ್ಯಾಂಕ್‌ ಸಾಲ ಸಮಸ್ಯೆ ಪರಿಹಾರ ಕೋರಿ ರೈತರು ಧರಣಿ ಕುಳಿತಿದ್ದಾರೆ. ಅಕ್ಕಪಕ್ಕದ ಸಕ್ಕರೆ ಕಾರ್ಖಾನೆಗಳು ಪ್ರಸ್ತುತ ವಿಧಿಸುತ್ತಿರುವ
ಸಾಗಾಣಿಕೆ ದರ ಕುರಿತು ಅಧ್ಯಯನ ಮಾಡಿ ಎನ್‌.ಎಸ್‌.ಎಲ್‌ ಕಾರ್ಖಾನೆ ವ್ಯಾಪ್ತಿಯ ರೈತರ ಹಿತ ಗಮನದಲ್ಲಿಟ್ಟುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದರು.

Advertisement

ಸಭೆಯಲ್ಲಿ ಭಾಗವಹಿಸಿದ ರೈತ ಮುಖಂಡರು ಮಾತನಾಡಿ, ರೇಣುಕಾ ಶುಗರ್ ಹಾಗೂ ಉಗರ್‌ ಶುಗರ್‌ ಕಂಪನಿಯವರು ನಿರ್ವಹಣಾ ಮತ್ತು ಸಾಗಾಣಿಕೆ ಶುಲ್ಕವಾಗಿ ಪಡೆಯುವ ಮೊತ್ತದಷ್ಟೇ ಎನ್‌.ಎಸ್‌.ಎಲ್‌ ಕಂಪನಿಯೂ ವಿಧಿಸಬೇಕು. 2018-19ನೇ ಸಾಲಿನಲ್ಲಿ ಬೇರೆ ಕಂಪನಿಗಳಿಗೆ ಹೋಲಿಸಿದ್ದಾಗ ಕಟಾವು ಮತ್ತು ಸಾಗಾಣಿಕೆ ಶುಲ್ಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಪಡೆಯಲಾಗಿದೆ. ಆದ್ದರಿಂದ ಪ್ರತಿ ಮೆಟ್ರಿಕ್‌ ಟನ್ನಿನ ವ್ಯತ್ಯಾಸ ಮೊತ್ತ 159 ರೂ. ಗಳಂತೆ ಸುಮಾರು 5 ಕೋಟಿ ರೂ. ಗಳನ್ನು ರೈತರಿಗೆ ಮರುಪಾವತಿಸಬೇಕು ಎಂದು ಬೇಡಿಕೆ ಇಟ್ಟರು.

ಎನ್‌.ಎಸ್‌.ಎಲ್‌ ಕಾರ್ಖಾನೆ ಉಪಾಧ್ಯಕ್ಷ ರಾಧಾಕೃಷ್ಣ ಮಾತನಾಡಿ 2018-19ನೇ ಸಾಲಿಗೆ ಕಬ್ಬು ಅಭಿವೃದ್ಧಿ ಆಯುಕ್ತರು ಕಾರ್ಖಾನೆಗೆ ಪ್ರತಿ ಮೆಟ್ರಿಕ್‌ ಟನ್‌ ಕಬ್ಬು ಖರೀದಿಗೆ ನಿಗದಿಪಡಿಸಿರುವ ನ್ಯಾಯಯುತ ಲಾಭದಾಯಕ ಬೆಲೆ 2943 ರೂ. ದರದಂತೆ ರೈತರಿಂದ ಖರೀದಿಸಿದೆ. ಇದರಲ್ಲಿ 850 ರೂ. ಗಳನ್ನು ನಿರ್ವಹಣಾ ಮತ್ತು ಸಾಗಾಣಿಕೆ ಶುಲ್ಕ ಕಡಿತ ಮಾಡಿಕೊಂಡು 2093 ರೂ. ಗಳಂತೆ ರೈತರಿಗೆ ಹಣ ಪಾವತಿಸಿದೆ. ಎಫ್‌.ಆರ್‌.ಪಿ ದರಕ್ಕಿಂತ ಹೆಚ್ಚಿ ದರ ನಿಗದಿಪಡಿಸಲು ನಮ್ಮ ಹಂತದಲ್ಲಿ ಅಧಿಕಾರವಿಲ್ಲ, ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವೆ ಎಂದರು.

ಕಲಬುರಗಿ ಉಪವಿಭಾಗದ ಸಹಾಯಕ ಆಯುಕ್ತ ಡಾ| ಗೋಪಾಲಕೃಷ್ಣ ಬಿ., ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿ. ಶ್ರೀಧರ, ಆಳಂದ ತಹಶೀಲ್ದಾರ್‌ ಬಸವರಾಜ ಬೆಣ್ಣೂರ, ಎನ್‌.ಎಸ್‌.ಎಲ್‌ ಶುಗರ್ ಕಂಪನಿ ಭೂಸನೂರ ಘಟಕದ ಕಬ್ಬು ಮಾರುಕಟ್ಟೆ ವ್ಯವಸ್ಥಾಪಕ ಜೀವನಸಿಂಗ್‌, ಹಣಕಾಸು ವಿಭಾಗದ ಎ.ಜಿ.ಎಂ ಸುಭಾಷ ದೋರಾ ಹಾಗೂ ರೈತ ಸಂಘಟನೆಗಳ ಮುಖಂಡರು
ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next