Advertisement

ಬಂದೂಕು ಪರವಾನಗಿ ನೀಡದಿರುವಂತೆ ಸೂಚನೆ

03:23 PM Feb 29, 2020 | Naveen |

ಕಲಬುರಗಿ: ಮಹಾನಗರದಲ್ಲಿ ಈಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದೂಕಿನ ಪರವಾನಗಿ ನೀಡಿರುವುದು ಸರಿಯಾದುದ್ದಲ್ಲ. ಇನ್ಮುಂದೆ ಯಾವುದೇ ಕಾರಣಕ್ಕೂ ಬಂದೂಕಿನ ಪರವಾನಗಿ ನೀಡದಿರುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಲಬುರಗಿ ಮಹಾನಗರ ಪೊಲೀಸ್‌ ಆಯುಕ್ತರಿಗೆ ಸ್ಪಷ್ಟ ಸೂಚನೆ ನೀಡಿದರು.

Advertisement

ಇಲ್ಲಿನ ಈಶಾನ್ಯ ವಲಯ ಐಜಿಪಿ ಕಚೇರಿಯಲ್ಲಿ ವಲಯ ಮಟ್ಟದ ಇಲಾಖಾ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಲಬುರಗಿ ಮಹಾನಗರ ಪೊಲೀಸ್‌ ಆಯುಕ್ತರು ಸರಿಯಾಗಿ ಅವಲೋಕಿಸಿದರೆ ಬಂದೂಕಿನ ಪರವಾನಗಿ ನೀಡಿದ್ದಾರೆಂಬ ಹಿನ್ನೆಲೆಯಲ್ಲಿ ಸೂಚನೆ ನೀಡಿರುವುದಾಗಿ ತಿಳಿಸಿದರು.

ಇನ್ಮುಂದೆ ಯಾರಿಗೂ ಬಂದೂಕಿನ ಪರವಾನಗಿ ನೀಡದಿರುವಂತೆ ತಾಕೀತು ಮಾಡಿದ್ದಲ್ಲದೇ ರೌಡಿಶೀಟರ್‌ದಿಂದ ಹೆಸರು ಸಹ ತೆಗೆದು ಹಾಕದಿರುವಂತೆ ಸೂಚಿಸುವುದರ ಜತೆಗೆ ನಾಗರಿಕರಿಗೆ ಬಂದೂಕಿನ ತರಬೇತಿ ನೀಡುವುದನ್ನು ಸಹ ಪರಿಶೀಲಿಸುವಂತೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.

ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಸೂಚನೆ: ಕಲಬುರಗಿ ಮಹಾನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಅದರಲ್ಲೂ ಜೂಜಾಟ್‌, ಗ್ಯಾಂಬ್ಲಿಂಗ್‌, ಮಟಕಾ ಹಾಗೂ ಜಿಲ್ಲೆ ಮತ್ತು ಗಡಿ ಭಾಗದಲ್ಲಿ ನಡೆಯುತ್ತಿರುವ ಕೊಲೆ ಮತ್ತು ಜೂಜಾಟ್‌ಕ್ಕೆ ಕಡಿವಾಣ ಹಾಕುವಂತೆ ಎಲ್ಲ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಆಯುಕ್ತಾಲಯಕ್ಕೆ 6 ಕೋಟಿ ರೂ ಬಿಡುಗಡೆ: ಕಲಬುರಗಿ ಮಹಾನಗರದಲ್ಲಿ ಪೊಲೀಸ್‌ ಆಯುಕ್ತರ ಕಚೇರಿ ಕಟ್ಟಡವನ್ನು ಹಳೆ ಎಸ್ಪಿ ಕಚೇರಿ ಕಟ್ಟಡ ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಲಾಗುವುದು. ಕಟ್ಟಡವನ್ನು 18.50 ಕೋಟಿ ರೂ. ಎಂಬುದಾಗಿ ಅಂದಾಜಿಸಿ ಈಗ 6 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳಿದ ಮೊತ್ತವನ್ನು ಹಂತ-ಹಂತವಾಗಿ ಬಿಡುಗಡೆ ಮಾಡಲಾಗುವುದು. ಅದೇ ರೀತಿ ಫ‌ರಹತಾಬಾದ್‌ ಪೊಲೀಸ್‌ ಠಾಣೆಗೆ ಹೊಸ ಕಟ್ಟಡಕ್ಕಾಗಿ 1.50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪೊಲೀಸ್‌ ಈಶಾನ್ಯ ವಲಯದಲ್ಲಿ ಖಾಲಿ ಇರುವ 300 ಪೊಲೀಸ್‌ ಪೇದೆ, ಅದೇ ರೀತಿ ಕಲಬುರಗಿ ಪೊಲೀಸ್‌ ಆಯುಕ್ತಾಲಯದ 250 ಹಾಗೂ 250 ನಗರ ಶಸಸ್ತ್ರ ಪಡೆ ನೇಮಕಾತಿಗೆ ಮುಂದಾಗಲಾಗುವುದು ಎಂದು ವಿವರಣೆ ನೀಡಿದರು.

Advertisement

ವಾಹನಗಳ ಖರೀದಿಗೆ 3ಕೋಟಿ ರೂ.ಗಳನ್ನು ಕಲಬುರಗಿ ಮಹಾನಗರ ಪೊಲೀಸ್‌ ಆಯುಕ್ತಾಲಯಕ್ಕೆ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ದ್ವಿಚಕ್ರವಾಹನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಒಟ್ಟಾರೆ ಪೊಲೀಸ್‌ ಇಲಾಖೆ ಸುಧಾರಣೆಗೆ ಮುಂದಾಗಲಾಗಿದೆ. ಮುಂಬೈನ ಮಾಜಿ ಶಾಸಕ ಎಐಎಂಐಎಂನ ವಕ್ತಾರ ವಾರೀಶ ಪಠಾಣ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ವಿಳಂಬ ನೀತಿ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next