Advertisement

ಪ್ರೌಢಶಾಲೆ ಬಾಲಕಿಯರಿಗಿನ್ನೂ ದೊರೆತಿಲ್ಲ ಸಮವಸ್ತ್ರ ಭಾಗ್ಯ!

03:20 PM Aug 23, 2019 | Team Udayavani |

 ಹಣಮಂತರಾವ ಭೈರಾಮಡಗಿ

Advertisement

ಕಲಬುರಗಿ: ಪ್ರಸಕ್ತ 2019-20ನೇ ಸಾಲಿನ ಶೈಕ್ಷಣಿಕ ಅವಧಿ ಪ್ರಾರಂಭವಾಗಿ ಮೂರು ತಿಂಗಳಾಗುತ್ತಿದ್ದರೂ ರಾಜ್ಯದ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಇನ್ನೂ ಸಮವಸ್ತ್ರ ವಿತರಣೆಯಾಗಿಲ್ಲ. ಹೀಗಾಗಿ ಬಾಲಕರು ಹೊಸ ಬಟ್ಟೆ ಹಾಕಿಕೊಂಡರೆ, ಬಾಲಕಿಯರಿಗೆ ಹಳೆ ಬಟ್ಟೆಯೇ ಗತಿ ಎನ್ನುವಂತಾಗಿದೆ.

ಪ್ರೌಢಶಾಲೆಯ 8, 9 ಹಾಗೂ 10ನೇ ತರಗತಿ ಬಾಲಕಿಯರಿಗೆ ಇಬ್ಬರಿಗೂ ಪ್ರಸಕ್ತವಾಗಿ ಸಮವಸ್ತ್ರ ವಿತರಣೆಯಾಗಿಲ್ಲ. ಮೈಸೂರು ವಿಭಾಗದಲ್ಲಿ ಮಾತ್ರ ಶೇ. 50ರಷ್ಟು ಸಮವಸ್ತ್ರ ಪೂರೈಕೆಯಾಗಿದ್ದು, ಬುಧವಾರದಿಂದ ಮಾತ್ರ ವಿತರಣೆ ಶುರುವಾಗಿದೆ. ಉಳಿದಂತೆ ಯಾವುದೇ ವಿಭಾಗದಲ್ಲಿ ಸಮವಸ್ತ್ರ ಪೂರೈಕೆಯಾಗಿಲ್ಲ. ಹೀಗಾಗಿ ವಿತರಣೆಯಾಗಿಲ್ಲ.

ಮೈಸೂರು ವಿಭಾಗದಲ್ಲಿ ಸಮವಸ್ತ್ರ ವಿತರಣೆಗೆ ಟೆಂಡರ್‌ ಅಂತಿಮವಾಗಿದ್ದರಿಂದ ಈಗ ಶೇ. 50ರಷ್ಟು ಪೂರೈಕೆಯಾಗಿದೆ. ಉಳಿದಂತೆ ವಿಭಾಗವಾರು ಟೆಂಡರ್‌ ಅಂತಿಮಗೊಳ್ಳದ ಕಾರಣ ಸಮವಸ್ತ್ರ ಪೂರೈಕೆಯಾಗಿ ವಿತರಣೆಯಾಗಿಲ್ಲ. ಇನ್ನೊಂದು ತಿಂಗಳು ಕಳೆದರೆ ಅರ್ಧ ಶೈಕ್ಷಣಿಕ ಅವಧಿಯೇ ಮುಕ್ತಾಯವಾಗುತ್ತದೆ.

ಸಚಿವರಿಲ್ಲದೇ ಅನಾಥ: ಎನ್‌. ಮಹೇಶ ಅವರು ಕಳೆದ ವರ್ಷ 2018ರ ಅಕ್ಟೋಬರ್‌ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಇಲಾಖೆಗೆ ಸಚಿವರೇ ಇಲ್ಲ ಎನ್ನುವಂತಾಗಿದೆ. ಲೋಕಸಭೆ ಚುನಾವಣೆ ನಂತರ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಎಸ್‌. ಆರ್‌. ಶ್ರೀನಿವಾಸ ಶಿಕ್ಷಣ ಇಲಾಖೆ ಸಚಿವರಾಗಿ ಇನ್ನೇನು ಕಾರ್ಯ ಆರಂಭಿಸುವ ಹೊತ್ತಿಗೆ ಸರ್ಕಾರ ಬಿದ್ದು ಹೋಯಿತು. ಒಟ್ಟಾರೆ ಶಿಕ್ಷಣ ಇಲಾಖೆಗೆ ಸಚಿವರಿಲ್ಲದಿರುವುದು ಹಾಗೂ ಚುನಾವಣೆ ಹಿನ್ನೆಲೆಯಲ್ಲಿ ಸಮವಸ್ತ್ರಕ್ಕಾಗಿ ಟೆಂಡರ್‌ ಅಂತಿಮಗೊಳ್ಳದಿವುದೇ ಇಂದಿನ ದಿನದವರೆಗೂ ಪ್ರೌಢಶಾಲಾ ಬಾಲಕಿಯರಿಗೆ ಸಮವಸ್ತ್ರ ವಿತರಣೆಯಾಗದಿರಲು ಪ್ರಮುಖ ಕಾರಣ ಎಂದೇ ಹೇಳಲಾಗುತ್ತಿದೆ.

Advertisement

ಹಿರಿಯ ಪ್ರಾಥಮಿಕ 5, 6, 7 ಹಾಗೂ 8ನೇ ತರಗತಿಯ ಶಾಲೆಯು ಒಂದೆಡೆ ನಡೆಯುತ್ತಿದ್ದು, ಇಲ್ಲಿ 8ನೇ ತರಗತಿ ಬಿಟ್ಟರೇ ಉಳಿದ ಮೂರು ತರಗತಿಗಳ ಮಕ್ಕಳಿಗೆ ಹೊಸ ಸಮವಸ್ತ್ರ ವಿತರಣೆಯಾಗಿದೆ. ಆದರೆ 8ನೇ ತರಗತಿ ಮಕ್ಕಳಿಗೆ ಹೊಸ ಸಮವಸ್ತ್ರ ವಿತರಣೆಯಾಗಿಲ್ಲ.

ಅದೇ ರೀತಿ ಸೈಕಲ್ ಸಹ ಇನ್ನೂ ಶೇ. 50ರಷ್ಟು ವಿತರಣೆಯಾಗಿಲ್ಲ. ಇಲ್ಲೂ ಕೂಡಾ ವಿಭಾಗವಾರು ಟೆಂಡರ್‌ ಬೇರೆ-ಬೇರೆಯಾಗಿದ್ದರಿಂದ ಸಮಪರ್ಕವಾಗಿ ವಿತರಣೆಯಾಗುತ್ತಿಲ್ಲ.

ಮೊದಲ ಸಲ ಟೆಂಡರ್‌ ಕರೆದಾಗ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಎರಡನೇ ಸಲ ಟೆಂಡರ್‌ ಕರೆದಿರುವುದೇ ವಿಳಂಬವಾಗಲು ಕಾರಣವಾಗಿದೆ. ಈಗ ಟೆಂಡರ್‌ ಅಂತಿಮಗೊಂಡಿದ್ದರಿಂದ ಮಾಸಾಂತ್ಯದೊಳಗೆ ಸಮವಸ್ತ್ರ ಪೂರೈಕೆಯಾಗಿ ಮಕ್ಕಳಿಗೆ ವಿತರಣೆಯಾಗಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಮವಸ್ತ್ರ ಪೂರೈಕೆ ಸಲುವಾಗಿ ಮೊದಲ ಸಲ ಕರೆಯಲಾದ ಟೆಂಡರ್‌ ಆಗದ ಕಾರಣ ಎರಡನೇ ಸಲ ಕರೆದ ಟೆಂಡರ್‌ ಅಂತಿಮಗೊಂಡಿದ್ದರಿಂದ ಪ್ರೌಢಶಾಲೆ ಬಾಲಕಿಯರಿಗೆ ಸಮವಸ್ತ್ರ ಪೂರೈಕೆ ಮಾಡಿ ವಿತರಣೆ ಮಾಡಲು ವಿಳಂಬವಾಗಿದೆ. ಈಗ ಮೈಸೂರು ವಿಭಾಗದಲ್ಲಿ ಸಮವಸ್ತ್ರ ಪೂರೈಕೆಯಾಗ್ತಾ ಇದೆ. ಒಟ್ಟಾರೆ ಮಾಸಾಂತ್ಯದೊಳಗೆ ರಾಜ್ಯದಾದ್ಯಂತ ಎಲ್ಲ ಕಡೆ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ವಿತರಣೆಯಾಗಲಿದೆ.
ಉಮಾಶಂಕರ,
  ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ

 

Advertisement

Udayavani is now on Telegram. Click here to join our channel and stay updated with the latest news.

Next