ಕಲಬುರಗಿ: ಸದೃಢ ಸಮಾಜ ನಿರ್ಮಾಣದಲ್ಲಿ ಯುವ ಸಮೂಹದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆಧುನಿಕತೆ ಪ್ರಭಾವಕ್ಕೆ ಒಳಗಾಗಿ ತಮ್ಮ ಆರೋಗ್ಯವನ್ನು ಯುವ ಸಮುದಾಯ ಹಾಳು ಮಾಡಿಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಗೃಹ ಖಾತೆ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಶ್ರೀನಿವಾಸ ಸರಡಗಿಯ ಶ್ರೀಗುರು ಚಿಕ್ಕ ವೀರೇಶ್ವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ‘ನಶೆ ಮುಕ್ತ ನಾಡು’ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕತೆ ಒತ್ತಡಕ್ಕೊಳಗಾಗಿ ನಾವು ಬದುಕುವ ಶೈಲಿ ಬದಲಾಗಿದೆ. ನೈಜ ಬದುಕು, ಸ್ವಾಸ್ಥ್ಯ, ಆರೋಗ್ಯ, ಉತ್ತಮ ಆಹಾರ ಕಣ್ಮರೆಯಾಗಿ ಕಲುಷಿತ ಆಹಾರದಿಂದ ದಿನೇ ದಿನೇ ರೋಗಗಳು ಉಲ್ಭಣಗೊಂಡು ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯುವಕರು ಗುಟಕಾ, ತಂಬಾಕು ಸೇರಿದಂತೆ ನಶೆ ವಸ್ತುಗಳಿಗೆ ದಾಸರಾಗಿ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುವುದರ ಜತೆಗೆ ಸಂಸಾರಕ್ಕೂ ಹೊರೆಯಾಗುತ್ತಿದ್ದಾರೆ. ಹೀಗಾಗಿ ತಮ್ಮನ್ನು ನಂಬಿದ ಕುಟುಂಬ ಸದಸ್ಯರಿಗೆ ನ್ಯಾಯ ನೀಡಲಾಗುತ್ತಿಲ್ಲ ಎಂದು ಹೇಳಿದರು.
ದುಶ್ಚಟಗಳಿಗೆ ಬಲಿಯಾದವರು ಅಪರಾಧ ಕೃತ್ಯದಲ್ಲಿ ತೊಡಗುತ್ತಿದ್ದು, ಸಮಾಜದಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಠಗಳು ಪೂಜಾ ಕೈಂಕರ್ಯಗಳೊಂದಿಗೆ ಇಂತಹ ಸಮಾಜ ಮುಖೀ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಸಂತರ ಮಾತು ಸಮಾಜ ಕೇಳುತ್ತದೆ. ಯತಿಗಳು ಎದ್ದು ನಿಂತು ಹೊಸ ಸಮಾಜ ನಿರ್ಮಾಣ ಮಾಡಲು ಶ್ರೀಮಠ ಪಣ ತೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಿತಿ ಮೀರಿದ ದುಶ್ಚಟಗಳಿಂದ ಹಳ್ಳಿಯ ಸ್ವಾಸ್ಥ್ಯ ಹಾಳಾಗುತ್ತಿದೆ. ಬದುಕು ದಿನೇ ದಿನೇ ಕಷ್ಟಕರವಾಗುತ್ತಿದೆ. ಇದನ್ನು ಮನಗಂಡು ಶ್ರೀ ಮಠದಿಂದ ನಶೆ ಮುಕ್ತ ನಾಡು ಎನ್ನುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಚಟಗಳಿಗೆ ಬಲಿಯಾದವರನ್ನು ಅದರಿಂದ ಹೊರತಂದು ಉತ್ತಮ ಸಮಾಜ ನಿರ್ಮಾಣ ಮಾಡುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಪ್ರತಿ ಹಳ್ಳಿಗಳಲ್ಲಿ ಜಾಗೃತಿ ಸಭೆ ಆಯೋಜಿಸಿ ಅರಿವು ಮೂಡಿಸಲಾಗುವುದು ಎಂದು ನುಡಿದರು. ಪ್ರತಿ ಹಳ್ಳಿ, ತಾಂಡಾಗಳಲ್ಲಿ ಕಾರ್ಯಕ್ರಮ ಏರ್ಪಡಿಸಿ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯದ ಬಗ್ಗೆ ಉತ್ತಮ ಪರಿಣಿತರಿಂದ ಉಪನ್ಯಾಸ ಹಾಗೂ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪೂಜ್ಯ ಅಭಿನವ ಮುರುಘೇಂದ್ರ ಮಹಾಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ, ಮಾಜಿ ಮೇಯರ್‌ಗಳಾದ ಧರ್ಮಪ್ರಕಾಶ ಪಾಟೀಲ, ಶರಣಕುಮಾರ ಮೋದಿ, ಯುವ ಮುಖಂಡರಾದ ಅಣವೀರಯ್ಯ ಸ್ವಾಮಿ ಕೋಡ್ಲಿ, ಈರಣ್ಣ ಪಾಟೀಲ ಝಳಕಿ, ಶಾಮ ನಾಟೀಕಾರ, ಸಂಗಯ್ಯ ಸ್ವಾಮಿ ಹಿರೇಮಠ, ಶಿವರಾಜ ಪಾಟೀಲ ಅವರಾದ, ಭೀಮಾಶಂಕರ ಚೆಕ್ಕಿ, ಶಿವಶರಣಪ್ಪ ಛಿದ್ರಿ, ಶೀಲವಂತಯ್ಯ ಮಲ್ಲೇದಮಠ, ಸಿದ್ದರಾಮಯ್ಯ ಪುರಾಣಿಕ ಭಾಗವಹಿಸಿದ್ದರು. ರವಿ ಶಹಾಪುರಕರ್ ಸ್ವಾಗತಿಸಿದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು.