Advertisement

ನೇಗಿಲಯೋಗಿಗೆ ಸುವರ್ಣ ಸಂಭ್ರಮ

11:40 AM Jun 08, 2019 | Naveen |

ಕಲಬುರಗಿ: ಸಮಾಜಮುಖೀ ಕಾಯಕ ಹಾಗೂ ಉತ್ತಮ ನಡೆ, ನುಡಿಗಳಿಂದ ಗಟ್ಟಿಯಾಗಿ ಮುನ್ನಡೆದರೆ ಮಾತ್ರ ಸರ್ವರ ಮನ ಗೆಲ್ಲಲು ಸಾಧ್ಯ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ಶಿವಾಚಾರ್ಯರು ನುಡಿದರು.

Advertisement

ಕೃಷಿ ಪಂಡಿತ, ರೈತ ವಿಜ್ಞಾನಿ, ಮುತ್ಯಾನ ಬಬಲಾದ ಗುರು ಚೆನ್ನವೀರ ವಿರಕ್ತ ಮಠದ ಪೀಠಾಧಿಪತಿ ಗುರುಪಾದಲಿಂಗ ಮಹಾ ಶಿವಯೋಗಿಗಳ ಜನ್ಮದಿನದ ಸುವರ್ಣ ಮಹೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಮುಂಗಾರು ಕೃಷಿ ಹಬ್ಬ ಉದ್ಘಾಟಿಸಿ ಹಾಗೂ ಗುರುಪಾದ ಪುಸ್ತಕ ಲೋಕಾರ್ಪಣೆಗೊಳಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸಮಾಜಕ್ಕಿಂದು ಸೂಕ್ತ ಮಾರ್ಗದರ್ಶನ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಬಬಲಾದ ಗುರುಪಾದಲಿಂಗ ಮಹಾಶಿವಯೋಗಿಗಳು ಮಾದರಿ ಕೃಷಿ ಕಾಯಕ ಹಾಗೂ ಉತ್ತಮ ನಡೆ, ನುಡಿ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದಾರೆ ಎಂದರು.

ದೇಶದ ಬೆನ್ನೆಲುಬಾಗಿರುವ ಕೃಷಿ ಕಾಯಕದಿಂದ ಜನತೆ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಕೃಷಿಗೆ ಒತ್ತು ನೀಡಿ, ಸಂದೇಶ ಬೀರುವಲ್ಲಿ ಪೂಜ್ಯರು ಯಶಸ್ವಿಯಾಗಿದ್ದಾರೆ. ನಿರಾಡಂಬರ ಜೀವಿಗಳಾಗಿ, ಸಕಲ ಬಾಂಧವರನ್ನು ತನ್ನವರೆಂದು ತಿಳಿದು, ಎಲ್ಲ ಧರ್ಮಿಯರನ್ನು ಸಹೋದರರಂತೆ, ಸೌಹಾರ್ದತೆಯಿಂದ ಕಾಣುವ, ಪ್ರಚಾರ ಬಯಸದೆ 50 ವರ್ಷಗಳ ಸಾರ್ಥಕ ಬದುಕು ನಡೆಸಿರುವ ಶ್ರೀಗಳ ಬದುಕು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಸಾರಂಗ ಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಬಹುತೇಕರು ಬಾಯಿ ಮಾತಲ್ಲಿ ಕೃಷಿ ಕಾಯಕಕ್ಕೆ ಒತ್ತು ಕೊಡಬೇಕೆಂದು ಹೇಳುತ್ತಾರೆ. ಆದರೆ ಗುರುಪಾದಲಿಂಗ ಮಹಾಶಿವಯೋಗಿಗಳು ಧಾರ್ಮಿಕ, ಸಾಮಾಜಿಕ ಕಾರ್ಯದ ಒತ್ತಡವಿದ್ದರೂ ಕೃಷಿ ಕಾಯಕ ಕೈಗೊಳ್ಳುವ ಮೂಲಕ ಗತ ಕಾಲದಂತೆ ‘ಕೃಷಿ ವೈಭವತೆ’ ಮೆರೆಯಲು ನೀಡಿರುವ ಜೀವನ ಸಂದೇಶವನ್ನು ಎಲ್ಲರೂ ಪಾಲಿಸಬೇಕಾಗಿದೆ ಎಂದರು.

Advertisement

ಚಿಂಚನಸೂರ ಸಿದ್ಧಮಲ್ಲ ಶಿವಾಚಾರ್ಯರು, ಮುಗುಳನಾಗಾಂವ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ವಿಶ್ವಕರ್ಮ ಏಕದಂಡಗಿ ಮಠದ ಗುರುನಾಥೇಂದ್ರ ಸರಸ್ವತಿ ಮಹಾಸ್ವಾಮೀಜಿ, ಮಕ್ತಂಪುರ ವಿರಕ್ತ ಮಠದ ಶಿವಾನಂದ ಮಹಾಸ್ವಾಮೀಜಿ, ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು, ರಟಕಲ್ ಹಿರೇಮಠದ ರೇವಣಸಿದ್ಧ ಶಿವಾಚಾರ್ಯರು, ವಿರಕ್ತಮಠದ ಸಿದ್ಧರಾಮ ಮಹಾಸ್ವಾಮೀಜಿ, ಅವರಾದ ಹಿರೇಮಠದ ಮರುಳಸಿದ್ಧ ಶಿವಾಚಾರ್ಯರು ಆಗಮಿಸಿದ್ದರು.

ಸಂಸದ ಡಾ| ಉಮೇಶ ಜಾಧವ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಮುಖಂಡರಾದ ಚಂದು ಪಾಟೀಲ, ಜಯಶ್ರೀ ಬಸವರಾಜ ಮತ್ತಿಮಡು ಹಾಜರಿದ್ದರು.

ಇದೇ ವೇಳೆ ಪ್ರಗತಿಪರ ರೈತರಾದ ಕವಿತಾ ಮಿಶ್ರಾ, ಜಾಫರ್‌ ಕರೀಮ್‌ ಸಾಬ್‌, ಸಿದ್ರಾಮಪ್ಪ ಕೋರೆ, ನಾಗರಾಜ ಶೇಗಜಿ, ಬಸವರಾಜ ಶೇರಿಕಾರ, ವೀರ ಯೋಧರಾದ ಗೌರಿಶಂಕರ ಹರಸೂರ, ಕಾಶೀನಾಥ ಅಣದೂರೆ, ಶಿವಾನಂದ ಬಾಳಿ, ಲಕ್ಷ್ಮೀಪುತ್ರ ಗೌರಾ, ನಾಗಣ್ಣ ಹೊಡಲ್, ಗುರುಪಾದ ಪುಸ್ತಕದ ಸಂಪಾದಕರಾದ ಗುಂಡೂರಾವ ಕಡಣಿ, ಹಣಮಂತರಾವ ಭೈರಾಮಡಗಿ, ವಿವಿಧ ದಾಸೋಹಿಗಳಾದ ಪಾಲಿಕೆ ಸದಸ್ಯ ರಾಜಕುಮಾರ ಎಚ್. ಕಪನೂರ, ಕೆ.ಎಸ್‌. ಮಾಲಿಪಾಟೀಲ, ಶಿವರಾಜ ಖಂಡ್ರೆ, ಶಿವರುದ್ರಯ್ಯ ಸ್ವಾಮಿ ಹಾಗೂ ಇತರರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಮಠದ ಭಕ್ತಮಂಡಳಿಯವರಾದ ಬಸವರಾಜ ಬಿರಾದಾರ ಮುನ್ನಳ್ಳಿ, ರಾಜುರೆಡ್ಡಿ ಅನಂತರೆಡ್ಡಿ, ಸುಖದೇವ ಪೂಜಾರಿ, ಕಲ್ಯಾಣರಾವ್‌ ಹಸರಗುಂಡಗಿ, ಚೆನ್ನವೀರ ಹಿರೇಮಠ, ಮಲ್ಲಯ್ಯ ಸ್ವಾಮಿ ಇಟಗಿ, ಸಂಗನಗೌಡ ಪಾಟೀಲ ಡೋರಜಂಬಗಾ, ರವಿ ಮ್ಯಾಕ್ಸೆಟೇಲರ್‌, ಬಸಯ್ಯ ಶಾಸ್ತ್ರೀ ಹಾಗೂ ಮುಂತಾದವರಿದ್ದರು. ಪಾಲಿಕೆ ಸದಸ್ಯ ಶಿವಾನಂದ ಪಾಟೀಲ ಅಷ್ಟಗಿ ಪ್ರಾಸ್ತಾವಿಕ ಮಾತನಾಡಿದರು. ಶಾಂತಕುಮಾರ ದುಧನಿ ಸ್ವಾಗತಿಸಿದರು, ಜೇರಟಗಿ ಮಡಿವಾಳಯ್ಯ ಶಾಸ್ತ್ರೀಗಳು ನಿರೂಪಿಸಿದರು.

ಶ್ರೀಗಳಿಂದ ಕೃತಿ ಬಿಡುಗಡೆ
ಗುರುಪಾದಲಿಂಗ ಮಹಾಶಿವಯೋಗಿಗಳ ಜೀವನ ಚರಿತ್ರೆ ಹಾಗೂ ಯಶಸ್ವಿ ಕೃಷಿ ಕಾಯಕ ಕುರಿತಾಗಿ ಹಿರಿಯ ಪತ್ರಕರ್ತರಾದ ಗುಂಡೂರಾವ ಕಡಣಿ, ಹಣಮಂತರಾವ ಭೈರಾಮಡಗಿ ಅವರು ಬರೆದು ಸಂಪಾದಿಸಿರುವ ‘ಗುರುಪಾದ’ ಕೃತಿಯನ್ನು ಹಾರಕೂಡ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ಶಿವಾಚಾರ್ಯರು ಬಿಡುಗಡೆಗೊಳಿಸಿದರು.

ಕೃಷಿ ಹಬ್ಬಕ್ಕೆ ಮಳೆ ಸಿಂಚನ
ಬೆಂಕಿಯಂತ ಬಿಸಿಲಿನಿಂದ ಕಂಗಾಲಾಗಿರುವ ಜನತೆ ಅದರಲ್ಲೂ ಮಳೆಯಿಲ್ಲದೇ ಪರದಾಡುತ್ತಿರುವ ರೈತ ವರುಣ ದೇವನಿಗೆ ಹಗಲಿರಳು ಪ್ರಾರ್ಥಿಸುತ್ತಿದ್ದು, ಮನವಿಗೆ ಸ್ಪಂದನೆ ಎನ್ನುವಂತೆ ಕೃಷಿ ಪಂಡಿತ, ಕಾಯಕಯೋಗಿ ಗುರುಪಾದಲಿಂಗ ಮಹಾ ಶಿವಯೋಗಿಗಳ ಸುವರ್ಣ ಮಹೋತ್ಸವದ ಮುಂಗಾರು ಕೃಷಿ ಹಬ್ಬದ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮಳೆ ಧರೆಗಿಳಿಯಿತು. ಮಳೆ ನಡುವೆಯೇ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next