ಕಲಬುರಗಿ: ಹಿಂದೂ-ಮುಸ್ಲಿಮರ ಭಾವೈಕೈತೆ ಸಂಕೇತವಾಗಿರುವ ಮೊಹರಂ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಮಂಗಳವಾರ ಆಚರಿಸಲಾಯಿತು.
ಮೊಹರಂ ಅಂಗವಾಗಿ ಎಲ್ಲೆಡೆ ಅಲಾಯಿ ಪೀರ್‌ಗಳ ಮೆರವಣಿಗೆ ಹಾಗೂ ಶಿಯಾ ಮುಸ್ಲಿಮರಿಂದ ಖೂನಿ ಮಾತಂ (ದೇಹದಂಡನೆ) ನಡೆಯಿತು. ನಗರದ ಮೆಕ್ಕಾ ಕಾಲೊನಿ, ಎಂಎಸ್‌ಕೆ ಮಿಲ್ ಪ್ರದೇಶ, ಗಾಜಿಪುರ ಹಾಗೂ ಮೆಹಬೂಬ ಶಾಹಿ ಇನ್ನಿತರ ಪ್ರದೇಶಗಳಲ್ಲಿ ಪೀರ್‌ಗಳನ್ನು ಬಣ್ಣದ ಶಲ್ಯ ತೊಡಿಸಿ ವಿಶೇಷ ಅಲಂಕಾರಗೊಳಿಸಿ ಮೆರವಣಿಗೆ ಮಾಡಲಾಯಿತು. ಜನತೆ ಅಲಾಯಿ ಪೀರ್‌ಗಳಿಗೆ ಧೂಪ, ಅಗರಬತ್ತಿ, ತೆಂಗಿನ ಕಾಯಿ, ಹೂವು, ಹಣ್ಣು ಅರ್ಪಿಸಿದರು.
ಅಫಜಲಪುರ ತಾಲೂಕಿನ ಗೊಬ್ಬೂರ (ಬಿ) ಗ್ರಾಮದಲ್ಲಿ ನೂರಾರು ಜನರು ಅಲಾಯಿ ಪೀರ್‌ಗಳ ಮೆರವಣಿಗೆ ನಡೆಸಿದರು. ಜಿ.ಪಂ ಮಾಜಿ ಉಪಾಧ್ಯಕ್ಷ ಅರುಣಗೌಡ ಮಾಲಿಪಾಟೀಲ, ಗ್ರಾ.ಪಂ ಅಧ್ಯಕ್ಷ ಶಿವಾನಂದ ಅಲ್ದಿ, ಅಂಬಶೆಟ್ಟಿ ಅವಂಟಿ ಮತ್ತಿತರರು ಪಾಲ್ಗೊಂಡಿದ್ದರು.
ದೇಹದಂಡನೆ: ಮೊಹರಂ ಹಬ್ಬದ ಅಂಗವಾಗಿ ಶಿಯಾ ಮುಸ್ಲಿಂರು ಕಬ್ಬಿಣದ ಸರಳು, ಬ್ಲೇಡ್‌ಗಳಿಂದ ದೇಹದಂಡನೆ ಮಾಡಿಕೊಂಡರು. ಮೊಹಮ್ಮದ್ ಪೈಗಂಬರ್ ಅವರ ಮೊಮ್ಮಗ ಇಮಾಮ್ ಹುಸೇನ್ ಧರ್ಮದ ಉಳಿವಿಗಾಗಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಶೋಕಾಚರಣೆ ನಿಮಿತ್ತ ತಮ್ಮ ದೇಹವನ್ನು ತಾವೇ ದಂಡಿಸಿಕೊಂಡರು.
ರೈಲ್ವೆ ನಿಲ್ದಾಣದಿಂದ ಸರ್ದಾರ್ ವಲ್ಲಭಭಾಯಿ ವೃತ್ತದ ವರೆಗೆ ದೇಹದಂಡಿಸಿಕೊಳ್ಳುತ್ತಾ ಮೆರವಣಿಗೆ ನಡೆಸಿದರು. ಚಿಕ್ಕ ಬಾಲಕರಿಂದ ಹಿಡಿದು ವೃದ್ಧರು ಕಪ್ಪು ಬಟ್ಟೆ ಧರಿಸಿಕೊಂಡು ಮೆರವಣಿಗೆಯಲ್ಲಿ ಸಾಗಿದರು. ಕಬ್ಬಿಣದ ಸಂಕೋಲೆ, ಸರಳಿನಿಂದ ದಂಡಿಸಿಕೊಳ್ಳುತ್ತಾ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ ದೇಹ ದಂಡಿಸಿಕೊಳ್ಳುತ್ತಲೇ ಇದ್ದರು.
ಸರ್ದಾರ್ ವಲ್ಲಭಭಾಯಿ ವೃತ್ತದಲ್ಲಿ ಸಮಾವೇಶವಾದ ನಂತರ ಇಮಾಮ್ ಹುಸೇನ್ ಅವರ ಹೋರಾಟದ ಬಗ್ಗೆ ಧರ್ಮ ಗುರುಗಳು ವಿವರಿಸಿದರು. ಮಹಿಳೆಯರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಅನೇಕ ಜನರು ಕಟ್ಟಡಗಳ ಮೇಲೆ ನಿಂತು ವೀಕ್ಷಿಸುತ್ತಿದ್ದರು. ಮುಂಜಾಗ್ರತೆ ಕ್ರಮವಾಗಿ ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.