ಕಲಬುರಗಿ: ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಆ. 1ರಿಂದ ಆರಂಭವಾಗಿರುವ ಮತ್ತೆ ಕಲ್ಯಾಣ ಅಭಿಯಾನ ಆ. 29ರಂದು ನಗರಕ್ಕೆ ಆಗಮಿಸುತ್ತಿದೆ.
ಅಭಿಯಾನದ ಅಂಗವಾಗಿ ಆ. 29ರಂದು ಬೆಳಗ್ಗೆ 11 ಗಂಟೆಯಿಂದ 2 ಗಂಟೆ ವರೆಗೆ ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ, ಸಂಜೆ 6ಕ್ಕೆ ಸಮಾವೇಶ, ರಾತ್ರಿ 8:30ಕ್ಕೆ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಮತ್ತೆ ಕಲ್ಯಾಣ ಅಭಿಯಾನದ ಜಿಲ್ಲಾ ಸ್ವಾಗತ ಸಮಿತಿ ಅಧ್ಯಕ್ಷ ಶರಣು ಪಪ್ಪಾ, ಕಾರ್ಯಾಧ್ಯಕ್ಷ ರವೀಂದ್ರ ಶಾಬಾದಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಸಾನ್ನಿಧ್ಯವನ್ನು ಸಾಣೆಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಪ್ರಾಧ್ಯಾಪಕ ಡಾ| ಆರ್. ವೆಂಕಟರೆಡ್ಡಿ, ಪ್ರಗತಿಪರ ಚಿಂತಕ ಪ್ರೊ| ಆರ್.ಕೆ. ಹುಡಗಿ, ಬಸವ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾಮರಸ್ಯ ನಡಿಗೆ: ಸಂಜೆ 4ಕ್ಕೆ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಎಸ್.ಎಂ. ಪಂಡಿತ ರಂಗಮಂದಿರದ ವರೆಗೆ ಸಕಲ ಸಹಧರ್ಮಿಯರೊಂದಿಗೆ ಸಾಮರಸ್ಯದ ನಡಿಗೆ ನಡೆಯಲಿದ್ದು, ನಗರ ಉಪ ಪೊಲೀಸ್ ಆಯುಕ್ತ ಡಿ. ಕಿಶೋರಬಾಬು ಚಾಲನೆ ನೀಡಲಿದ್ದಾರೆ. ಅಣದೂರಿನ ಪೂಜ್ಯ ಭಂತೇಜಿ ವರಜ್ಯೋತಿ, ಐವಾನ್-ಇ ಶಾಹಿ ಮೌಲಾನಾ ಇಮಾಮ್, ದಲಿತ ಸಂಘರ್ಷ ಸಮಿತಿಯ ಅರ್ಜುನ ಭದ್ರೆ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ಆರ್ಯವೈಶ್ಯ ಸಮಾಜದ ರವೀಂದ್ರ ಮುಕ್ಕಾ, ಜೈನ ಸಮುದಾಯದ ನಾಗನಾಥ ಚಿಂದೆ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಭು ಲಿಂಗ ಮಹಾಗಾಂವಕರ್, ಭಾಮ್‌ಸೆಫ್‌ನ ಸುಭಾಷ ಶೀಲವಂತ, ಶಿಖ್ ಸಮುದಾಯದ ಗುರುಮಿತ್ ಸಿಂಗ್, ಕ್ರೈಸ್ತ ಸಮುದಾಯದ ಡಾ| ರಾಬರ್ಟ್ ಮೈಖೆಲ್ ಮಿರಾಂಡಾ, ಇಸ್ಲಾಂ ಸಮುದಾಯದ ಮಹ್ಮದ್ ಯುಸೂಫ್ ಪಟೇಲ್, ಮಡಿವಾಳ ಸಮುದಾಯದ ರುಕ್ಮಣ್ಣ ಮಡಿವಾಳ, ಮಾದಾರ ಚನ್ನಯ್ಯ ಸಮುದಾಯದ ಸಂಬಣ್ಣ ಹೊಳಕುಂದಿ, ವಡ್ಡರ ಸಮುದಾಯದ ಅನೀಲ ಜಾಧವ ಹಾಗೂ ವಿವಿಧ ಕಾಯಕ ಸಮುದಾಯದ ಗಣ್ಯರು ಸಾಮರಸ್ಯ ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕ ಸಮಾವೇಶ: ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವ ಸಾರ್ವಜನಿಕ ಸಮಾವೇಶದ ಸಾನ್ನಿಧ್ಯವನ್ನು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ಸುಲಫಲ ಹಾಗೂ ಶ್ರೀಶೈಲಂ ಸಾರಂಗಮಠದ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಶರಣರ ಪ್ರತಿಭಟನೆ ಮಾರ್ಗ ವಿಷಯ ಕುರಿತು ಪ್ರಾಧ್ಯಾಪಕಿ ಡಾ| ಮೀನಾಕ್ಷಿ ಬಾಳಿ, ಶರಣ ಚಿಂತಕ ಡಾ| ಬಸವರಾಜ ಸಾದರ ಶರಣರ ಪ್ರಶ್ನೆ-ಪ್ರತಿಭಟನೆಯ ದಾರಿ ಪರ್ಯಾಯದ ಗುರಿ ಎನ್ನುವ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸೊನ್ನದ ಡಾ| ಶಿವಾನಂದ ಮಹಾಸ್ವಾಮೀಜಿ, ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು, ಹಾಗರಗುಂಡಗಿ ಶಿವಾನಂದ ಸ್ವಾಮೀಜಿ, ಚಿಗರಳ್ಳಿಯ ಸಿದ್ಧಬಸವ ಕಬೀರಾನಂದ ಸ್ವಾಮೀಜಿ, ಧುತ್ತರಗಾಂವನ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ, ಸೊನ್ನಲಗಿ ಪರ್ವತಲಿಂಗ ಮಹಾಸ್ವಾಮೀಜಿ, ಯಡ್ರಾಮಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮೀಜಿ, ಕವಲಗಾ (ಕೆ) ಅಬಿನವ ಷಣ್ಮುಖ ಶಿವಯೋಗಿ ಸ್ವಾಮೀಜಿ, ಮುಗಳನಾಗಾಂವ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಭರತನೂರಿನ ಗುರುನಂಜೇಶ್ವರ ಸ್ವಾಮೀಜಿ, ಜೇರಟಗಿಯ ಮಹಾಂತ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಮಹಾಸ್ವಾಮೀಜಿ, ಭೂಸನೂರಿನ ನಿಜಗುಣ ದೇವರು, ರೋಜಾದ ಕೆಂಚ ಬಸವ ಮಹಾಸ್ವಾಮೀಜಿ, ಪ್ರಭುಶ್ರೀತಾಯಿ, ಸುಲೇಪೇಟ ಗುರುಲಿಂಗ ಸ್ವಾಮೀಜಿ, ರಟಕಲ್ನ ಮುರುಘೇಶ್ವರ ಮಹಾಸ್ವಾಮೀಜಿ, ರೇವಣಸಿದ್ಧ ಸ್ವಾಮೀಜಿ, ನರೋಣಾದ ಮಹಾಂತ ಸ್ವಾಮೀಜಿ, ಮುಗಳಿಯ ಮಹಾನಂದ ತಾಯಿ ಹಾಜರಿರಲಿದ್ದಾರೆ ಎಂದು ತಿಳಿಸಿದರು.
ರಾಜಶೇಖರ ಶಿವಾಚಾರ್ಯರು, ಪ್ರಮುಖರಾದ ವಿಲಾಸವತಿ ಖೂಬಾ, ಆರ್.ಕೆ. ಹುಡಗಿ, ಬಸವರಾಜ ತಡಕಲ್, ಆರ್.ಜಿ. ಶೆಟಗಾರ, ಅರ್ಜುನ ಭದ್ರೆ, ರಾಜಶೇಖರ ಯಂಕಂಚಿ, ಸುನೀಲ ಹುಡಗಿ, ವಿಜಯಕುಮಾರ ತೇಗಲತಿಪ್ಪಿ ಹಾಜರಿದ್ದರು.