ವಿಜಯಪುರ: ಕಾನೂನು ಬಾಹಿರವಾಗಿ ದೇಶಿ ನಿರ್ಮಿತ ಪಿಸ್ತೂಲ್ ಹೊಂದಿದ್ದ ಆರೋಪದಲ್ಲಿ ಜಿಲ್ಲೆಯ ಅಪರಾಧ ವಿಭಾಗದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಕಲಬುರ್ಗಿ ನಗರದ ಬಿದ್ದಾಪುರ ಕಾಲೋನಿ ನಿವಾಸಿ ಅಂಬ್ರೀಶ ಸುಭಾಶ ರಾಠೋಡ ಎಂದು ಗುರುತಿಸಲಾಗಿದೆ.
ವಿಜಯಪುರ ಬಳಿಯ ಖತಿಜಾಪುರ ಗ್ರಾಮದಲ್ಲಿ ನೆಲೆಸಿರುವ ಅಂಬ್ರೀಶ ಅಕ್ರಮವಾಗಿ ದೇಶಿ ನಿರ್ಮಿತ ಪಿಸ್ತೂಲ್ ಹೊಂದಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಪರಾಧ ವಿಭಾಗದ ಪೊಲೀಸರು, 28 ಸಾವಿರ ರೂ. ಮೌಲ್ಯದ ಪಿಸ್ತೂಲ್ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಸುಭಾಸ ಪೊಲೀಸರ ವಿಚಾರಣೆ ವೇಳೆ ತಾನು ಇಂಡಿ ತಾಲೂಕ ನಂದ್ರಾಳ ಗ್ರಾಮದ ಇಜಾಜ ಬಂದೇನವಾಜ ಪಟೇಲ್ ಎಂಬ ವ್ಯಕ್ತಿಯಿಂದ ಅಕ್ರಮ ಪಿಸ್ತೂಲ್ ಖರೀದಿಸಿದ್ದಾಗಿ ಹೇಳಿದ್ದಾನೆ. ಇಜಾಜ್ ಪಟೇಲ್ ಪ್ರಕರಣವೊಂದರಲ್ಲಿ ಬಂಧಿತನಾಗಿ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾನೆ.
ಅಪರಾಧ ವಿಭಾಗದ ಅಧಿಕಾರಿ ಸುರೇಶ ಬೆಂಡೆಗುಂಬಳ ಇವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ ತಿಳಿಸಿದ್ದಾರೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.