Advertisement

ನಾಳೆಯಿಂದ ಮಹಾದೇವಿಯಕ್ಕಗಳ ಸಮ್ಮೇಳನ

03:32 PM Aug 09, 2019 | Team Udayavani |

ಕಲಬುರಗಿ: ಬಸವ ಸಮಿತಿಯ ಅಕ್ಕನ ಬಳಗ ವತಿಯಿಂದ 12ನೇ ಮಹಾದೇವಿಯಕ್ಕಗಳ ಸಮ್ಮೇಳನ ಆ.10 ಮತ್ತು 11ರಂದು ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಶರಣ ಬಸವೇಶ್ವರ ಸಂಸ್ಥಾನದ ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ಹೆಣ್ಣುಮಕ್ಕಳ ಕ್ರಿಯಾಶೀಲತೆ, ಅಭಿವ್ಯಕ್ತಿಗೆ ಮೀಸಲಾದ ಸಮ್ಮೇಳನದಲ್ಲಿ ಎರಡು ದಿನಗಳ ಕಾಲ 85 ಮಹಿಳೆಯರು ಮತ್ತು 85 ವಿದ್ಯಾರ್ಥಿನಿಯರು ವೇದಿಕೆ ಹಂಚಿಕೊಳ್ಳಲಿದ್ದಾರೆ. ದಾಂಪತ್ಯದ ಔಚಿತ್ಯ, ಮಾತು, ವ್ಯಕ್ತಿತ್ವ, ಆರೋಗ್ಯ, ಸೌಹಾರ್ದ ಬದುಕು ಮತ್ತು ಸಾಮರಸ್ಯದ ತಾತ್ವಿಕ ಚಿಂತನೆಗಾಗಿ ಶರಣರ, ಸಂತರ-ಸೂಫಿಗಳ ಚಿಂತನ ಗೋಷ್ಠಿಗಳು, ಕವಿಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಬಸವ ಸಮಿತಿ ಅಧ್ಯಕ್ಷೆ ಡಾ| ವಿಲಾಸವತಿ ಖೂಬಾ ಮತ್ತು ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷೆ ಶರಣಮ್ಮ ಕಲಬುರ್ಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆ.10ರಂದು ಬೆಳಗ್ಗೆ 8ಗಂಟೆಗೆ ಬಸವೇಶ್ವರ ಮೂರ್ತಿ ಮಾಲಾರ್ಪಣೆ ಮತ್ತು ಷಟ್ಸ್ಥಲ ಧ್ವಜಾರೋಹಣವನ್ನು ಮಾಜಿ ಶಾಸಕಿ ಅರುಣಾ ಪಾಟೀಲ ನೆರವೇರಿಸುವರು. ನಂತರ ಮಹಾದೇವಿಯಕ್ಕಗಳ ಭಾವಚಿತ್ರದ ಮೆರವಣಿಗೆ ಶ್ರೀ ಶರಣ ಬಸವೇಶ್ವರ ದಾಸೋಹ ಮಹಾಮನೆಯಿಂದ ದೇವಸ್ಥಾನದ ಪ್ರವೇಶ ದ್ವಾರದ ವರೆಗೆ, ನಂತರ ಸೇಡಂ ರಸ್ತೆಯ ಜಯನಗರದ ಮೊದಲ ಕ್ರಾಸ್‌ ಮೂಲಕ ಅನುಭವ ಮಂಟಪದ ವರೆಗೆ ನಡೆಯಲಿದೆ. ಬಳಿಕ 10:30ಕ್ಕೆ ಸಮ್ಮೇಳನವನ್ನು ಬೆಂಗಳೂರಿನ ಮಧುರಾ ಅಶೋಕ ಉದ್ಘಾಟಿಸುವರು. ಸಮ್ಮೇಳನದ ಅಧ್ಯಕ್ಷೆ ದಾಕ್ಷಾಯಿಣಿ ಅಪ್ಪ, ಡಾ| ಲೀಲಾದೇವಿ ಆರ್‌. ಪ್ರಸಾದ ಹಾಜರಿರುವರು ಎಂದು ವಿವರಿಸಿದರು.

ಮಧ್ಯಾಹ್ನ 12 ಗಂಟೆಯಿಂದ 1.30ರವರೆಗೆ ವಚನ ನೃತ್ಯ, ಶಿವಶರಣೆಯರ ವೇಷಭೂಷಣ, ಶರಣದ ಜನಪದ ಹಾಡು, ಭಾವಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 2:30ಕ್ಕೆ ‘ಸತಿಪತಿಗಳೊಂದಾದ ಭಕ್ತಿ’ ಎನ್ನುವ ಗೋಷ್ಠಿಯಲ್ಲಿ ಪ್ರೊ| ಸುಲೇಖಾ ಮಾಲಿಪಾಟೀಲ, ಡಾ| ಅನ್ನಪೂರ್ಣ ಗಂಗಾಣಿ, ಪ್ರೊ| ಸವಿತಾ ದಂಡೆ ವಿಚಾರ ಮಂಡಿಸಲಿದ್ದಾರೆ ಎಂದು ಹೇಳಿದರು.

3:30ಕ್ಕೆ ನಡೆಯುವ ‘ಮಾತು-ವಕ್ತಿತ್ವ’ ಗೋಷ್ಠಿಯಲ್ಲಿ ಡಾ| ಮಾಣಿಕಮ್ಮ ಸುಲ್ತಾನಪೂರ, ಶಾಂತಾ ಸಿದ್ಧಾಮಣಿ, ಸಾಕ್ಷಿ ಸತ್ಯಪೇಟೆ ಮಾತನಾಡುವರು. ನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

Advertisement

ಆ.11ರಂದು ಬೆಳಗ್ಗೆ 10:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 11:30ಕ್ಕೆ ‘ಆರೋಗ್ಯ ಭಾಗ್ಯ’ ಗೋಷ್ಠಿಯಲ್ಲಿ ಡಾ| ಮಹಾದೇವಿ ಮಾಲಕರೆಡ್ಡಿ, ಡಾ| ಶಿವಲೀಲಾ ದೇಸಾಯಿ ಅವರು ಗರ್ಭಿಣಿಯರಿಗೆ ಸಲಹೆ ಮತ್ತು ಮಕ್ಕಳ ತವಕ ತಲ್ಲಣ-ಪರಿಹಾರದ ಬಗ್ಗೆ ಮಾತನಾಡುವರು. ನಂತರ ಮಧ್ಯಾಹ್ನ 12:30ಕ್ಕೆ ನಡೆಯುವ ಗೋಷ್ಠಿಯಲ್ಲಿ ಡಾ| ವಿಜಯ ತೆಲಂಗ, ಡಾ| ಪರಿಮಳಾ ಅಂಬೇಕರ್‌, ಜುಲೇಖಾ ಬೇಗಂ ಅವರು ಶರಣರು, ಸೂಫಿ-ಸಂತರ ಬಗ್ಗೆ ವಿಚಾರ ಮಂಡಿಸಲಿದ್ದಾರೆ.

ಮಧ್ಯಾಹ್ನ 3:30ಕ್ಕೆ ಕವಿಗೋಷ್ಠಿ ನಡೆಯಲಿದೆ. ಸಂಜೆ 5:30ಕ್ಕೆ ಸಮ್ಮೇಳನದ ಸಮಾರೋಪದಲ್ಲಿ ಸಮ್ಮೇಳನದ ಅಧ್ಯಕ್ಷೆ ದಾಕ್ಷಾಯಿಣಿ ಅಪ್ಪ ಮಾತನಾಡುವರು. ಡಾ| ಶಾರದಾ ಜಾಧವ ಸಮಾರೋಪ ನುಡಿಗಳನ್ನಾಡುವರು.

ಬಿಬಿಎಂಪಿ ಮೇಯರ್‌ಗೆ ‘ವೈರಾಗ್ಯನಿಧಿ ಅಕ್ಕ’ ಪ್ರಶಸ್ತಿ
ಮಹಾದೇವಿಯಕ್ಕಗಳ ಸಮ್ಮೇಳನ ಅಂಗವಾಗಿ ಕೊಡಮಾಡುವ ‘ವೈರಾಗ್ಯನಿಧಿ ಅಕ್ಕ’ ಪ್ರಶಸ್ತಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಗಂಗಾಂಬಿಕಾ ಮಲ್ಲಿಕಾರ್ಜುನ ಅವರನ್ನು ಆಯ್ಕೆ ಮಾಡಲಾಗಿದ್ದು, ಅ.11ರಂದು ಸಮಾರೋಪ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬಸವ ಸಮಿತಿ ಅಧ್ಯಕ್ಷೆ ಡಾ| ವಿಲಾಸವತಿ ಖೂಬಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next