Advertisement

ಜಾಧವಗೆ ಕೇಂದ್ರ ಸಚಿವ ಸ್ಥಾನ: ವಾಲ್ಮೀಕಿ

10:05 AM May 27, 2019 | Naveen |

ವಾಡಿ: ಕಾಂಗ್ರೆಸ್‌ ಹಿರಿಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಕಲಬುರಗಿ ಭದ್ರಕೋಟೆ ಭೇದಿಸಿರುವ ಬಿಜೆಪಿಯ ಡಾ| ಉಮೇಶ ಜಾಧವ ಮೋದಿ ಸರಕಾರದಲ್ಲಿ ಸಚಿವರಾಗಲಿದ್ದಾರೆ ಎಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.

Advertisement

ರವಿವಾರ ತಮ್ಮ ಬೆಂಬಲಿಗರೊಂದಿಗೆ ದಿಢೀರ್‌ ಬೆಂಗಳೂರಿಗೆ ತೆರೆಳಿರುವ ವಾಲ್ಮೀಕಿ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಬೇಟಿಯಾಗಿ ಹೂಗುಚ್ಚ ನೀಡಿ ಕಲಬುರಗಿ ಲೋಕಸಭೆ ಕ್ಷೇತ್ರದ ಗೆಲುವಿಗೆ ಶುಭಕೋರಿದ್ದು, ನಡೆದ ಬೆಳವಣಿಗೆಯನ್ನು ‘ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಲೋಕಸಭೆ ಮತ್ತು ಚಿಂಚೋಳಿ ವಿಧಾನಸಭೆ ಉಪ ಚುನಾವಣೆಯಲ್ಲೂ ಬಿಜೆಪಿ ಗೆದ್ದಿರುವುದಕ್ಕೆ ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಎರಡೂ ಕ್ಷೇತ್ರದಲ್ಲಿ ಬಿಡದೇ ಪ್ರಚಾರ ನಡೆಸಿ ಭಾಜಪ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದ್ದ ಬಿಎಸ್‌ವೈ, ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿದ್ದಾರೆ. ಅವರು ಬಂಜಾರಾ ಸಮಾಜದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾವು ಕೃತಜ್ಞರಾಗಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲೂ ಬಿಜೆಪಿಗೆ ಹೆಚ್ಚು ಮತಗಳನ್ನು ದೊರಕಿಸಿ ಕೊಟ್ಟಿದ್ದೇವೆ. ಜಿಲ್ಲೆಯಲ್ಲಿ ಬಿಜೆಪಿ ತಳಮಟ್ಟದಿಂದ ಬಲಗೊಂಡಿರುವುದಕ್ಕೆ ಯಡಿಯೂರಪ್ಪ ಸಂತಸ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಜಾಧವ ಜತೆ ದೆಹಲಿಗೆ: ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಐತಿಹಾಸಿಕ ಗೆಲುವು ದಾಖಲಿಸಿರುವ ಡಾ| ಉಮೇಶ ಜಾಧವ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವುದಾಗಿ ಈಗಾಗಲೇ ರಾಜ್ಯ ಹಿರಿಯ ನಾಯಕರು ಭರವಸೆ ಕೊಟ್ಟಿದ್ದಾರೆ. ಅದರಂತೆ ಜಾಧವ ಅವರಿಗೆ ಸಚಿವ ಸ್ಥಾನ ನೀಡಿ ಮಾತು ಉಳಿಸಿಕೊಳ್ಳುತ್ತಾರೆ ಎನ್ನುವ ಭರವಸೆ ನನಗಿದೆ. ಸೋಮವಾರ ಚಿಂಚೋಳಿ ಶಾಸಕ ಡಾ| ಅವಿನಾಶ ಜಾಧವ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಮಂಗಳವಾರ ಜಾಧವ ಅವರೊಂದಿಗೆ ದೆಹಲಿಗೆ ತೆರಳಿ ಕೇಂದ್ರ ನಾಯಕರನ್ನು ಭೇಟಿ ಮಾಡಲಿದ್ದೇವೆ. ಬಂಜಾರಾ ಸಮುದಾಯಕ್ಕೆ ಸೇರಿದ ಸಂಸದನೊಬ್ಬ ದೆಹಲಿಯ ಸಂಸತ್‌ ಪ್ರವೇಶ ಪಡೆಯುತ್ತಿರುವುದು ಸಮುದಾಯಕ್ಕೆ ಸಂಭ್ರಮದ ಗಳಿಗೆಯಾಗಿದೆ ಎಂದು ವಾಲ್ಮೀಕಿ ತಿಳಿಸಿದ್ದಾರೆ.

ಚಿಂಚೋಳಿ ನಮ್ಮದಾಗಿದೆ-ಸರಕಾರವೂ ನಮ್ಮದೇ: ಚಿಂಚೋಳಿ ಮತಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲುತ್ತದೆಯೋ ಅದೇ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂಬ ವಾಡಿಕೆಯಂತೆ ರಾಜ್ಯ ರಾಜಕೀಯ ಪರಿಸ್ಥಿತಿ ಬದಲಾಗಲಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಆದಷ್ಟು ಬೇಗ ಪತನವಾಗಲಿದೆ. ಬಿ.ಎಸ್‌. ಯಡಿಯೂರಪ್ಪ ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಾಲ್ಮೀಕಿ ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next