ವಾಡಿ: ಈ ಹಿಂದೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಖರ್ಗೆ ನಕಲಿ ಪಟುಗಳೊಂದಿಗೆ ಕುಸ್ತಿಯಾಡಿ ಸರಳವಾಗಿ ಗೆಲ್ಲುತ್ತಿದ್ದರು. ಜಾಧವ ನೇತೃತ್ವದ ಈ ಸಲದ ಲೋಕ ಕುಸ್ತಿಯಲ್ಲಿ ಜನರೇ ಖರ್ಗೆಗೆ ಪೆಟ್ಟು ನೀಡಿ ನೆಲಕ್ಕೆ ಬೀಳಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಭವಿಷ್ಯ ನುಡಿದರು.
ಶನಿವಾರ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ರೋಡ್ ಶೋ ಕಾರ್ಯಕ್ರಮದ ವೇಳೆ
ಡಾ| ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸಿ ಅವರು ಮಾತನಾಡಿದರು.
ನಾನು ದೇವಸ್ಥಾನಗಳಿಗೆ ಹೋಗಲ್ಲ. ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಲ್ಲ ಎನ್ನುತ್ತಿದ್ದ ಮಲ್ಲಿಕಾರ್ಜುನ ಖರ್ಗೆ, ಸೋಲುವ ಭೀತಿಯಿಂದ ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದಾನವಾಜ್ ದರ್ಗಾ, ನಾಲವಾರ ಕೋರಿಸಿದ್ಧೇಶ್ವರ ಮಠ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ನನ್ನನ್ನು ಗೆಲ್ಲಿಸಿ ಎಂದು ಅಂಗಲಾಚುತ್ತಿದ್ದಾರೆ. ವಿವಿಧ ಜಾತಿಗಳ ಸಭೆಗಳನ್ನು ನಡೆಸಿ ಮತಯಾಚಿಸುತ್ತಿದ್ದಾರೆ. ಜಾಧವ ಅವರೇ ಖರ್ಗೆ ಯಾವತ್ತೂ ನಮ್ಮ ಹತ್ತಿರ ಬಂದಿರಲಿಲ್ಲ. ನಿಮ್ಮಿಂದಾಗಿಯಾದರೂ ಅವರು ನಮ್ಮ ಹತ್ತಿರ ಬರುವಂತಾಯಿತು ಎಂದು ಧಾರ್ಮಿಕ ಸಂತರು ಹೇಳುತ್ತಿದ್ದಾರೆ ಎಂದು ಛೇಡಿಸಿದರು.
ದೊಡ್ಡ ಸಂಖ್ಯೆಯಲ್ಲಿ ಬಂಜಾರಾ ಜನರು ಹೊಟ್ಟೆಪಾಡಿಗಾಗಿ ಮುಂಬೈ ಹಾಗೂ ಪುಣೆ ನಗರಗಳಿಗೆ ವಲಸೆ ಹೋಗಿದ್ದಾರೆ. ಅವರು ಮತದಾನ ಮಾಡಲು ಸ್ವಇಚ್ಛೆಯಿಂದ ತಾಂಡಾಗಳಿಗೆ ಬರುತ್ತಿದ್ದಾರೆ. ನಾನು ಅವರಿಗೆ ಹಣ ಕೊಟ್ಟು ಬಸ್ ಮೂಲಕ ಕರೆಸುತ್ತಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಖರ್ಗೆ ಅವರು ಜಿಲ್ಲೆಯ ಕಾರ್ಖಾನೆಗಳು ಮುಚ್ಚದಂತೆ ನೋಡಿಕೊಂಡು ಹೊಸ ಕೂಗಾರಿಕಾ ಕೇಂದ್ರ ಸ್ಥಾಪಿಸಿದ್ದರೆ ನಮ್ಮ ಜನ ವಲಸೆ ಹೋಗುತ್ತಿರಲಿಲ್ಲ. ಗಂಟು ಮೂಟೆ ಹೊತ್ತುಕೊಂಡು, ಮಕ್ಕಳೊಂದಿಗೆ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ಬಂಜಾರಾ ಜನರ ಸ್ಥಿತಿ ನೋಡಲಾಗುವುದಿಲ್ಲ. ಇಂತಹ ದುಸ್ಥಿತಿ ತಂದಿಟ್ಟವರು ಇದೇ ಖರ್ಗೆ ಎಂದು ವಾಗ್ಧಾಳಿ ನಡೆಸಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್.ರವಿಕುಮಾರ, ಮಾಜಿ ಶಾಸಕ ವಾಲ್ಮೀಕಿ ನಾಯಕ ಹಾಗೂ ಮಾಜಿ ಎಂಎಲ್‌ಸಿ ಶಶಿಲ ನಮೋಸಿ ಮಾತನಾಡಿದರು. ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ನಿವೇದಿತಾ ದಹಿಹಂಡೆ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಯುವ ಮೋರ್ಚಾ ಅಧ್ಯಕ್ಷ ರವಿ ಕಾರಬಾರಿ ಪಾಲ್ಗೊಂಡಿದ್ದರು. ರೋಡ್ ಶೋನಲ್ಲಿ ಭಾಗವಹಿಸಿದ್ದ ಸಾವಿರಾರು ಜನ ಕಾರ್ಯಕರ್ತರು,
ಮೋದಿ ಮೋದಿ ಎಂದು ಜಯಘೋಷಣೆ ಕೂಗಿದರು.