Advertisement

ಚಿಂಚೋಳಿ ಉಪಚುನಾವಣೆ: ಹೆಚ್ಚುತ್ತಿದೆ ಕೈ-ಕಮಲದಲ್ಲಿ ಪೈಪೋಟಿ

09:57 AM Apr 26, 2019 | Naveen |

ಚಿಂಚೋಳಿ: ಬೀದರ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಚಿಂಚೋಳಿ ಮೀಸಲು (ಪರಿಶಿಷ್ಟ ಜಾತಿ) ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರಲ್ಲಿ ಪೈಪೋಟಿ ಹೆಚ್ಚುತ್ತಿದೆ.

Advertisement

ಮೀಸಲು (ಪರಿಶಿಷ್ಟ ಜಾತಿ) ವಿಧಾನಸಭೆ ಮತಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದ ಮಾಜಿ ಶಾಸಕ ಡಾ| ಉಮೇಶ ಜಾಧವ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ತೆರವುಗೊಂಡಿರುವ ಚಿಂಚೋಳಿ ವಿಧಾನಸಭಾ ಮತಕ್ಷೇತ್ರಕ್ಕೆ ಮೇ 19ರಂದು ಉಪ ಚುನಾವಣೆಯ ಅಧಿಕೃತ ಆದೇಶ ಪ್ರಕಟವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ತೆರೆಮರೆ ಕರಸತ್ತು ನಡೆಸುತ್ತಿದ್ದಾರೆ.

ಚಿಂಚೋಳಿ ಮೀಸಲು ವಿಧಾನಸಭೆ ಮತಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಬಂಜಾರಾ ಸಮಾಜದ ಯುವ ಮುಖಂಡ ಸುಭಾಷ ರಾಠೊಡ ಮತ್ತು ಮಾಜಿ ಸಚಿವ ಬಾಬುರಾವ ಚವ್ಹಾಣ ಅವರು ಕಲಬುರಗಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಡಾ|ಮಲ್ಲಿಕಾರ್ಜುನ ಖರ್ಗೆ ಮತ್ತು ಬೀದರ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಪರ ಚುನಾವಣಾ ಪ್ರಚಾರ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.

ಕಾಂಗ್ರೆಸ್‌ ಪಕ್ಷದ ಮುಖಂಡ, ಮಾಜಿ ಸಚಿವ ಬಾಬುರಾವ ಚವ್ಹಾಣ 2008ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಕೇವಲ ಐದು ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಕೆಜೆಪಿಯಿಂದ ಬಿಜೆಪಿಗೆ ಸೇರ್ಪಡೆ ಆಗಿದ್ದರು. ಅನಂತರ ಬಿಜೆಪಿಗೆ ಗುಡ್‌ ಬೈ ಹೇಳಿ ಕಾಂಗ್ರೆಸ್‌ ಪಕ್ಷಕ್ಕೆ ಮರಳಿದ್ದಾರೆ.

ಕಲಬುರಗಿ ಮತ್ತು ಬೀದರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂಬ ಛಲದಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಸುಭಾಷ ರಾಠೊಡ ಅವರು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಸುಭಾಷ ರಾಠೊಡ ಮೊದಲಿನಿಂದಲೂ ಚಿಂಚೋಳಿಯಲ್ಲಿನ ಬಂಜಾರಾ ಸಮಾಜದ ಅನೇಕ ಮುಖಂಡರೊಂದಿಗೆ ನಂಟು ಹೊಂದಿದ್ದಾರೆ. ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಸುಭಾಷ ರಾಠೊಡ ಮತ್ತು ಮಾಜಿ ಸಚಿವ ಬಾಬುರಾವ ಚವ್ಹಾಣ ಅವರಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಕುರಿತು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

Advertisement

ಕಳೆದ 25 ವರ್ಷಗಳಿಂದ ಚಿಂಚೋಳಿ ತಾಲೂಕಿಗೆ ನಿಕಟ ಸಂಪರ್ಕ ಹೊಂದಿರುವ ಸುಭಾಷ ರಾಠೊಡ ಅವರಿಗೆ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಬಂಜಾರಾ ಸಮಾಜ ಡಿಸಿಸಿ (ಐ)ಗೆ ತೀವ್ರ ಒತ್ತಡವನ್ನು ಹಾಕಿದೆ. ಕಾಂಗ್ರೆಸ ಪಕ್ಷ ತನ್ನ ಭದ್ರಕೋಟೆ ಉಳಿಸಿಕೊಳ್ಳಲು ಯಾರಿಗೆ ಟಿಕೆಟ್ ನೀಡಬೇಕೆಂಬ ಚರ್ಚೆಯನ್ನು ಆರಂಭಿಸಿದೆ.

ಕೆಪಿಸಿಸಿ (ಐ) ಅಧ್ಯಕ್ಷ ದಿನೇಶ ಗುಂಡೂರಾವ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಸುಭಾಷ ರಾಠೊಡ ಅವರಿಗೆ ಟಿಕೆಟ್ ನೀಡಬೇಕೆಂಬ ವಿಚಾರವನ್ನು ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಬಂಜಾರಾ ಸಮಾಜದ ಅಧ್ಯಕ್ಷ ರಾಮಶೆಟ್ಟಿ ಪವಾರ, ಬಾಬು ಪವಾರ, ಮೇಘರಾಜ ರಾಠೊಡ ಹಾಗೂ ಎಡಗೈ ಮತ್ತು ಬಲಗೈ ಸಮುದಾಯದ ಭೀಮರಾವ ತೇಗಲತಿಪ್ಪಿ, ಗೋಪಾಲರಾವ ಕಟ್ಟಿಮನಿ, ಶಿವಕುಮಾರ ಕೊಳ್ಳೂರ, ಬಾಬು ಹೊನ್ನಾ ನಾಯಕ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಚಿಂಚೋಳಿ ಬಿಜೆಪಿಯಲ್ಲಿ ಮಾಜಿ ಸಚಿವ ಸುನೀಲ ವಲ್ಯಾಪುರೆ, ಜಿಪಂ ಸದಸ್ಯ ಸಂಜೀವನ್‌ ಯಾಕಾಪುರ, ಮಾಜಿ ಶಾಸಕರ ಸಹೋದರ ರಾಮಚಂದ್ರ ಜಾಧವ, ಅವಿನಾಶ ಜಾಧವ, ನಿವೃತ್ತ ಐಎಎಸ್‌ ಅಧಿಕಾರಿ ಕೆ. ರತ್ನಪ್ರಭಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮೀಸಲು ಮತಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಮಾಜಿ ಶಾಸಕ ಡಾ| ಉಮೇಶ ಜಾಧವ ತಮ್ಮ ಸಹೋದರ ರಾಮಚಂದ್ರ ಜಾಧವ ಇಲ್ಲವೆ ತಮ್ಮ ಮಗ ಅವಿನಾಶ ಜಾಧವ ಅವರಿಗೆ ಟಿಕೆಟ್ ನೀಡಬೇಕೆಂಬ ಒಳ ಒಪ್ಪಂದವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಮಾಜಿ ಸಚಿವ ಸುನೀಲ ವಲ್ಯಾಪುರೆ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಕಳೆದ ಎರಡು ಸಲ ಚುನಾವಣೆಯಲ್ಲಿ ಸೋತಿದ್ದಕ್ಕಾಗಿ ನನಗೇ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಚಿಂಚೋಳಿ ಮೀಸಲು ಮತಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾದ ಡಾ|ಉಮೇಶ ಜಾಧವ ಕುಟುಂಬದ ಯಾರಿಗೂ ಟಿಕೆಟ್ ನೀಡಬಾರದು. ಅವರು ಜನಾದೇಶ ಧಿಕ್ಕರಿಸಿ ಬಿಜೆಪಿ ಸೇರಿದ್ದಾರೆ. ಅಂತಹವರಿಗೆ ಮತ್ತೆ ಸ್ಪರ್ಧಿಸಲು ಟಿಕೆಟ್ ನೀಡಿದರೆ ಸ್ಥಳೀಯ ಬಿಜೆಪಿಯಲ್ಲಿ ಕಾರ್ಯಕರ್ತರೇ ಇಲ್ಲವೇನು ಎನ್ನುವ ಚರ್ಚೆ ನಡೆಯುತ್ತಿದೆ. ಅಲ್ಲದೇ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಸುಭಾಷ ರಾಠೊಡ, ಬಿಜೆಪಿಯಿಂದ ಮಾಜಿ ಸಚಿವ ಸುನೀಲ ವಲ್ಯಾಪುರೆ, ರಾಮಚಂದ್ರ ಜಾಧವ ಇವರಿಬ್ಬರಲ್ಲಿ ಯಾರಾದರೊಬ್ಬರು ಉಪ ಚುನಾವಣೆ ಕದನದಲ್ಲಿ ಅಂತಿಮ ಅಭ್ಯರ್ಥಿಗಳು ಆಗಲಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಂಜಾರಾ ಸಮಾಜಕ್ಕೆ ಆದ್ಯತೆ ನೀಡಿದರೆ ಮಾತ್ರ ತಾಲೂಕಿನ ತಾಂಡಾದಲ್ಲಿ ಹೆಚ್ಚಿನ ಮತಗಳು ಸಿಗಲಿವೆ. ಕಾಂಗ್ರೆಸ್‌ ತನ್ನ ಸ್ಥಾನ ಉಳಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಏ. 28 ರೊಳಗೆ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಮುಂದಿನ ನಡೆಗೆ ನಾಳೆ ಸಭೆ: ವಲ್ಯಾಪುರೆ
ಕಲಬುರಗಿ:
ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಸುನೀಲ ವಲ್ಯಾಪುರೆ ಮುಂದಿನ ನಡೆ ಕುರಿತಾಗಿ ಚರ್ಚಿಸಲು ಹಾಗೂ ನಿರ್ಣಯ ಕೈಗೊಳ್ಳಲು ಏ. 27ರಂದು ಬೆಳಗ್ಗೆ 11ಕ್ಕೆ ಚಿಂಚೋಳಿಯಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದಾರೆ. ಸಭೆಗೆ ಕ್ಷೇತ್ರದ್ಯಾಂತ ಕಾರ್ಯಕರ್ತರನ್ನು ಬರುವಂತೆ ಕೋರಲಾಗಿದೆ. ಸಭೆಯಲ್ಲಿ ಕಾರ್ಯಕರ್ತರಿಂದ ವ್ಯಕ್ತವಾಗುವ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲಾಗುವುದು. ಚಿಂಚೋಳಿ ಕ್ಷೇತ್ರದಿಂದ ರಾಜ್ಯದ ಚುನಾವಣಾ ಸಮಿತಿಯಿಂದ ತಮ್ಮ ಹೆಸರು ಹಾಗೂ ರಾಮಚಂದ್ರ ಜಾಧವ ಹೆಸರನ್ನು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಗೆ ಕಳುಹಿಸಿದ್ದಾರೆ ಎಂದು ವಲ್ಯಾಪುರೆ ತಿಳಿಸಿದ್ದಾರೆ. ಶುಕ್ರವಾರ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ. ಹೀಗಾಗಿ ಶನಿವಾರ ಮಾಜಿ ಸಚಿವರು ಕರೆದಿರುವ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ. ಟಿಕೆಟ್ ಕೊಡದಿದ್ದರೆ ಹೇಗೆ ಎಂಬುದಾಗಿ ವಲ್ಯಾಪುರೆ ಪಕ್ಷದ ವರಿಷ್ಠರಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next