Advertisement

ಇತಿಹಾಸ ಪುಟ ಸೇರಿತು ಜಾಧವ ಗೆಲುವು

09:42 AM Jun 09, 2019 | Team Udayavani |

ಕಲಬುರಗಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಹಾಗೂ ಬೀದರ್‌ ಕ್ಷೇತ್ರದಲ್ಲಿ ಬಿಜೆಪಿ ಐತಿಹಾಸಿಕವಾಗಿ ಗೆಲ್ಲಲು ಪಕ್ಷದ ನಾಯಕರ ಒಗ್ಗಟ್ಟು ಹಾಗೂ ಕಾರ್ಯಕರ್ತರ ಶ್ರಮವೇ ಕಾರಣ ಎಂದು ಬಿಜೆಪಿ ಮುಖಂಡರಾದ ಎನ್‌. ರವಿಕುಮಾರ, ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ, ಡಾ| ಎ.ಬಿ. ಮಲಕರೆಡ್ಡಿ, ಕಲಬುರಗಿ ಸಂಸದ ಡಾ| ಉಮೇಶ ಜಾಧವ, ಬೀದರ ಸಂಸದ ಭಗವಂತ ಖೂಬಾ ಹೇಳಿದರು.

Advertisement

ಬಿಜೆಪಿ ಗ್ರಾಮಾಂತರ ಜಿಲ್ಲಾ ಮತ್ತು ನಗರ ಜಿಲ್ಲಾ ಘಟಕದ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿಯ ನೂತನ ಸಂಸದರಾದ ಡಾ| ಉಮೇಶ ಜಾಧವ, ಭಗವಂತ ಖೂಬಾ ಮತ್ತು ಚಿಂಚೋಳಿ ಶಾಸಕ ಡಾ| ಅವಿನಾಶ ಜಾಧವ ಅವರಿಗೆೆ ಅಭಿನಂದನಾ ಸಮಾರಂಭದಲ್ಲಿ ನಾಯಕರು ಮಾತನಾಡಿ ಗೆಲುವಿಗೆ ತಮ್ಮದೇಯಾದ ವ್ಯಾಖ್ಯಾನ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ ಮಾತನಾಡಿ, ಚುನಾವಣೆ ಗೆದ್ದಾಗಿದೆ. ಕಾಂಗ್ರೆಸ್‌ನವರಿಗೆ ತಕ್ಕ ಪಾಠ ಕಲಿಸಿದ್ದೇವೆ. ಇನ್ನೂ ಮುಂದೆ ಯಾರನ್ನು ನೋಯಿಸುವಂತೆ ಮಾತನಾಡಬೇಡಿ. ಮುಂದಿನ ಚುನಾವಣೆ ಗುರಿ ಇಟ್ಟುಕೊಂಡು ಕೆಲಸ ಮಾಡಲು ಆರಂಭಿಸಿ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಜತೆಗೆ ಹೈಕ ಭಾಗದ ಎಲ್ಲ ಎಪಿಎಂಸಿ, ಪುರಸಭೆ, ನಗರಸಭೆ, ತಾಪಂ, ಜಿಪಂ ಹೀಗೆ ಎಲ್ಲದರಲ್ಲಿಯೂ ಅಧಿಕಾರ ಚುಕ್ಕಾಣಿ ಹಿಡಿಯುವ ಮೂಲಕ ಬಿಜೆಪಿ ನಂಬರ್‌ ಒನ್‌ ಪಕ್ಷವಾಗುವುದರ ಜತೆಗೆ ಬಲಿಷ್ಠ ಪಕ್ಷವಾಗುವಂತೆ ಮಾಡಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.

ಸನ್ಮಾನಗಳು ಅಹಂಕಾರ ತರುತ್ತವೆ. ಹೀಗಾಗಿ ಅದರ ಗುಂಗಿನಲ್ಲಿ ಮುಳುಗಬೇಡಿ. ಜನರ ಭಾವನೆ ಅರಿತು ಕೆಲಸ ಮಾಡುವ ಮೂಲಕ ಜನಮನ ಗೆಲ್ಲಿ. ಅವರ ವಿಶ್ವಾಸವನ್ನು ಗೆಲ್ಲಿಸಿ ಎಂದು ಕಿವಿಮಾತು ಹೇಳಿದರು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಖರ್ಗೆ ಸೋಲನ್ನು ಶೋಲೆ ಸಿನೆಮಾದ ದೃಶ್ಯದ ವಿವರಣೆಯೊಂದಿಗೆ ವ್ಯಾಖ್ಯಾನ ನೀಡಿದರು. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರ ತಂದೆಗೆ ಎಲೆಕ್ಷನ್‌ ಚಿಂತೆ ಬಿಡಿ ಎಂದು ಅಪ್ಪನಿಗೆ ತನ್ನ ಕ್ಷೇತ್ರದಲ್ಲಿಯೇ ಲೀಡ್‌ ಕೊಡಲಿಲ್ಲ. ಗಬ್ಬರ್‌ಸಿಂಗ್‌ನ ದತ್ತು ಪುತ್ರ ಡಾ| ಶರಣಪ್ರಕಾಶ ಪಾಟೀಲ ವೇಗದ ಓಟಕ್ಕೆ ನಮ್ಮ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಬ್ರೇಕ್‌ ಹಾಕಿದರು ಎಂದು ಹೇಳಿದರು. ಇನ್ನೂ ವಾಲ್ಮೀಕಿ ಅಂದ್ರೆ ಸಾಕು ಪ್ರಿಯಾಂಕ್‌ಗೆ ನಿದ್ರೆ ಬರುತ್ತಿಲ್ಲವಂತೆ. ಒಂದು ಲಕ್ಷ ಮತಗಳಿಂದ ಸೋಲಿಲ್ಲದ ಸರದಾರನನ್ನು ಸೋಲಿಸಿದ ಡಾ| ಜಾಧವ ಗೆಲುವು ಇತಿಹಾಸದ ಪುಟ ಸೇರುವಂತೆ ಮಾಡಿದಿರಿ. ಮುಂದಿನ ದಿನಗಳಲ್ಲಿ ಹೈ ಕ ಭಾಗದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸರ್ವನಾಶ ಆಗಲಿದೆ ಹೇಳಿದರು.

Advertisement

ಮಾಜಿ ಸಚಿವರಾದ ಬಾಬುರಾವ ಚಿಂಚನಸೂರ, ಡಾ| ಎ.ಬಿ. ಮಲಕರೆಡ್ಡಿ, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಬಿ.ಜಿ. ಪಾಟೀಲ, ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮಡು, ದತ್ತಾತ್ರೇಯ ಪಾಟೀಲ ರೇವೂರ, ಸುಭಾಷ ಗುತ್ತೇದಾರ ಮಾಜಿ ಶಾಸಕ ವಾಲ್ಮೀಕಿ ನಾಯಕ ಸೇರಿದಂತೆ ಬಿಜೆಪಿ ಮುಖಂಡರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿನಂದನಾ ಸಮಾರಂಭದಲ್ಲಿ ಗುಲ್ಬರ್ಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣರಾದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರಿಗೆ ಪುಷ್ಪವೃಷ್ಟಿ ಮಾಡುವ ಮೂಲಕ ಅಭಿನಂದಿಸಲಾಯಿತು. ಮಾಜಿ ಸಚಿವ ಡಾ| ಎ.ಬಿ. ಮಾಲಕರಡ್ಡಿ, ಬಿಜೆಪಿ ನಗರ ಜಿಲ್ಲಾಧ್ಯಕ್ಷ, ಎಂಎಲ್ಸಿ ಬಿ.ಜಿ. ಪಾಟೀಲ, ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮಡು, ದತ್ತಾತ್ರೇಯ ಪಾಟೀಲ ರೇವೂರ, ಸುಭಾಷ ಗುತ್ತೇದಾರ, ಮಾಜಿ ಶಾಸಕರಾದ ವಾಲ್ಮೀಕಿ ನಾಯಕ, ಅಮರನಾಥ ಪಾಟೀಲ, ವಿಶ್ವನಾಥ ಪಾಟೀಲ ಹೆಬ್ಟಾಳ, ಶಶೀಲ್ ನಮೋಶಿ, ಮುಖಂಡರಾದ ಚಂದು ಪಾಟೀಲ, ವಿದ್ಯಾಸಾಗರ ಕುಲಕರ್ಣಿ, ಸುಭಾಷ ಬಿರಾದಾರ, ಬಸವರಾಜ ಇಂಗಿನ್‌, ಉಮಾಕಾಂತ ನಿಗ್ಗುಡಗಿ, ಶಶಿಕಲಾ ಟೆಂಗಳಿ,ಸಾವಿತ್ರಿ ಕುಳಗೇರಿ, ರವಿ ಬಿರಾದಾರ, ಅಂಬಾರಾಯ ಅಷ್ಟಗಿ, ಶರಣಪ್ಪ ತಳವಾರ, ಸಿದ್ಧಾಜಿ ಪಾಟೀಲ, ಶರಣು ಸಜ್ಜನಶೆಟ್ಟಿ, ವಿಠ್ಠಲ್ ಜಾಧವ, ರವಿಚಂದ್ರ ಕಾಂತಿಕರ್‌, ಅವ್ವಣ್ಣ ಮ್ಯಾಕೇರಿ, ಭೀಮಣ್ಣ ಬಿಲ್ಲವ್‌, ದಯಾಘನ್‌ ಧಾರವಾಡಕರ್‌, ಜಗನ್ನಾಥ ಮಾಲಿಪಾಟೀಲ ಅವರಾದ, ಡಾ| ಇಂದಿರಾ ಶಕ್ತಿ, ಧರ್ಮಣ್ಣ ಇಟಗಾ ಮುಂತಾದವರಿದ್ದರು.

ನಿಖೀಲ್ ಗೆ ಬತ್ತಿ ಇಟ್ಟ ಮಂಡ್ಯ ಜನತೆ
ಲೋಕಸಭೆ ಚುನಾವಣೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಗಾಣಗಾಪುರಕ್ಕೆ ಬಂದಿದ್ದಾಗ, ಅಲ್ಲಿನ ಪೂಜಾರಿ ನಿಖೀಲ್ ಎಲ್ಲಿದಿಯಪ್ಪಾ ಎಂದಾಗ ಸಿಎಂ ತಬ್ಬಿಬ್ಬು ಆಗಿದ್ದರು. ತಮ್ಮ ಮಗನ ಹೆಸರು ನಿಖೀಲ್ ಪೂಜೆಗೆ ಬತ್ತಿ ತರಲು ಹೋಗಿದ್ದಾನೆ ಎಂದರು. ಅಷ್ಟರಲ್ಲಿ ಮಂಡ್ಯ ಜನ ನಿಖೀಲ್ಗೆ ಬತ್ತಿ ಇಟ್ಟು ಬಿಟ್ಟಿದ್ದರು ಎಂದು ಮಾಲೀಕಯ್ಯ ಗುತ್ತೇದಾರ ಹೇಳಿದಾಗ ನಗೆಗಡಲಲ್ಲಿ ಸಭೆ ತೇಲಾಡಿತು.

Advertisement

Udayavani is now on Telegram. Click here to join our channel and stay updated with the latest news.

Next