Advertisement

ವೀರಶೈವ-ಲಿಂಗಾಯತರ ಬೆಂಬಲ ಇರದಿದ್ರೆ 15 ಸಲ ಕೈ ಗೆಲ್ತಿರಲಿಲ್ಲ

12:18 PM Apr 13, 2019 | |

ಕಲಬುರಗಿ: ವೀರಶೈವ ಲಿಂಗಾಯತ ಸಮಾಜದ ಬೆಂಬಲವಿರದಿದ್ದರೆ ಇಲ್ಲಿಯವರೆಗೆ ನಡೆದ 17 ಲೋಕಸಭೆ ಚುನಾವಣೆಗಳಲ್ಲಿ 15 ಸಲ ಕಾಂಗ್ರೆಸ್‌ ಪಕ್ಷವೇ ಗೆಲ್ಲುತ್ತಿರಲಿಲ್ಲ. ವೀರಶೈವ-ಲಿಂಗಾಯತ ಸಮಾಜದ ಬೆಂಬಲದಿಂದಲೇ ಪಕ್ಷ ಗೆಲ್ಲುತ್ತಾ ಬಂದಿದೆ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕೆಂಬ ಸಂದೇಶವನ್ನು ಶುಕ್ರವಾರ ನಗರದ ವೀರಶೈವ ಕಲ್ಯಾಣ ಮಂಟಪ ಎದರು ನಡೆದ ಕಾಂಗ್ರೆಸ್‌-ಜೆಡಿಎಸ್‌ ವೀರಶೈವ- ಲಿಂಗಾಯತ ಸಮಾವೇಶ ರವಾನಿಸಿತು.

Advertisement

ಯಾವುದೇ ಸಮಾಜ ಯಾವುದೇ ಪಕ್ಷದ ಆಸ್ತಿಯಲ್ಲ. ಎಲ್ಲ ಪಕ್ಷಗಳಿಗೂ ಎಲ್ಲ
ಸಮಾಜದ ಬೆಂಬಲವಿರುತ್ತದೆ. ಹೀಗಾಗಿ ವೀರಶೈವ ಲಿಂಗಾಯತ ಸಮಾಜದಲ್ಲೂ ಎಲ್ಲ ಪಕ್ಷದವರಿದ್ದಾರೆಯಾದರೂ ಹೆಚ್ಚಿನ ಬೆಂಬಲ
ಕಾಂಗ್ರೆಸ್‌ಗೆ ಇದೆ. ಇದಕ್ಕೆ ಪಕ್ಷ ಗೆದ್ದಿರುವುದೇ ಸಾಕ್ಷಿಯಾಗಿದೆ. ಹೀಗಾಗಿ ಈ ಸಲವೂ ಬೆಂಬಲ ನೀಡಿ ಎಂದು ಸಮಾವೇಶದುದ್ದಕ್ಕೂ ಕೋರಲಾಯಿತು.

ಸಮಾವೇಶ ಉದ್ಘಾಟಿಸಿದ ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ, ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಮಾತನಾಡಿ,
ಸಮಾಜ ಒಡೆಯುವ ಕೆಲಸ ಬಿಡೋಣ. ಒಳ ಪಂಗಡಗಳೊಂದಿಗೆ ಬೆಳೆಸೋಣ. ಮುಖ್ಯವಾಗಿ ಬಿಜೆಪಿ ವೀರಶೈವ-ಲಿಂಗಾಯಿತರನ್ನು ಹೆಸರಿಗೆ ಮಾತ್ರ ಬಳಸುತ್ತಿದೆ. ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ ಅವರಿಗೆ ಬಿಜೆಪಿ ಅಧ್ಯಕ್ಷ ಪಟ್ಟ ಕಟ್ಟಲು ತಯಾರಿ ನಡೆದಿದ್ದೇ ಇದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ
ಈ ಚುನಾವಣೆಯಲ್ಲಿ ಸಮಾಜದ ಬಾಂಧವರು ಖರ್ಗೆ ಅವರನ್ನು ಬೆಂಬಲಿಸಬೇಕೆಂದು ಕೋರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ದೇಶದ ಭವಿಷ್ಯದ ಚುನಾವಣೆ ಇದಾಗಿರುವುದರಿಂದ ಜಾತ್ಯತೀತ ಪಕ್ಷ ಗೆದ್ದು ಜಾತಿವಾದಿ ಪಕ್ಷವನ್ನು ಸೋಲಿಸಬೇಕಾಗಿದೆ. ವೀರಶೈವ ಲಿಂಗಾಯಿತರಲ್ಲಿ ಅನೇಕ ನಾಯಕರು ಈ ನಾಡನ್ನು ಮುನ್ನಡೆಸಿದ್ದಾರೆ. ಅದೇ ರೀತಿ ಈಗಲೂ ಕಾಂಗ್ರೆಸ್‌ ಪಕ್ಷದಲ್ಲಿ ಪ್ರಾತಿನಿಧ್ಯತೆಯಿದೆ. ಹೀಗಾಗಿ ಈ ಭಾಗದ ಅಭಿವೃದ್ಧಿಗೆ ಕಂಕಣಬದ್ಧವಾಗಿರುವ ಖರ್ಗೆ ಅವರನ್ನು ಬೆಂಬಲಿಸುವ ಮುಖಾಂತರ ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದರು.

ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ವೀರಶೈವ ಲಿಂಗಾಯತ ಸಮಾಜಕ್ಕೆ ಈ ಹಿಂದೆ ಎಲ್ಲೆಲ್ಲಿ ಸಹಾಯ ಹಾಗೂ ಸಹಕಾರ ಮಾಡಬೇಕೋ ಅದನ್ನು ಮಾಡಿದ್ದೇನೆ. ಆದರೆ
ಪ್ರಚಾರ ಪಡೆದಿಲ್ಲ. ಧರ್ಮ ಮನುಷ್ಯನಿಗಾಗಿ ಹುಟ್ಟುತ್ತದೆ. ಆದರೆ ಮನುಷ್ಯನಿಗಾಗಿ ಧರ್ಮ ಹುಟ್ಟುವುದಿಲ್ಲ ಎಂದು ವಿಚಾರವಾದಿಗಳ
ಮಾತನ್ನು ಪುನರುಚ್ಚರಿಸಿದರಲ್ಲದೇ, ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ನಂತರ ಸಮಾಜದಲ್ಲಿ ಒಡಕು ತರುವ ಅನೇಕ ಸಂಗತಿಗಳು ನಡೆದಿವೆ
ಎಂದು ಆರೋಪಿಸಿದರು.

Advertisement

ಗೃಹ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಮಾಡಿದ ಉಪಕಾರ ಸ್ಮರಣೆ ಮಾಡೋದು ಧರ್ಮವಾಗಿದೆ. ವೀರಶೈವ-ಲಿಂಗಾಯಿತರಲ್ಲಿ ಸಾತ್ವಿಕವಾಗಿ ಭಿನ್ನಾಭಿಪ್ರಾಯ ಇರಬಹುದು. ಆದರೆ ಅದು ಚುನಾವಣೆಗೆ ತರುವುದು
ಸೂಕ್ತವಲ್ಲ ಎಂದರು.

ಸಚಿವರು ಆರಂಭದಲ್ಲಿ ಎಲ್ಲ ಗಣ್ಯರ ಹೆಸರುಗಳನ್ನು ಹೇಳುತ್ತಾ ಲಿಂಗಾಯತ
ಬಾಂಧವರೇ ಎಂದರು. ಆದರೆ ವೀರಶೈವ ಎಂಬುದಾಗಿ ಸೇರಿಸಿ ಹೇಳಲಿಲ್ಲ. ಅದೇ ರೀತಿ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ತಮ್ಮ ಭಾಷಣದಲ್ಲಿ ಕುಲಬಾಂಧವರು ಎಂಬುದಾಗಿ ಪದೇ ಪದೇ ಹೇಳಿರುವುದು ಕಂಡು ಬಂತು.

ಮಾಜಿ ಸಚಿವರಾದ ಡಾ| ಶರಣಪ್ರಕಾಶ ಪಾಟೀಲ, ಕೆ.ಬಿ. ಶಾಣಪ್ಪ, ಶಾಸಕರಾದ
ಡಾ| ಅಜಯಸಿಂಗ, ಎಂ.ವೈ. ಪಾಟೀಲ, ಶರಣಬಸಪ್ಪ ದರ್ಶನಾಪುರ, ಮಾಜಿ ಶಾಸಕ ಬಿ.ಆರ್‌. ಪಾಟೀಲ, ಜೆಡಿಎಸ್‌ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್‌, ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ ಮುಂತಾದವರು ಮಾತನಾಡಿದರು.

ಸಚಿವ ರಾಜಶೇಖರ ಪಾಟೀಲ ಹುಮನಾಬಾದ, ಶಾಸಕರಾದ ಯಶ್ವಂತರಾಯ
ಪಾಟೀಲ ಇಂಡಿ, ಕೆ.ಸಿ.ಕೊಂಡಯ್ಯ, ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ, ಮಾಜಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಮುಖಂಡರಾದ ರಾಜೇಂದ್ರ ಪಾಟೀಲ ರೇವೂರ,
ಡಾ| ಭೀಮಾಶಂಕರ ಬಿಲಗುಂದಿ, ಬಸವರಾಜ ಭೀಮಳ್ಳಿ, ಪ್ರೊ| ಆರ್‌.ಕೆ ಹುಡುಗಿ, ಮಾಜಿ ಮಹಾಪೌರ ಶರಣಕುಮಾರ ಮೋದಿ, ಜಿಲ್ಲಾ
ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ಹಾಗೂ ಮುಂತಾದವರಿದ್ದರು. ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ನಿರೂಪಿಸಿದರು, ಶಾಸಕ ಅಲ್ಲಮ ವೀರಭದ್ರಪ್ಪ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next