ಕಲಬುರಗಿ: ನನ್ನ ಗೆಲುವಿನ ಬಗ್ಗೆ ಯಾರಿಗೂ ಯಾವುದೇ ಅನುಮಾನ ಬೇಡ. ಚುನಾವಣೆಯಲ್ಲಿ 11 ಬಾರಿ ಗೆಲುವು ಸಾಧಿಸಿದ್ದೇನೆ. 12ನೇ ಬಾರಿಯೂ ಗೆಲ್ಲುತ್ತೇನೆ. ನನ್ನ ವಿರೋಧಿಗಳು ಏನೇ ಹೇಳಿದರೂ ಕಲಬುರಗಿ ಜನ ನನ್ನನ್ನು ದಿಲ್ಲಿಗೆ ಕಳುಹಿಸಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ, ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಬ್ರಹ್ಮಪೂರದ ಬಸವ ನಗರದ ಮತಗಟ್ಟೆ ಸಂಖ್ಯೆ 119ರಲ್ಲಿ ಮಂಗಳವಾರ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 23ರಂದು ಎಲ್ಲರನ್ನೂ ಸಂತೋಷ ಪಡಿಸುವ ವಾತಾವರಣ ನಿರ್ಮಾಣವಾಗುತ್ತದೆ. ನಾನು ಪೇಪರ್ ಚೆನ್ನಾಗಿ ಬರೆದಿದ್ದೇನೆ. ಎಲ್ಲ ಪ್ರಶ್ನೆಗಳಿಗೆ ಉತ್ತರ ಬಿಡಿಸಿದ್ದೇನೆ. ಉತ್ತರ ಚೆನ್ನಾಗಿ ಕೊಟ್ಟ ಮೇಲೆ ಅಂಕವೂ ಚೆನ್ನಾಗಿ ಬರುತ್ತದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಮುಖ್ಯ. ಆದರೆ, ಈ ಚುನಾವಣೆಯನ್ನೇ ನರೇಂದ್ರ ಮೋದಿ ಮುಗಿಸಬೇಕೆಂದು ಹೊರಟಿದ್ದಾರೆ. ನಾವು ಮೋದಿ ಅವರ ಈ ಯತ್ನವನ್ನು ತಡೆಯಬೇಕು. ಪ್ರಜಾಪ್ರಭುತ್ವ ಉಳಿಯಬೇಕು. ಸಂವಿಧಾನಬದ್ಧವಾಗಿ ಸರ್ಕಾರ ನಡೆಯಬೇಕೆಂದು ಹೋರಾಟ ನಡೆಸುತ್ತಿದ್ದೇವೆ. ನಮ್ಮದು ಸಿದ್ಧಾಂತಗಳ ಮೇಲಿನ ಹೋರಾಟವಾಗಿದ್ದು ಜನ ನಮ್ಮೊಂದಿಗೆ ಇದ್ದಾರೆ ಎಂದರು.
ನಮ್ಮನ್ನು ಎಷ್ಟೇ ತುಳಿಯಬೇಕೆಂದು ಪ್ರಯತ್ನ ಪಟ್ಟರೂ ಮೋದಿ, ಅಮಿತ್ ಶಾ ಅವರಿಂದ ಸಾಧ್ಯವಿಲ್ಲ. ಕಲಬುರಗಿಗೆ ಆರ್‌ಎಸ್‌ಎಸ್ ಜನರನ್ನು ಮತ್ತು ಹಣವನ್ನು ಕಳುಹಿಸಿದ್ದಾರೆ. ಇಷ್ಟೆಲ್ಲ ಮಾಡಿದರೂ ಕಲಬುರಗಿ ನನ್ನನ್ನು ಕೈ ಬಿಡಲ್ಲ. ಎಷ್ಟೆ ತೊಂದರೆಯಾದರೂ ಮತದಾರರು ಸಹಿಸಿಕೊಂಡು ನೂರಕ್ಕೆ ನೂರರಷ್ಟು ನನ್ನನ್ನು ಆರಿಸಿ ತರುತ್ತಾರೆ. ಕಳೆದ ಚುನಾವಣೆಗಿಂತ ಹೆಚ್ಚಿನ ಮತಗಳಿಂದ ಆರಿಸಿ ಬರುವ ವಿಶ್ವಾಸವಿದೆ.
ಗಲ್ಲಿಯಲ್ಲಿ ಜಗಳವಾಡಿದ ಮಕ್ಕಳು ನಮ್ಮಪ್ಪನಿಗೆ ಹೋಗಿ ಹೇಳ್ತೀನಿ ಅಂತಾರೆ. ಇದು ಹಾಗೆ, ನನಗೆ ಬೇಡ ನಮ್ಮಪ್ಪನ ನೋಡಿ ಮತ ಕೊಡಿ ಎಂದು ಬಿಜೆಪಿಯವರು ಅಂತಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಿಳಿಸಲು ಸಾಧ್ಯವಿಲ್ಲ. ಬಿಜೆಪಿ ರಾಜಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅನೇಕ ದಿನಗಳಿಂದ ಸಮ್ಮಿಶ್ರ ಸರ್ಕಾರ ಬಿಳಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಆದರೆ, ಯಡಿಯೂರಪ್ಪ ಕನಸು ನನಸಾಗಲ್ಲ. ಅವರ ಕನಸು ಕನಸಾಗಿಯೇ ಉಳಿಯುತ್ತದೆ.
•ಮಲ್ಲಿಕಾರ್ಜುನ ಖರ್ಗೆ,
ಕಾಂಗ್ರೆಸ್ ಹಿರಿಯ ನಾಯಕ