Advertisement

ಬಿರು ಬಿಸಿಲಲ್ಲೂ ಭರ್ಜರಿ ಮತದಾನ

10:30 AM Apr 24, 2019 | Team Udayavani |

ಸೇಡಂ: ಲೋಕಸಭೆ ಚುನಾವಣೆ ಮತದಾನ ಕೆಲ ಕಾರ್ಯಕರ್ತರ ನಡುವಿನ ಜಗಳ, ಗೊಂದಲ ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ಜರುಗಿತು.

Advertisement

ತಾಲೂಕಿನಾದ್ಯಂತ ಬೆಳಗ್ಗೆ 7ಗಂಟೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಬಿಸಿಲ ಝಳವನ್ನೂ ಲೆಕ್ಕಿಸದೆ ಜನ ಸಾಲು ಸಾಲಾಗಿ ಬಂದು ಮತ ಚಲಾಯಿಸುತ್ತಿರುವ ದೃಶ್ಯ ಬಹುತೇಕ ಬೂತ್‌ಗಳೆದುರು ಕಂಡು ಬಂತು. ಬೆಳಗ್ಗೆ 9 ಗಂಟೆ ನಂತರ ಬಿಸಿಲ ಝಳ ತನ್ನ ಶಕ್ತಿ ವೃದ್ಧಿಸಿಕೊಳ್ಳುತ್ತಲೇ ಇತ್ತು. ಮಧ್ಯಾಹ್ನ ಹೊತ್ತಿಗೆ 40 ರಿಂದ 41 ಡಿಗ್ರಿ ಆದಾಗಲೂ ಮತದಾರರು ಮತಕೇಂದ್ರಗಳತ್ತ ಬರುವುದು ನಿಂತಿರಲಿಲ್ಲ.

ಕೆಟ್ಟ ಮತಯಂತ್ರಗಳು: ಮತದಾನ ಪ್ರಕ್ರಿಯೆ ಪ್ರಾರಂಭವಾಗುತ್ತಲೇ ಊಡಗಿಯಲ್ಲಿ ಮೊದಲಿಗೆ ಮತಯಂತ್ರ ಕೈಕೊಟ್ಟಿತ್ತು. ನಂತರ ಪಟ್ಟಣದ ಸಣ್ಣ ಅಗಸಿ, ಗೋದಾಮ ಏರಿಯಾ, ಕೋಲಕುಂದಾ, ಮುಧೋಳ, ಬಟಗೇರಾ, ಹಾಬಾಳ ಒಳಗೊಂಡಂತೆ ಬಹುತೇಕ ಕಡೆಗಳಲ್ಲಿ ಮತಯಂತ್ರ ಕೈಕೊಟ್ಟಿತ್ತು. ನಂತರ ಸಿಬ್ಬಂದಿ ದುರಸ್ತಿಗೊಳಿಸಿ, ಮತದಾನಕ್ಕೆ ಅನುವು ಮಾಡಿಕೊಟ್ಟರು.

ಜಿಲ್ಲೆಯಲ್ಲೇ ಹೆಚ್ಚಿದ ಪ್ರಮಾಣದ ಮತದಾನ: ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಗೆ ಹೋಲಿಸಿದರೆ ಸೇಡಂ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಶೇ. 60 ಮತದಾನವಾಗಿದ್ದು, ಬಿಸಿಲ ಝಳದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿರುವುದು ಅಚ್ಚರಿ ಮೂಢಿಸಿದೆ.

ಪತ್ನಿ ಸಮೇತ ಗಣ್ಯರ ಮತದಾನ: ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಪತ್ನಿ ಸಂತೋಷಿರಾಣಿ ಜೊತೆಗೂಡಿ ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ಮತದಾನ ಮಾಡಿದ್ದಾರೆ. ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ತಮ್ಮ ಪತ್ನಿಯೊಂದಿಗೆ ಊಡಗಿ ಗ್ರಾಮದಲ್ಲಿ ಮತ ಚಲಾಯಿಸಿದ್ದಾರೆ.

Advertisement

ಸಖೀ ಬೂತ್‌: ಮಹಿಳೆಯರನ್ನು ಸೆಳೆಯಲು ಸ್ಥಾಪಿಸಲಾಗಿದ್ದು ಸಖೀ ಬೂತ್‌ ಮಹಿಳೆಯರನ್ನು ಸೆಳೆಯುತ್ತಿತ್ತು. ಸುಸಜ್ಜಿತ ವ್ಯವಸ್ಥೆ, ಆಸನ ವ್ಯವಸ್ಥೆ, ಕೂಲರಗಳು ಹಾಗೂ ಬೂತ್‌ ವಿನ್ಯಾಸ ಮಹಿಳೆಯರನ್ನು ಆಕರ್ಷಿಸುತ್ತಿತ್ತು.

ಲಘು ಲಾಠಿ ಪ್ರಹಾರ
ಪಟ್ಟಣದ ಮಾತೃಛಾಯಾ ಕಾಲೇಜು ಎದುರು ಮತದಾರರಿಗೆ ಕಾಂಗ್ರೆಸ್‌ಗೆ ಮತ ಹಾಕಲು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕೈಕೈ ಮಿಲಾಯಿಸಿದ ಘಟನೆ ನಡೆಯಿತು. ತಾಲೂಕಿನ ಬಟಗೇರಾ (ಕೆ) ಗ್ರಾಮದಲ್ಲೂ ಇದೇ ಕಾರಣಕ್ಕಾಗಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿಯಾಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಪಿಎಸ್‌ಐ ಸುನೀಲಕುಮಾರ ಮೂಲಿಮನಿ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು. ಪೊಲೀಸ್‌ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next