ಶಹಾಬಾದ: ಬ್ರಿಟಿಷರ್ ಜತೆ ಸೇರಿ ನಮ್ಮನ್ನು ಗುಲಾಮರನ್ನಾಗಿ ಮಾಡುವುದಕ್ಕೆ ಸಹಕಾರ ನೀಡಿದ ಬಿಜೆಪಿಯವರು ಇಂದು ನಮಗೆ ದೇಶಭಕ್ತಿ ಬಗ್ಗೆ ಕಲಿಸುತ್ತಿದ್ದಾರೆ. ಇಂತಹವರಿಗೆ ಎಂದಿಗೂ ಮತ ನೀಡಬೇಡಿ ಎಂದು ರಾಜ್ಯಸಭಾದ ವಿರೋಧ ಪಕ್ಷ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಹೇಳಿದರು.
ನಗರಸಭೆ ಮುಂಭಾಗದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಆಯೋಜಿಸಲಾದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಪ್ರಾಣ ಬಿಟ್ಟಿದ್ದಾರೆ. ರಕ್ತ ಹರಿಸಿದ್ದಾರೆ. ಜೈಲಿಗೆ ಹೋಗಿ ಬಂದಿದ್ದಾರೆ. ಗುಂಡೇಟು ತಿಂದಿದ್ದಾರೆ. ಬಿಜೆಪಿಯವರ ಒಬ್ಬ ವ್ಯಕ್ತಿಯು ಸ್ವಾತಂತ್ರ್ಯಕ್ಕಾಗಿ ಬೆವರು ಹರಿಸಿಲ್ಲ. ಇಂತಹವರು ನಮಗೆ ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿ ಒಬ್ಬ ವ್ಯಕ್ತಿಯಾದರೂ ಸ್ವಾತಂತ್ರ್ಯಕ್ಕಾಗಿ ಕೊನೆ ಪಕ್ಷ ಜೈಲಿಗೆ ಹೋದ ಉದಾಹರಣೆಗಳಿವೆಯಾ? ಎಂಬುದನ್ನು ಹೇಳಲಿ. ಅದನ್ನು ಬಿಟ್ಟು ಇಲ್ಲಸಲ್ಲದ ಮಾತನ್ನು ಹೇಳುತ್ತಿದ್ದಾರೆ. ಇಂದು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಸಮಾಜದಲ್ಲಿ ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದ ಜನರಲ್ಲಿ ಕಂದಕಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಿಂದು-ಮುಸಲ್ಮಾನರ ನಡುವೆ ಗೋಡೆ ನಿರ್ಮಾಣ ಮಾಡಿ ಬೆಂಕಿ ಹಚ್ಚುವ ಕೆಲಸ ಈ ಐದು ವರ್ಷದ ಮೋದಿ ಸರ್ಕಾರದಿಂದ ನಡೆದಿದೆ. ಮೋದಿ ಐದು ವರ್ಷಗಳಲ್ಲಿ ಸುಳ್ಳೆ ಹೇಳುತ್ತಾ ಜನರಿಗೆ ಮೋಸ ಮಾಡಿದ್ದಾರೆ. ದೇಶದಲ್ಲಿ ಭಾತೃತ್ವ, ಸಹೋದರತ್ವ ನಿರ್ಮಾಣ ಮಾಡಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಹೇಳಿದರು.
ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಫೆಲ್ ಒಪ್ಪಂದದಲ್ಲಿ 30 ಸಾವಿರ ಕೋಟಿ ಹಗರಣ ಮಾಡಿದ ಮೋದಿ ಸರ್ಕಾರ ಈಗ ದೇಶದ ಬಗ್ಗೆ ಮಾತನಾಡುತ್ತಾರೆ. ನಮ್ಮ ದೇಶದ ಸಾವಿರಾರು ಕೋಟಿ ರೂ. ಲೂಟಿ ಮಾಡಿದ್ದರೂ, ಚೌಕಿದಾರ ಸುಮ್ಮನಿದ್ದಾನೆ. ನಾನು ದೇಶದ ಚೌಕಿದಾರ ಎನ್ನುವ ಮೋದಿ ಬ್ಯಾಂಕ್ ಲೂಟಿ ಮಾಡಿಕೊಂಡು ಹೋಗುತ್ತಿದ್ದರೂ ಚೌಕಿದಾರ ಮಾತ್ರ ಆರ್‌ಎಸ್‌ಎಸ್‌ನವರ ನಶೆಯಲ್ಲಿದ್ದಾನೆ. ದೇಶಕ್ಕಾಗಿ ಪ್ರಾಣ ಬಿಟ್ಟವರು ನಾವು, ದೇಶಕ್ಕಾಗಿ ಹೋರಾಟ ಮಾಡಿದವರು ನಾವು. ಬಿಜೆಪಿಯ ನಾಯಿ ಕೂಡ ಸತ್ತಿಲ್ಲ. ದೇಶದ ಬಗ್ಗೆ ಮಾತಾಡ್ತಿರಾ. ದೇಶ ಉಳಿಸೋರು ನೀವಲ್ಲ. ಈ ದೇಶದ ಸೈನಿಕರು. ಅವರ ರಕ್ತದ ಮೇಲೆ, ಹೆಣದ ಮೇಲೆ ರಾಜಕೀಯ ಮಾಡಿ, ವೋಟ್ ಕೇಳಲು ಹೊರಟಿದ್ದಾರೆ. ಇವರಿಗೆ ನಾಚೀಕೆಯಾಗಬೇಕೆಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಕೆ.ಬಿ. ಶಾಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಶೀದ ಮರ್ಚಂಟ್ ಮಾತನಾಡಿದರು. ಮುಖಂಡರಾದ ವಿಜಯಕುಮಾರ ರಾಮಕೃಷ್ಣ, ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರ್, ಮಾಜಿ ಸಚಿವ ಬಾಬುರಾವ ಚವ್ಹಾಣ, ಅರವಿಂದ ಅರಳಿ, ಚಂದ್ರಿಕಾ ಪರಮೇಶ್ವರ, ಮೃತ್ಯುಂಜಯ ಹಿರೇಮಠ, ಶಿವರಾಜ ಕೋರೆ, ಗಿರೀಶ ಕಂಬಾನೂರ, ಸುಭಾಷ ಪವಾರ, ವಿಜಯಕುಮಾರ ಮುಟ್ಟತ್ತಿ, ನಿಂಗಣ್ಣ ದೇವಕರ್, ಸಾಹೇಬಗೌಡ ಬೋಗುಂಡಿ, ಅನ್ವರ ಪಾಶಾ, ಜೆಡಿಎಸ್ ಅಧ್ಯಕ್ಷ ರಾಜ್ ಮಹ್ಮದ್‌ರಾಜಾ, ಲೋಹಿತ್ ಕಟ್ಟಿ ಸೇರಿದಂತೆ ಕಾಂಗ್ರೆಸ್ ಹಾಗೂ ಜನತಾದಳದ ಮುಖಂಡರು ಹಾಜರಿದ್ದರು.