Advertisement

‘ಕೈ’ಕೊನೆ ತಂತ್ರ-ಆಟಕ್ಕೆ ಮರುಳಾಗಬೇಡಿ

10:06 AM Apr 22, 2019 | |

ಕಲಬುರಗಿ: ಅಭಿವೃದ್ಧಿ ಮಾಡಬೇಕೆಂಬ ಮಹಾದಾಸೆಯೊಂದಿಗೆ ತಮ್ಮೆದುರಿಗೆ ಬಂದು ನಿಲ್ಲಲಾಗಿದೆ. ಈ ಅಗ್ನಿ ಪರೀಕ್ಷೆಯಲ್ಲಿ ಕೈ ಹಿಡಿಯುವಿರೆಂದು ಬಲವಾದ ನಿರೀಕ್ಷೆ ಹೊಂದಲಾಗಿದೆ. ಆದರೆ ಚುನಾವಣೆಯ ಕೊನೆ ಎರಡು ದಿನಗಳಲ್ಲಿ ಕಾಂಗ್ರೆಸ್‌ ಪಕ್ಷದವರು ನಡೆಸುವ ಆಮೀಷ ಹಾಗೂ ತಂತ್ರಗಳಿಗೆ ಒಳಗಾಗದೇ ಮನಸಾಕ್ಷಿಯಾಗಿ ಮತ ಚಲಾಯಿಸುವಂತೆ ಬಿಜೆಪಿ ಲೋಕಸಭಾ ಅಭ್ಯರ್ಥಿ ಡಾ| ಉಮೇಶ ಜಾಧವ ಮನವಿ ಮಾಡಿದರು.

Advertisement

ಪ್ರಚಾರದ ಕೊನೆ ದಿನವಾದ ರವಿವಾರ ನಗರದ ರೇವಣಸಿದ್ದೇಶ್ವರ ಕಾಲೋನಿ ಸೇರಿದಂತೆ ವಿವಿಧೆಡೆ ನಡೆದ ಚುನಾವಣಾ ಪ್ರಚಾರಸಭೆ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷದ ಅಭ್ಯರ್ಥಿಗಳು ತೋಳ್ಬಲ, ಹಣಬಲ ಹಾಗೂ ಅಧಿಕಾರದಿಂದ ಬಲಾಡ್ಯರಾಗಿದ್ದಾರೆ.

ಅವರು ಗೆದ್ದರೆ ಮತ್ತೆ 5 ವರ್ಷ ನಂತರವೇ ತಮ್ಮ ಮುಂದೆ ಬರುತ್ತಾರೆ. ಆದರೆ ತಾವು ಗೆದ್ದರೆ
ಸದಾ ತಮ್ಮೆದುರಿಗೆ ಇರುವೆನು ಎಂಬುದು ಈಗಾಗಲೇ ತಮಗೆ ಮನವರಿಕೆಯಾಗಿದೆ. ಆದ್ದರಿಂದ
ಯೋಚಿಸಿ ನಿರ್ಧಾರ ಕೈಗೊಳ್ಳಿ. ದೇಶದ ಹಿತದೃಷ್ಟಿಯನ್ನು ಸಹ ನೋಡಿ ಎಂದರು.

ಇದೊಂದು ಸಲ ಅವಕಾಶ ನೀಡಿ ನೋಡಿ. ಐದು ವರ್ಷಗಳ ಕಾಲ ಇಷ್ಟು ದಿನಗಳ ಕಾಲ ಆಗದಿರುವ ಕೆಲಸ ಮಾಡಿ ತೋರಿಸುವೆ. ಕುಡಿಯುವ ನೀರಿನ
ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ದೊಡ್ಡ ಯೋಜನೆ ಹಮ್ಮಿಕೊಳ್ಳಲಾಗುವುದು. ಪ್ರಧಾನಿ ಮೋದಿ ಕಲಬುರಗಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಕೇಳಿದ ಕಾಮಗಾರಿ ಇಲ್ಲವೇ ಯೋಜನೆಗೆ
ಇಲ್ಲ ಎನ್ನುವುದಿಲ್ಲ ಎಂಬ ಭಾವನೆ ತಮ್ಮಲ್ಲಿ ಹಾಗೂ ಈ ಭಾಗದ ಬಿಜೆಪಿ ನಾಯಕರಲ್ಲಿದೆ. ಹೀಗಾಗಿ ಈ ಭಾಗ ಹೊಸ ದಿಕ್ಕಿನಿಂದ ಸಾಗಲು ಎಲ್ಲ ಜನರ ಬೆಂಬಲದಿಂದಲೇ ಸಾಧ್ಯ ಎಂದು ಡಾ| ಜಾಧವ
ಮಾರ್ಮಿಕವಾಗಿ ನುಡಿದರು.

ನಗರದ ಯರಗೋಳ ಕಲ್ಯಾಣ ಮಂಟಪದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಡಾ| ಉಮೇಶ ಜಾಧವ, ಮೋದಿ ಹೆಸರಿನಲ್ಲಿ ಮತ ಕೇಳಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್‌ನವರು ಯಾರ ಹೆಸರಿನ ಮೇಲೆ ಮತ ಕೇಳುತ್ತಾ ಬಂದಿದ್ದಾರೆ ಎಂಬುದು ಚಿಕ್ಕ ಮಗುವಿಗೂ ಗೊತ್ತು ಎಂದು ಟಾಂಗ್‌ ನೀಡಿದರು. ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ ಮಾತನಾಡಿ, ಕಲಬುರಗಿ ದಕ್ಷಿಣದಲ್ಲಿ ಈ ಹಿಂದೆ ತಮ್ಮ ತಂದೆ-ತಾಯಿ ಹಾಗೂ ತಮಗೆ ಬೆಂಬಲ ನೀಡಿರುವಂತೆ ಡಾ| ಜಾಧವ ಅವರಿಗೆ ಹೆಚ್ಚಿನ ಬೆಂಬಲ ನೀಡಬೇಕೆಂದು ಕೋರಿದರು.

Advertisement

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಮಾತನಾಡಿ, 2014ರಕ್ಕಿಂತಲೂ ಹೆಚ್ಚಿನ ಸ್ಥಾನ ಬಿಜೆಪಿ ಪಡೆಯುವುದರಿಂದ ನರೇಂದ್ರ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಲಿದ್ದಾರೆ. ಸದೃಢ ಭಾರತ ನಿರ್ಮಾಣಕ್ಕಾಗಿ ಬಿಜೆಪಿಗೆ ಬೆಂಬಲಿಸಿ ಈ ಹಿನ್ನೆಲೆಯಲ್ಲಿ ತಮ್ಮೆಲ್ಲರ ಬೆಂಬಲವೇ ಮುಖ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಚಿತ್ರದುರ್ಗ ಅಭ್ಯರ್ಥಿ ಎ. ನಾರಾಯಣಸ್ವಾಮಿ, ಮಾಜಿ ಶಾಸಕ ಶಶೀಲ್‌ ನಮೋಶಿ, ರಾಜು ವಾಡೇಕಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next