Advertisement

ಈಗ ಸೋಲು-ಗೆಲುವಿನ ಲೆಕ್ಕಾಚಾರ

10:57 AM Apr 25, 2019 | Team Udayavani |

ಕಲಬುರಗಿ: ತೀವ್ರ ಜಿದ್ದಾಜಿದ್ದಿ ಕಂಡ ಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣೆಯಲ್ಲಿ ಒಟ್ಟಾರೆ ಅಂತಿಮವಾಗಿ ಶೇ. 60.88 ಮತದಾನವಾಗಿದ್ದು, ಈ ಸರಾಸರಿ ಮತದಾನ ಆಧಾರದ ಮೇಲೆ ಲೆಕ್ಕಾಚಾರಗಳು ಹತ್ತಾರು ನಿಟ್ಟಿನಲ್ಲಿ ನಡೆದಿವೆ.

Advertisement

ಕಳೆದ 2014ಕ್ಕಿಂತ ಈ ಸಲ ಮೂರು ಪ್ರತಿಶತ ಮತದಾನ ಹೆಚ್ಚಳವಾಗಿರುವುದು ತಮಗೆ ಅನುಕೂಲ ಎನ್ನುವುದಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಉಲ್ಲೇಖೀಸುತ್ತಿವೆ. ಯಾವ್ಯಾವ ಕ್ಷೇತ್ರದಲ್ಲಿ ಶೇಕಡಾವಾರು ಮತದಾನ ಪ್ರಮಾಣ ಎಷ್ಟಾಗಿದೆ ಎನ್ನುವುದನ್ನು ಮುಂದಿಟ್ಟುಕೊಂಡು ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.

2014ರಲ್ಲಿ 10 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರೆ ಪ್ರಸಕ್ತ 2019ರ ಚುನಾವಣೆಯಲ್ಲಿ ಒಟ್ಟಾರೆ 11.84 ಲಕ್ಷ ಮತದಾರರು ಹಕ್ಕು ಚಲಾಯಿಸಿದ್ದಾರೆ. 1.84 ಮತದಾರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮತದಾರರು ಇದ್ದಾರೆ. ಹೀಗಾಗಿ ಈ ಮತಗಳು ಬಿಜೆಪಿಗೆ ಸಿಂಹಪಾಲು ದೊರಕುತ್ತವೆ ಎನ್ನುವ ಲೆಕ್ಕಾಚಾರವನ್ನು ಹಾಕಲಾಗುತ್ತಿದೆ.

ನಗರಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚಿನ ಮತದಾನವಾಗಿದೆ. ಬಿಸಿಲನ್ನೂ ಲೆಕ್ಕಿಸದೇ ಮತದಾರರು ಉತ್ಸಾಹದಿಂದ ಹಕ್ಕು ಚಲಾಯಿಸಿದ್ದಾರೆ. ಮೊದಲ ಬಾರಿಗೆ ಮತ ಚಲಾಯಿಸಿದವರಂತೂ ವ್ಯಾಪಕ ಸಂತೋಷ ವ್ಯಕ್ತಪಡಿಸಿದ್ದಾರೆ.

ಅತಿ ಹೆಚ್ಚಿನ ಮತದಾನ ಸೇಡಂ ವಿಧಾನಸಭೆ ಕ್ಷೇತ್ರದಲ್ಲಿ ಅಂದರೆ ಶೇ. 68ರಷ್ಟು ಮತದಾನವಾಗಿದೆ. ಅತಿ ಕಡಿಮೆ ಮತದಾನ ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಅಂದರೆ ಶೇ. 56.89 ಪ್ರತಿಶತ ಮತದಾನವಾಗಿದೆ. ಉಳಿದಂತೆ ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ಶೇ. 62.54, ಜೇವರ್ಗಿ ವಿಧಾನಸಭೆ ಕ್ಷೇತ್ರದಲ್ಲಿ ಶೇ. 61.87, ಗುರುಮಿಠಕಲ್ದಲ್ಲಿ ಶೇ. 60.27, ಚಿತ್ತಾಪುರದಲ್ಲಿ ಶೇ. 61.15, ಸೇಡಂ ವಿಧಾನಸಭೆ ಕ್ಷೇತ್ರದಲ್ಲಿ ಶೇ. 68.33, ಕಲಬುರಗಿ ಗ್ರಾಮೀಣದಲ್ಲಿ ಶೇ. 60.82, ಕಲಬುರಗಿ ದಕ್ಷಿಣದಲ್ಲಿ ಶೇ. 57.04, ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಶೇ. 56.89 ಮತದಾನವಾಗಿದೆ. ಒಟ್ಟಾರೆ ಜಿಲ್ಲೆಯಾದ್ಯಂತ ಶೇ. 60.88 ಮತದಾನವಾಗಿದೆ.

Advertisement

ಕಳೆದ ವರ್ಷ (2018) ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಶೇ. 62.86ರಷ್ಟು ಮತದಾನವಾಗಿತ್ತು. ಈಗ ಅದರ ಸಮೀಪವಾಗಿರುವುದು ಹಲವು ಆಶ್ಚರ್ಯಗಳಿಗೆ ಫಲಿತಾಂಶ ಕಾರಣವಾಗಲಿದೆ ಎನ್ನಲಾಗುತ್ತಿದೆ. ರಾಜಕೀಯ ನೇತಾರರು ಹಾಗೂ ಪಕ್ಷದ ಕಾರ್ಯಕರ್ತರು ಏ. 23ರಂದು ನಡೆದ ಲೋಕಸಭೆ ಚುನಾವಣೆಯ ಮತದಾನ ಸರಾಸರಿ ಪಟ್ಟಿಯನ್ನಿಟ್ಟುಕೊಂಡು ತಮ್ಮದೇಯಾದ ನಿಟ್ಟಿನಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಇದೇ ಆಧಾರದ ಮೇಲೆ ಬೆಟ್ಟಿಂಗ್‌ ಕೂಡಾ ನಡೆದಿದೆ. ಬಿಸಿಲಿನ ನಡುವೆ ಮತದಾನ ನಡೆದಿದ್ದರಿಂದ ಮೇ 23ರವರೆಗೆ ಬಿಸಿ-ಬಿಸಿಯಾಗಿ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.

ಗುರುಮಠಕಲ್ ಕ್ಷೇತ್ರದಲ್ಲಿ ಮಹಿಳೆಯರದ್ದೇ ಹೆಚ್ಚು ಮತದಾನ
ಕಲಬುರಗಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 73714 ಪುರುಷರು ಮತದಾನ ಮಾಡಿದ್ದರೆ 74062 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಅಂದರೆ ಪುರುಷರಿಗಿಂತ 348 ಮಹಿಳೆಯರು ಹೆಚ್ಚಿಗೆ ಮತ ಚಲಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next