Advertisement

ಲೋಕ ಅದಾಲತ್‌ನಲ್ಲಿ ಒಂದಾದ ಸತಿ-ಪತಿ

12:29 PM Jul 14, 2019 | Naveen |

ಕಲಬುರಗಿ: ರಾಷ್ಟ್ರೀಯ ಮೆಗಾ ಲೋಕ್‌ ಅದಾಲತ್‌ ಅಂಗವಾಗಿ ಜುಲೈ 1ರಿಂದ ರಾಜಿ ಸಂಧಾನದ ಮೂಲಕ ವಿವಿಧ ಬಗೆಯ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕಲಬುರಗಿ ಉಚ್ಛ ನ್ಯಾಯಾಲಯದಲ್ಲಿ ಶನಿವಾರ ಸತಿ-ಪತಿಗಳ ವಿಚ್ಚೇದನದ ಎರಡು ಪ್ರಕರಣಗಳಲ್ಲಿ ಗುರುರಾಜ ಮತ್ತು ಅಶ್ವಿ‌ನಿ ಅಲಿಯಾಸ್‌ ಅಂಬಿಕಾ ಹಾಗೂ ಶಂಕರ ಮತ್ತು ದ್ರೌಪತಿ ದಂಪತಿ ಒಂದಾದರು.

Advertisement

ಕಲಬುರಗಿ ಮೂಲದ ಗುರುರಾಜ ಮಲ್ಲೇಶಪ್ಪ ಧುಮಲೆ ತಮ್ಮ ಪತ್ನಿ ಅಶ್ವಿ‌ನಿ ಅಲಿಯಾಸ್‌ ಅಂಬಿಕಾರಿಂದ ವಿಚ್ಛೇದನ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅದೇ ರೀತಿ ಇನ್ನೊಂದು ಪ್ರಕರಣದಲ್ಲಿ ಭೂಪಾಲ ತೆಗನೂರ ನಿವಾಸಿ ದ್ರೌಪತಿ ಗಂಡ ಶಂಕರ ಅಂತರಗಂಗಿ ಕುಟುಂಬ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.

ಎರಡು ಪ್ರಕರಣಗಳನ್ನು ಅದಾಲತ್‌ನಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ನೇತೃತ್ವದ ನ್ಯಾಯಮೂರ್ತಿ ಅಶೋಕ ಜಿ. ನಿಜಗಣ್ಣನವರ್‌, ನ್ಯಾಯಮೂರ್ತಿ ಶ್ಯಾಮ್‌ ಪ್ರಸಾದ ಅವರನ್ನು ಒಳಗೊಂಡ ಪೀಠವು ಸತಿ-ಪತಿಗೆ ಬುದ್ಧಿ ಮಾತು ಹೇಳಿದರು.

ನ್ಯಾಯಾಧಿಧೀಶರ ಬುದ್ಧಿ ಮಾತಿಗೆ ಸಹಮತ ವ್ಯಕ್ತಪಡಿಸಿದ ಜೋಡಿಗಳು ಸಂತೋಷದಿಂದಲೇ ಪರಸ್ಪರ ಹೂಮಾಲೆ ಬದಲಾಯಿಸಿಕೊಂಡು ಸಿಹಿ ಹಂಚಿಕೊಂಡರು. ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿತು.

ಈ ವೇಳೆ ಮಾತನಾಡಿದ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಅವರು ಕುಟುಂಬ ನ್ಯಾಯಾಲಯದಲ್ಲಿ ಹಲವು ಜೋಡಿಗಳು ಬೇರೆಯಾಗುವುದನ್ನು ನಾವು ಕಂಡಿದ್ದೇವೆ. ಅದಕ್ಕೆ ತದ್ವಿರುದ್ಧವಾಗಿ ಶನಿವಾರ ಎರಡು ಜೋಡಿಗಳು ನ್ಯಾಯಾಲಯದಲ್ಲಿ ಸಂತೋಷದಿಂದ ಒಂದಾಗಿವೆ.

Advertisement

ಪರಸ್ಪರ ಸಂಸಾರ ಮಾಡಿಕೊಂಡು ಹೋಗುವುದಾಗಿ ಒಪ್ಪಿದ್ದರಿಂದ ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ.

ತಂದೆ-ತಾಯಿಗೆ ಸಿಹಿ ತಿನ್ನಿಸಿದ ಮಗ: ಕೂಲಿ ಕೆಲಸ ಮಾಡುವ ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಶಂಕರ ರಾಯಪ್ಪ ಅಂತರಗಂಗಿ ಅವರು ಭೂಪಾಲ ತೆಗನೂರ ಗ್ರಾಮದ ದ್ರೌಪತಿ ಅವರೊಂದಿಗೆ ವಿವಾಹ ಮಾಡಿಕೊಂಡು 11 ವರ್ಷದ ನಂತರ ಕೌಟುಂಬಿಕ ಕಾರಣವೊಡ್ಡಿ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಕುಟುಂಬ ನ್ಯಾಯಾಲಯವು ಇವರಂತೆ ತೀರ್ಪು ನೀಡಿತು. ಸ್ಥಳೀಯ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಪತ್ನಿ ದ್ರೌಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಒಂಭತ್ತು ವರ್ಷದ ವೈವಾಹಿಕ ಜೀವನಕ್ಕೆ ಇಬ್ಬರು ಮಕ್ಕಳಿದ್ದಾರೆ. ಮೆಗಾ ಅದಾಲತ್‌ನಲ್ಲಿ ತಂದೆ-ತಾಯಿ ಒಂದಾಗಿದ್ದಕ್ಕೆ ಮಗ ಶರಣು ಹೆತ್ತವರಿಗೆ ಸಿಹಿ ತಿನ್ನಿಸುತ್ತಿದ್ದಂತೆ ನ್ಯಾಯಾಲಯದಲ್ಲಿ ಚಪ್ಪಾಳೆ ಸುರಿಮಳೆ ಸುರಿಯಿತು.

ಇನ್ನೊಂದು ಪ್ರಕರಣದಲ್ಲಿ ಖಾಸಗಿ ಉದ್ಯೋಗ ಮಾಡಿಕೊಂಡಿರುವ ಕಲಬುರಗಿ ಮೂಲದ ಗುರುರಾಜ ಮಲ್ಲೇಶಪ್ಪ ಧುಮಲೆ ಕೌಟುಂಬಿಕ ಕಾರಣ ನೀಡಿ ಸ್ಥಳೀಯ ನಿವಾಸಿ ಅಶ್ವಿ‌ನಿ ಅಲಿಯಾಸ್‌ ಅಂಬಿಕಾ ಅವರಿಂದ ವಿಚ್ಛೇದನ ಕೋರಿ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಉಚ್ಛ ನ್ಯಾಯಾಲಯದ ಹೆಚ್ಚುವರಿ ರಿಜಿಸ್ಟ್ರಾರ್‌ ಜನರಲ್ ಕೆ.ವಿ.ಅಸೋಡೆ, ನ್ಯಾಯಿಕ ರಿಜಿಸ್ಟ್ರಾರ್‌ ಶ್ರೀನಿವಾಸ ಸುವರ್ಣಾ, ಕಲಬುರಗಿ ಹೈಕೋರ್ಟ್‌ ಪೀಠದ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಗೋಮತಿ ರಾಘವೇಂದ್ರ, ಹೈಕೋರ್ಟ್‌ ಘಟಕದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣ ಕುಮಾರ ಕಿಣ್ಣಿ, ಉಪಾಧ್ಯಕ್ಷ ಸುಧೀರ ಸಿಂಗ್‌ ವಿಜಯಪುರ, ಕಾರ್ಯದರ್ಶಿ ಬಿ.ಸಿ. ಜಾಕಾ ಸೇರಿದಂತೆ ವಾದಿ-ಪ್ರತಿವಾದಗಳ ವಕೀಲರು ಹಾಗೂ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next