Advertisement

ಚಿರತೆ ಪ್ರತ್ಯಕ್ಷ: ಟ್ರ್ಯಾಪ್‌ ಕ್ಯಾಮೆರಾ ಅಳವಡಿಕೆ

11:45 AM May 01, 2020 | Naveen |

ಕಲಬುರಗಿ: ತಾಲೂಕಿನ ಮುತ್ಯಾನ ಬಬಲಾದ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಅದನ್ನು ಸೆರೆ ಹಿಡಿಯಲು ಬೋನಿಟ್ಟು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಇಲ್ಲಿನ ಗುರುಪಾದಲಿಂಗ ಶಿವಯೋಗಿಗಳ ಮಠದ ತೋಟದಲ್ಲಿನ ಕಬ್ಬಿನ ಗದ್ದೆಯಲ್ಲಿ ಬುಧವಾರ ಚಿರತೆ ಕಾಣಿಸಿಕೊಂಡಿದೆ. ಇದರ ದೃಶೃಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದು ನಂತರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಸಿಬ್ಬಂದಿಯೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

Advertisement

ಸಿಪಿಐ ರಾಘವೇಂದ್ರ ಭಜಂತ್ರಿ, ಪಿಎಸ್‌ಐ ಹುಸೇನ್‌ ಬಾಷಾ, ಎಸಿಎಫ್‌ ಬಾಬುರಾವ್‌ ಪಾಟೀಲ, ರೇಂಜರ್‌ ಸುನೀಲಕುಮಾರ ಹಾಗೂ ಪ್ರಾಣಿ ಸಂಗ್ರಹಾಲಯದ ರೇಂಜರ್‌ ಸೇರಿದಂತೆ ಇತರ ಅಧಿಕಾರಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮನೆಯಿಂದ ಹೊರಗೆ ಬರದಂತೆ ಗ್ರಾಮದಲ್ಲಿ ಡಂಗೂರ ಸಾರಲಾಗಿದೆ. ಬೀಜಕ್ಕಾಗಿ ಒಂದೆರಡು ಎಕರೆ ಕಬ್ಬು ಕಟಾವು ಮಾಡದೇ ಬಿಡಲಾಗಿದ್ದು, ಮಠದ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕ ಕಬ್ಬಿನ ಗದ್ದೆಯೊಳಗೆ ಹೋದಾಗ ಚಿರತೆ ಕಾಣಿಸಿಕೊಂಡಿದೆ. ಆತ ಗ್ರಾಮಸ್ಥರಿಗೆ ತಿಳಿಸಿದ್ದಾನೆ ಎಂದು ಗೊತ್ತಾಗಿದೆ.

ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ (ಕೇಶವ) ಮೋಟಗಿ ಪರಿಶೀಲನೆ ನಡೆಸಿದರು. ಅರಣ್ಯ ಅಧಿಕಾರಿಗಳು
ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಡ್ರೋಣ್‌ ನಿಗಾ: ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಬೋನು ಇರಿಸಲಾಗಿದೆ. ಅದರ ಚಲನವಲನಗಳ ಪತ್ತೆಗೆ ಟ್ರ್ಯಾಪ್‌ ಕ್ಯಾಮೆರಾ ಅಳವಡಿಸಲಾಗಿದೆ.
ಡ್ರೋಣ್‌ ಕ್ಯಾಮೆರಾ ನಿಗಾ ವಹಿಸಲಾಗಿದೆ. ಆದರೆ, ಹೆಜ್ಜೆ ಗುರುತುಗಳು ಪತ್ತೆಯಾಗಿಲ್ಲ. ಕಬ್ಬಿನ ಗದ್ದೆಯಲ್ಲೇ ಚಿರತೆ ಇದೆಯೋ ಅಥವಾ ಬೇರೆ ಸ್ಥಳಕ್ಕೆ ತೆರಳಿದೆಯಾ ಎನ್ನುವ
ಕಾರ್ಯಾಚರಣೆ ನಡೆದಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ವಾನತಿ ತಿಳಿಸಿದ್ದಾರೆ.

ಮಾ.20ರಂದು ಜೇವರ್ಗಿ ತಾಲೂಕಿನ ಹಂಚನಾಳ,  ಅಂಕಲಗಾ ಗ್ರಾಮಗಳಲ್ಲಿ ಚಿರತೆಯೊಂದು ಜಾನುವಾರಗಳ ಮೇಲೆ ದಾಳಿ ಮಾಡಿ ಜನರಲ್ಲಿ ಆತಂಕ ಹುಟ್ಟಿಸಿತ್ತು. ಇದಾದ 40 ದಿನಗಳ ಬಳಿಕ ತಾಲೂಕಿನ ಬಬಲಾದ ಗ್ರಾಮದಲ್ಲಿ ಚಿಕಿತ್ಸೆ ಪತ್ತೆಯಾಗಿದೆ. ಆದರೆ, ಇಲ್ಲಿ ಚಿರತೆ ಯಾವುದೇ ಹಾನಿ ಕೂಡ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾ ರೆ.

ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಡ್ರೋಣ್‌ ಕ್ಯಾಮರಾ ಮತ್ತು ಟ್ರ್ಯಾಪ್‌ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ. ಗ್ರಾಮಸ್ಥರು ಯಾವುದೇ ರೀತಿಯ ಭೀತಿಗೊಳಾಗುವುದು ಬೇಡ.
ಎಂ.ಎಂ. ವಾನತಿ,
ಉಪ ಅರಣ್ಯ ಸಂರಕ್ಷಣಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next