Advertisement

ಜನವರಿಯಲ್ಲಿ ಕಾಶಿ ಪೀಠದ ಗುರುಕುಲ ಶತಮಾನೋತ್ಸವ

03:19 PM Jul 22, 2019 | Naveen |

ಕಲಬುರಗಿ: ಜ್ಞಾನ ನಗರಿಯಾದ ಉತ್ತರ ಪ್ರದೇಶದ ಕಾಶಿಯಲ್ಲಿ ಕಾಶೀ ಮಹಾ ಪೀಠದ ಗುರುಕುಲದ ಶತಮಾನೋತ್ಸವ ಸಮಾರಂಭ 2020ರ ಜನವರಿ 15ರಿಂದ ಫೆ.21ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ದೇಶ ಹಾಗೂ ವಿದೇಶಿ 18 ಭಾಷೆಗಳ ‘ಶ್ರೀ ಸಿದ್ಧಾಂತ ಶಿಖಾಮಣಿ’ ಮೊಬೈಲ್ ಆ್ಯಪ್‌ ಲೋಕಾರ್ಪಣೆಗೊಳಿಸುವರು ಎಂದು ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದರು.

ಕಾಶೀ ಪೀಠದ ಜಗದ್ಗುರು ವಿಶ್ವಾರಾಧ್ಯ ಗುರುಕುಲವು ಅತ್ಯಂತ ಪುರಾತನವಾದುದು. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜಗದ್ಗುರು ವಿಶ್ವಕರ್ಣ ಶಿವಾಚಾರ್ಯರಿಂದ ಗುರುಕುಲವು ಪ್ರಾರಂಭಿಸಲ್ಪಟ್ಟಿತು. ಗುರುಕುಲದ ದೂರ್ವಾಸ ಮಹರ್ಷಿಗಳು ಮೊದಲ ವಿದ್ಯಾರ್ಥಿ. ಅಂದಿನಿಂದ ಪ್ರಾರಂಭವಾದ ಗುರುಕುಲ ಇಂದಿನವರೆಗೆ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ ಎಂದು ಹೇಳಿದರು.

1918ರಲ್ಲಿ ಅಂದಿನ ಪಂಚಪೀಠಾಧೀಶ್ವರರು ಕಾಶಿಯಲ್ಲಿ ಮಹಾ ಸಮ್ಮೇಳನ ನಡೆಸಿ ಪ್ರಾಚೀನ ಗುರುಕುಲಕ್ಕೆ ಜಗದ್ಗುರು ವಿಶ್ವಾರಾಧ್ಯ ಗುರುಕುಲ ಎಂದು ನಾಮಕರಣ ಮಾಡಿದ್ದರು. ಈಗ ನೂರು ವರ್ಷಗಳು ಪೂರ್ಣಗೊಂಡಿದ್ದು, ಗುರುಕುಲದ ಶತಮಾನೋತ್ಸವ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಧರ್ಮ ಜಾಗೃತಿಯೊಂದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯ ನಡೆಸಿಕೊಂಡು ಬಂದಿರುವುದು ಗುರುಕುಲದ ಹೆಗ್ಗಳಿಕೆಯಾಗಿದೆ. ವೀರಶೈವರ ಜತೆಗೆ ಬ್ರಾಹ್ಮಣ, ಜೈನ ಮರಾಠಾ ಮುಂತಾದ ಸಂಪ್ರದಾಯಗಳ ಅನೇಕ ಮಠಾಧಿಪತಿಗಳು ಕಾಶಿ ಗುರುಕುಲದಲ್ಲಿ ಅಭ್ಯಾಸ ಮಾಡಿದ್ದಾರೆ ಎಂದರು.

Advertisement

ಗುರುಕುಲ ಶತಮಾನೋತ್ಸವವು ರಂಭಾಪುರಿ, ಉಜ್ಜಯಿನಿ, ಹಿಮವತ್‌ ಕೇದಾರ ಮತ್ತು ಶ್ರೀಶೈಲ ಜಗದ್ಗುರುಗಳವರ ಸಾನಿಧ್ಯದಲ್ಲಿ ಜರುಗಲಿದೆ. ವಿಶ್ವಶಾಂತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಅತಿರುದ್ರಾಭಿಷೇಕ, ಕೋಟಿ ಬಿಲ್ವಾರ್ಚನೆ, ದೀಪೋತ್ಸವ, ವಿದ್ವಾಂಸರ ಚರ್ಚಾಗೋಷ್ಠಿ, ನೂತನ ಕಟ್ಟಡಗಳ ಉದ್ಘಾಟನೆ, ವಿವಿಧ ಗ್ರಂಥ ಲೋಕಾರ್ಪಣೆ, ವಿವಿಧ ಪ್ರದೇಶಗಳ ವಿವಿಧ ಕ್ಷೇತ್ರಗಳ ಸಮಾಜ ಸೇವಕರ ಸನ್ಮಾನ ವಿವಿಧ ಭಾಷೆಗಳ ವಿದ್ವಾಂಸರ ಗೌರವ ಗುರುಕುಲದಲ್ಲಿ ಅಭ್ಯಾಸ ಮಾಡಿದ ಶತಾಯುಷಿ ವಿದ್ಯಾರ್ಥಿಗಳ ಶತಮಾನೋತ್ಸವ, ಅಮೃತ ಮಹೋತ್ಸವ ಷಷ್ಠ್ಯಬ್ಧಿ ಸಮಾರಂಭಗಳನ್ನು ಆಚರಿಸಲಾಗುವುದು ಎಂದು ಶ್ರೀಗಳು ವಿವರಿಸಿದರು.

ಲಿಂಗೈಕ್ಯರಾದ ವಿವಿಧ ಮಠಾಧಿಪತಿಗಳ ಹಾಗೂ ಶಾಸ್ತ್ರೀಗಳ ಸ್ಮರಣೋತ್ಸವ ಆಚರಿಸಲಾಗುವುದು. 36 ದಿನಗಳ ಸುದೀರ್ಘ‌ ಸಮಾರಂಭದಲ್ಲಿ ದೇಶದ ವಿವಿಧ ಪಕ್ಷಗಳ ರಾಜಕೀಯ ಧುರೀಣರು ಪಾಲ್ಗೊಳ್ಳುವರು. ಸಮಾರಂಭದ ನಿಮಿತ್ತ ಫೆ.15ರಂದು ಜಗದ್ಗುರು ಪಂಚಪೀಠಾಧೀಶ್ವರರ ವೈಭವದ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರುವುದು. ಈ ಪಲ್ಲಕ್ಕಿ ಸೇವೆಯನ್ನು ಜೇವರ್ಗಿ ತಾಲೂಕಿನ ಶಖಾಪುರ ತಪೋವನ ಮಠದ ಶ್ರೀ ಸಿದ್ಧರಾಮ ಶಿವಾಚಾರ್ಯರು ವಹಿಸಿಕೊಂಡಿದ್ದಾರೆ. ಸಮಾರಂಭಕ್ಕೆ ಎಲ್ಲ ಪ್ರಾಂತಗಳ ಸದ್ಭಕ್ತರಿಗೆ ಹಾಗೂ ಗಣ್ಯರಿಗೆ ಕಾಶಿ ಮಹಾ ಪೀಠದ ಭಕ್ತ ನಿವಾಸದಲ್ಲಿ ವಸತಿ ಹಾಗೂ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next