ಕಲಬುರಗಿ: ‘ಕಲ್ಯಾಣ ಕರ್ನಾಟಕ’ ಪ್ರದೇಶದಲ್ಲಿ ಕಳೆದ ಆರು ದಶಕಗಳಲ್ಲಿ ಸಾಕ್ಷರತಾ ಪ್ರಮಾಣ ಏರಿಕೆಯಾಗುತ್ತಲೇ ಸಾಗಿದೆ. 1956ರ ಕರ್ನಾಟಕ ಏಕೀಕರಣಕ್ಕೂ ಮುನ್ನ ಕಲ್ಯಾಣ ಕರ್ನಾಟಕದಲ್ಲಿ ಸಾಕ್ಷರತಾ ಪ್ರಮಾಣ ಕೇವಲ ಶೇ.8.49 ಮಾತ್ರವೇ ಇತ್ತು. 2011ರ ಹೊತ್ತಿಗೆ ಶೇ.64.44ರಷ್ಟು ಸಾಕ್ಷರತಾ ಪ್ರಮಾಣ ಹೆಚ್ಚಳಗೊಂಡಿದ್ದು, 2011ರ ನಂತರದ ಈ ಎಂಟು ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಿರುವ ಆಶಾಭಾವನೆ ಇದೆ.
Advertisement
ಕರ್ನಾಟಕ ಏಕೀಕರಣದ ಮೊದಲೇ ಆಗಿನ ಮೈಸೂರು ಪ್ರಾಂತ್ಯದಲ್ಲಿ ಶೇ.20.6ರಷ್ಟು ಸಾಕ್ಷರತೆ ಇತ್ತು. ಹೈದ್ರಾಬಾದ್ ಪ್ರಾಂತ್ಯದ ಬೀದರ ಶೇ.7.43, ಕಲಬುರಗಿ ಶೇ.8.20 ಹಾಗೂ ರಾಯಚೂರು ಶೇ. 9.07ರಷ್ಟು ಸಾಕ್ಷರತಾ ಪ್ರಮಾಣ ಹೊಂದಿದ್ದವು. ಒಟ್ಟಾರೆ ಹೈದ್ರಾಬಾದ್ ಪ್ರಾಂತ್ಯದಲ್ಲಿ ಸಾಕ್ಷರತಾ ಪ್ರಮಾಣ ಶೇ.8.49ರಷ್ಟಿತ್ತು ಎಂದು 1954ರಲ್ಲಿ ಶೇಷಾದ್ರಿ ನೇತೃತ್ವದ ಸತ್ಯಶೋಧನಾ ಸಮಿತಿ ವರದಿ ಹೇಳುತ್ತದೆ. ಆಗಿನ್ನು ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳು ಉದಯವಾಗಿರಲಿಲ್ಲ. ಬಳ್ಳಾರಿ ಜಿಲ್ಲೆ ಮದ್ರಾಸ್ ಪ್ರಾಂತ್ಯದಿಂದ ಆದಾಗಲೇ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಗಿತ್ತು. ಹೈದ್ರಾಬಾದ್ ಪ್ರಾಂತ್ಯದಲ್ಲಿ ಮೈಸೂರು ಪ್ರಾಂತ್ಯದ ಸರಿ ಸಮಾನವಾದ ಸಾಕ್ಷರತೆ ಬೆಳೆಯಬೇಕಾದರೆ ಇಲ್ಲಿನ ಶಿಕ್ಷಣ ಸಂಸ್ಥೆಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಬೇಕು ಎಂಬ ಅಂಶವನ್ನು ಅಂದೇ ವರದಿ ಉಲ್ಲೇಖೀಸಿತ್ತು ಎನ್ನುತ್ತಾರೆ ತಜ್ಞರು.
Related Articles
Advertisement
ಭಾಷಾ ‘ಗಡಿ’ ಅಡ್ಡಿ: ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳು ಗಡಿ ಭಾಗಗಳಾಗಿವೆ. ಬೀದರ, ಕಲಬುರಗಿ ಜಿಲ್ಲೆಗಳು ತೆಲಂಗಾಣ-ಮಹಾರಾಷ್ಟ್ರ, ರಾಯಚೂರು ಜಿಲ್ಲೆ ಆಂಧ್ರಪ್ರದೇಶ-ತೆಲಂಗಾಣ, ಬಳ್ಳಾರಿ ಜಿಲ್ಲೆ ಆಂಧ್ರಪ್ರದೇಶ ಹಾಗೂ ಯಾದಗಿರಿ ಜಿಲ್ಲೆ ತೆಲಂಗಾಣ ಗಡಿಗೆ ಹೊಂದಿಕೊಂಡಿವೆ. ಕೊಪ್ಪಳಕ್ಕೆ ಯಾವುದೇ ‘ಗಡಿ’ ಇಲ್ಲದೇ ಇದ್ದರೂ ತೆಲುಗು ಪ್ರಭಾವ ಇದ್ದೇ ಇದೆ.
ಕಲಬುರಗಿ, ಬೀದರ ಜಿಲ್ಲೆಗಳಲ್ಲಿ ಉರ್ದು, ಮರಾಠಿ ಮತ್ತು ತೆಲುಗು ಪ್ರಭಾವ ಇದ್ದರೆ, ರಾಯಚೂರು, ಯಾದಗಿರಿ ಹಾಗೂ ಬಳ್ಳಾರಿಯಲ್ಲಿ ತೆಲುಗು ಪ್ರಭಾವ ಇದೆ. ಪರಿಣಾಮ ಎಂಬಂತೆ ಶೇ.69ರಷ್ಟು ಜನರು ಮಾತ್ರ ತಮ್ಮದು ಕನ್ನಡ ಮಾತೃಭಾಷೆ ಎನ್ನುವರಿದ್ದಾರೆ ಎಂದು ಹೇಳಲಾಗುತ್ತಿದೆ.
1ರಿಂದ 7ನೇ ತರಗತಿಯವರೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಶೇ.100ಕ್ಕಿಂತ ಹೆಚ್ಚಿರುತ್ತದೆ. ಇದಕ್ಕೆ ಸರ್ವಶಿಕ್ಷಣ ಅಭಿಯಾನ, ಬಿಸಿಯೂಟ, ಉಚಿತ ಪಠ್ಯ, ಸಮವಸ್ತ್ರ, ಸೈಕಲ್ ವಿತರಣೆ ಕಾರಣ. ಆದರೆ, ತದನಂತರ 8ನೇ ತರಗತಿಯಿಂದ ಮಕ್ಕಳ ಸಂಖ್ಯೆ ಇಳಿಕೆಯಾಗುತ್ತ ಹೋಗುತ್ತದೆ. ಶಾಲೆಯಿಂದ ಹೊರಗುಳಿದವರ ಸಂಖ್ಯೆ ಅಧಿಕವಾಗುತ್ತಿದೆ. ಏಕೆಂದರೆ ಅಲ್ಲಿಂದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಮತ್ತು ಬಾಲ ಕಾರ್ಮಿಕ ತಡೆ ಕಾಯ್ದೆಗಳು ಕೂಡ ಅನ್ವಯವಾಗುವುದಿಲ್ಲ. ಅಲ್ಲದೇ, ಪ್ರಾಥಮಿಕ ಮಟ್ಟದಲ್ಲಿ ಅವರನ್ನು ಯಾವುದೇ ಅಡೆತಡೆ ಇಲ್ಲದೇ ಉತ್ತೀರ್ಣಗೊಳಿಸುವುದು. ಒಂದು ವೇಳೆ ಪ್ರೌಢ ಶಿಕ್ಷಣಕ್ಕೆ ಬಂದರೂ ಕನ್ನಡ ಭಾಷೆ ಮೇಲೆ ಹಿಡಿತ ಸಾಧಿಸದ ಪರಿಣಾಮ ಅವರಿಗೆ ತಳಮಟ್ಟದಿಂದ ಶಿಕ್ಷಣ ಕೊಡಬೇಕಾಗುತ್ತದೆ. ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ.75ರಿಂದ 80ರಷ್ಟು ಅಂಕ ಪಡೆದರೂ ಪಿಯುಸಿಯಲ್ಲಿ ಶೇ.55ಕ್ಕೆ ಕುಸಿಯುತ್ತದೆ. ಇದರ ಮಧ್ಯೆ ಕೂಡ ಉನ್ನತ ಹಂತಕ್ಕೆ ಬಂದರೂ ನಾನಾ ಕಾರಣಗಳಿಂದ ಶಿಕ್ಷಣದಿಂದಲೇ ದೂರವಾಗುತ್ತಾರೆ.