Advertisement

ಕಲ್ಯಾಣ ಕರ್ನಾಟಕ ಘೋಷಿಸಿದ ಸಿಎಂ

11:16 AM Sep 18, 2019 | Naveen |

ಕಲಬುರಗಿ: ಹಿಂದುಳಿವಿಕೆ ಹಣೆಪಟ್ಟಿಯ ಹೈದ್ರಾಬಾದ ಕರ್ನಾಟಕ ಹೆಸರು ಮುಗಿದ ಅಧ್ಯಾಯ. ಇನ್ಮುಂದೆ ಏನಿದ್ದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪರ್ವ. ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಬದ್ಧ ಎನ್ನುವ ಮುಖಾಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಲ್ಯಾಣ ಕರ್ನಾಟಕ ಘೋಷಣೆ ಕೈಗೊಂಡರು.

Advertisement

ಮಂಗಳವಾರ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನೆರೆದ ಸಾವಿರಾರು ಜನರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಘೋಷಣೆ ಕೈಗೊಂಡು 38 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಕಲ್ಯಾಣ ಕರ್ನಾಟಕ ಎಂಬುದಾಗಿ ಘೋಷಣೆ ಮಾಡುತ್ತಿರುವುದು ತಮ್ಮ ಸುದೈವ ಎಂದರು.

ಕಲ್ಯಾಣ ಕರ್ನಾಟಕ ಉತ್ಸವ ದಿನವಾಗಿರುವ ಸೆ. 17ರಂದೇ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆಯಿದೆ. ಈ ದಿನದಂದು ಕಲ್ಯಾಣ ಕರ್ನಾಟಕ ಉದ್ಘೋಷಣೆ ಆಗಿರುವುದು ಅಭಿವೃದ್ಧಿ ಸಂಕೇತ ಎನ್ನುವಂತಾಗಿದೆ. ಬಸವಾದಿ ಶರಣರ ಸಂಸ್ಕೃತಿ ಕಾರ್ಯ ಚಿರಸ್ಥಾಯಿ ಆಗಿರಲು ಕಲ್ಯಾಣ ಕರ್ನಾಟಕ ಹೆಸರು ಪೂರಕವಾಗಿರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಭಕ್ತಿ, ಸಾಹಿತ್ಯ, ಹಾಗೂ ಸಾಮಾಜಿಕ ಕಲ್ಯಾಣವನ್ನು ಜತೆಯಾಗಿ ಬೆಸೆದ ಜಗತ್ತಿನ ಅತ್ಯಪೂರ್ವ ಚಳವಳಿಯೊಂದು ರೂಪುಗೊಂಡು 12ನೇ ಶತಮಾನದಲ್ಲಿ ಯಶಸ್ವಿಯಾಗಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ನೆಲ ಇದು. ಹೀಗಾಗಿ ಇಲ್ಲಿನ ಜನರ ಭಾವನೆಯಂತೆ ಹೈದ್ರಾಬಾದ ಕರ್ನಾಟಕವನ್ನು ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಗಿದೆ ಎಂದರು.

ಸಂವಿಧಾನದ 371(ಜೆ)ನೇ ಪರಿಚ್ಛೇದ ಜಾರಿಯಿಂದ ಉದ್ಯೋಗ ಮೀಸಲಾತಿಯಡಿ ಪ್ರಾದೇಶಿಕ ಸ್ಥಳೀಯ ವೃಂದ ಮತ್ತು ರಾಜ್ಯ ಮಟ್ಟದ ಸ್ಥಳೀಯ ವೃಂದದಲ್ಲಿ ಒಟ್ಟು 32,144 ಖಾಲಿ ಹುದ್ದೆಗಳನ್ನು ಗುರುತಿಸಲಾಗಿದೆ. ಇವುಗಳ ಪೈಕಿ ಜುಲೈ-2019ರ ಅಂತ್ಯಕ್ಕೆ 13,659 ಹುದ್ದೆಗಳನ್ನು ಸ್ಥಳೀಯ ಅಭ್ಯರ್ಥಿಗಳಿಂದಲೇ ತುಂಬಲಾಗಿದೆ. ಇನ್ನೂ 10,748 ಹುದ್ದೆಗಳ ನೇಮಕಾತಿ ಭ್ಯ ಅಭ್ಯರ್ಥಿ ಪ್ರಕ್ರಿಯೆ ವಿವಿಧ ಹಂತದಲ್ಲಿದ್ದು, ಅವುಗಳನ್ನು ಶೀಘ್ರದಲ್ಲಿಯೆ ಭರ್ತಿ ಮಾಡುವ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

Advertisement

ನಂತರ 38.17 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಿದರು. ಅಲ್ಲದೆ ಬೆಣ್ಣೆತೋರಾ ನೀರಾವರಿ ಪ್ರದೇಶದಲ್ಲಿ ಭೂಮಿ ಕಳೆದಕೊಂಡ ರೈತರಿಗೆ ಹಕ್ಕು ಪತ್ರ ಮತ್ತು ಅಂತರ್ಜಾತಿ ವಿವಾಹವಾದ ಮೂರು ದಂಪತಿಗಳಿಗೆ ಸರ್ಕಾರದಿಂದ ಪ್ರೋತ್ಸಾಹಧನದ ಚೆಕ್‌ ವಿತರಿಸಲಾಯಿತು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಹೈಕ ಎಂದು ಸಂಬೋಧನೆ ಮಾಡುವುದು ಒಂದು ರೀತಿಯಲ್ಲಿ ನಮಗೆ ಸ್ವಾಭಿಮಾನಕ್ಕೆ ಅಳಕು ಉಂಟು ಮಾಡಿತ್ತು. ಇದೀಗ ಅದನ್ನು ತೆಗೆದು ಹಾಕಿ ಶರಣ ಸಂಸ್ಕೃತಿಯ ಪರಂಪರೆ ಹೊಂದಿದ ನೆಲಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿದ್ದು ಸಂತೋಷವಾಗಿದೆ ಎಂದರು.

ಈ ಭಾಗದಲ್ಲಿ ಸಣ್ಣ ನೀರಾವರಿ ಯೋಜನೆಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುವುದು. ಅಂತರ್ಜಲ ಹೆಚ್ಚಿಸಲು ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸದ ಡಾ| ಉಮೇಶ ಜಾಧವ ಆಶಯ ನುಡಿಗಳನ್ನಾಡಿದರು.

ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಶಾಸಕರಾದ ಬಸವರಾಜ ಮತ್ತಿಮಡು, ರಾಜಕುಮಾರ ಪಾಟೀಲ ತೇಲ್ಕೂರ, ಎಂ.ವೈ. ಪಾಟೀಲ, ಸುಭಾಷ ಗುತ್ತೇದಾರ, ಡಾ| ಅವಿನಾಶ ಜಾಧವ, ಸುರಪುರ ಶಾಸಕ ರಾಜುಗೌಡ, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ, ತಿಪ್ಪಣ್ಣ ಕಮಕನೂರ, ಎನ್‌. ರವಿಕುಮಾರ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ್‌ ಚಿಂಚನಸೂರು, ಸುನೀಲ ವಲ್ಲಾಪುರೆ, ಮಾಜಿ ಶಾಸಕರಾದ ಶಶೀಲ ಜಿ. ನಮೋಶಿ, ಅಮರನಾಥ ಪಾಟೀಲ, ಡಾ| ಶಾಲಿನಿ ರಜನೀಶ, ಆರ್‌ಸಿ ಸುಬೋಧ ಯಾದವ, ಡಿಸಿ ಬಿ. ಶರತ್‌, ಪೊಲೀಸ್‌ ಆಯುಕ್ತ ಡಾ| ಎಂ.ಎನ್‌. ನಾಗರಾಜ, ಮನೀಷ ಖರ್ಬಿಕರ್‌, ಎಸ್‌ಪಿ ವಿನಾಯಕ ಪಾಟೀಲ, ಡಾ| ಪಿ. ರಾಜಾ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next