Advertisement

ಬಾಲ್ಯ ವಿವಾಹಕ್ಕೆ ಒಳಗಾದವರು ಸರ್ಕಾರಿ ಯೋಜನೆಗೆ ಅರ್ಹರಲ್ಲ: ರೇವತಿ

12:22 PM Feb 15, 2020 | Team Udayavani |

ಕಲಬುರಗಿ: ಕಾನೂನಿನಡಿ ಬಾಲ್ಯ ವಿವಾಹ ಯಾವುದೇ ಕಾರಣಕ್ಕೂ ಸಿಂಧುವಾಗಲ್ಲ. ಅದು ಅಸಿಂಧು. ಸರ್ಕಾರದ ಭಾಗ್ಯಲಕ್ಷ್ಮೀ ಮತ್ತು ಮಾತೃವಂದನಾ ಸೇರಿದಂತೆ ಯಾವ ಯೋಜನೆಗಳಿಗೂ ಬಾಲ್ಯ ವಿವಾಹಕ್ಕೆ ಒಳಗಾದವರು ಅರ್ಹರಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಕೆ.ಎಂ. ರೇವತಿ ಹೇಳಿದರು.

Advertisement

ನೂತನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಬಾಲ್ಯ ವಿವಾಹ ನಿಷೇಧ ಹಾಗೂ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತು ಹಮ್ಮಿಕೊಳ್ಳಲಾಗಿದ್ದ ಕಲಬುರಗಿ ವಿಭಾಗೀಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಬಾಲ್ಯ ವಿವಾಹ ಮಾಡಿಸಿದ ಅಪ್ಪ-ಅಮ್ಮ ಜೈಲಿಗೆ ಹೋಗಬೇಕಾಗುತ್ತದೆ. ಅಪ್ಪ-ಅಮ್ಮ ಜೈಲಿಗೆ ಹೋದರೆ ಬಾಲ್ಯ ವಿವಾಹಕ್ಕೆ ಒಳಗಾದ ಮಗಳು ಅಥವಾ ಮಗ ಮಾತ್ರ ಸಂಕಟಕ್ಕೆ ಸಿಲುಕುವುದಿಲ್ಲ. ಬದಲಿಗೆ ಉಳಿದ ಮಕ್ಕಳು ಸೇರಿದಂತೆ ಇಡೀ ಕುಟುಂಬ ದುಃಸ್ಥಿತಿ ಎದುರಿಸಬೇಕಾಗುತ್ತದೆ. ಹೀಗಾಗಿ ಬಾಲ್ಯ ವಿವಾಹ ಮಾಡುವ ಮುನ್ನ ಪೋಷಕರು ಕುಟುಂಬದ ಬಗ್ಗೆ ಯೋಚಿಸಬೇಕು. ಅಧಿಕಾರಿಗಳು ಅರಿವು ಮೂಡಿಸುವಾಗ ಇಂತಹ ಪರಿಸ್ಥಿತಿ ಮನನ ಮಾಡಿಸಬೇಕೆಂದು ಸಲಹೆ ನೀಡಿದರು.

ಬಾಲ್ಯ ವಿವಾಹ ಮತ್ತು ಮಕ್ಕಳ ಕಳ್ಳ ಸಾಗಾಣೆ ಬಗ್ಗೆ ಕರ್ನಾಟಕವೇ ಮೊದಲು ಕಠಿಣ ಕಾನೂನುಗಳನ್ನು ಜಾರಿಗೊಳಿಸಿದ್ದು. ಈ ಕಾನೂನು ಜಾರಿ ಕುರಿತ ವಿಶೇಷಾಧಿಕಾರಿಗಳನ್ನು ರಾಜ್ಯದಲ್ಲಿ ನೇಮಿಸಲಾಗಿದೆ. ಬಾಲ್ಯ ವಿವಾಹ ಹಾಗೂ ಮಕ್ಕಳ ಕಳ್ಳ ಸಾಗಾಣೆ ತಡೆಯುವ ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು ಉನ್ನತ ಅಧಿಕಾರಿಗಳ ಮೇಲೆ ಹೊಣೆ ಇದೆ. ಕರ್ನಾಟಕದಲ್ಲಿನ ಕಠಿಣ ಕ್ರಮಗಳನ್ನು ಇತರ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರುತ್ತಿವೆ ಎಂದರು.

ಬಾಲ್ಯ ವಿವಾಹ ಮಕ್ಕಳ ಬಾಲ್ಯಕ್ಕೆ ತೊಡಕಾಗಿದೆ. ಬೆಳಕಿಗೆ ಬರುವ ಪ್ರಕರಣಗಳ ಸಂಖ್ಯೆಗಿಂತಲೂ ಅಧಿಕ ಬಾಲ್ಯ ವಿವಾಹಗಳು ನಡೆಯುತ್ತಿವೆ. ಹೀಗಾಗಿ ಬಾಲ್ಯ ವಿವಾಹ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಯಾವುದೇ ಸಭೆ, ಸಮಾರಂಭಕ್ಕೂ ಇಂತಹ ಪಿಡುಗಿನ ಅರಿವು ಮೂಡಿಸಬೇಕು. ಬಾಲ್ಯ ವಿವಾಹ ಅನಿಷ್ಟ ಪದ್ಧತಿ ಎನ್ನುವುದನ್ನು ಬಾಯಿಂದ ಬಾಯಿಗೆ ಹರಡುವಂತೆ ಮಾಡಬೇಕು. ಯಾವುದೇ ಇಲಾಖಾಧಿಕಾರಿಗಳಿಗೆ ಬಾಲ್ಯ ವಿವಾಹದ ವಿಷಯ ತಿಳಿದರೂ ತಡೆಯಬೇಕು. ಮಕ್ಕಳ ರಕ್ಷಣಾ ಘಟಕ, ಮಕ್ಕಳ ಮತ್ತು ಕಲ್ಯಾಣ ಇಲಾಖೆಯೇ ಬರಲಿ ಎಂದು ದಾರಿ ಕಾಯಬಾರದು ಎಂದು ಕರೆ ನೀಡಿದರು.

Advertisement

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕಲಬುರಗಿ ಜಿ.ಪಂ ಸಿಇಒ ಡಾ| ರಾಜಾ ಪಿ., ಈ ಹಿಂದಿನ ಜನಗಣತಿ ಪ್ರಕಾರ ದೇಶದಲ್ಲಿ 15 ವರ್ಷದೊಳಗಿನ 15 ಲಕ್ಷ ಹೆಣ್ಣು ಮಕ್ಕಳು ಬಾಲ್ಯವಿವಾಹವಾಗಿದ್ದಾರೆ. ಬಾಲ್ಯ ವಿವಾಹ ನಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ದೈಹಿಕ ಬೆಳವಣಿಗೆ ಕುಂಠಿತ ಹಾಗೂ ರಕ್ತಹೀನತೆ ಉಂಟಾಗುತ್ತದೆ. ಇದರಿಂದ ಕಡಿಮೆ ತೂಕದ ಹಾಗೂ ವಿಕಲಾಂಗ ಮಗುವಿನ ಜನನದ ಸಾಧ್ಯತೆ ಇರುತ್ತದೆ. ಅಲ್ಲದೇ, ಶಿಶು ಮರಣ ಹಾಗೂ ಮಕ್ಕಳ ಮರಣ ಹೆಚ್ಚಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ, ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇವತ್ತಿನ ದಿನಗಳಲ್ಲಿ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿದೆ. ಸ್ವತಃ ಮಕ್ಕಳೇ ಬಾಲ್ಯ ವಿವಾಹವನ್ನು ವಿರೋಧಿ ಸುತ್ತಿದ್ದಾರೆ. ಆದರೆ, ಕಾಯ್ದೆಯ ಅನುಷ್ಠಾನ ಸರಿಯಾಗಿ ಆಗದೇ ಇರುವುದು ಮತ್ತು ಜನರ ಮಾನಸಿಕ ಸ್ಥಿತಿ ಬದಲಾಗದೇ ಬಾಲ್ಯ ವಿವಾಹ ಸಂಪೂರ್ಣವಾಗಿ ತಡೆಯಲು ಆಗುತ್ತಿಲ್ಲ. ಇದನ್ನು ಸಂಪೂರ್ಣವಾಗಿ ತೊಲಗಿಸುವುದು ಕೇವಲ ಒಂದು ಇಲಾಖೆ ಕೆಲಸವಲ್ಲ. ಎಲ್ಲಾ ಇಲಾಖೆಗಳು ಮತ್ತು ಜನ ಕೈಜೋಡಿಸಬೇಕೆಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಹಲಿಮಾ ಕೆ., ಯಾದಗಿರಿ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಹರೀಶ ಜೋಗಿ, ಇಂದಿರಾ, ರೀನಾ ಡಿಸೋಜಾ ಮತ್ತು ತಿಪ್ಪಣ್ಣ ಸಿರಸಗಿ, ಜಿ.ಎಸ್‌.ಗುಣಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next