Advertisement

ಹತ್ಯೆಗೆ ಕಾರಣವಾಗುತ್ತಿದೆ ತಪ್ಪು ಮಾಹಿತಿ

10:05 AM Sep 01, 2019 | Team Udayavani |

ಕಲಬುರಗಿ: ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿಗಳು ಮತ್ತು ತಪ್ಪು ಮಾಹಿತಿಗಳು ಹತ್ಯೆಯಂತ ಅಹಿತಕರ ಸನ್ನಿವೇಶ ಹುಟ್ಟು ಹಾಕುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ‘ದಿ ಹಿಂದೂ’ ದಿನ ಪತ್ರಿಕೆ ಬೆಂಗಳೂರಿನ ಸ್ಥಾನಿಕ ಸಂಪಾದಕಿ ಎಸ್‌. ಭಾಗೇಶ್ರೀ ಹೇಳಿದರು.

Advertisement

ನಗರದ ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಶನಿವಾರ ‘ಮುದ್ರಣ ಮತ್ತು ವಿದ್ಯುನ್ಮಾನ ಪತ್ರಕರ್ತರು ಎದುರಿಸುತ್ತಿರುವ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಉದಯೋನ್ಮುಖ ಸವಾಲುಗಳು’ ಎನ್ನುವ ವಿಷಯ ಕುರಿತು ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಾಧ್ಯಮಗಳು ಮಹತ್ತರ ಹೊಣೆ ಹೊತ್ತಿದ್ದವು. ದೇಶ ಕಟ್ಟುವ ಕಾರ್ಯಕ್ಕೆ ಮಾಧ್ಯಮಗಳು ತಮ್ಮದೇ ಆದ ಕೊಡುಗೆ ನೀಡಿವೆ. ಆದರೆ, 1990ರಿಂದ ಈಚೆಗೆ ಮಾಧ್ಯಮಗಳ ಗತಿಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅದರಲ್ಲೂ ಕಳೆದ ಐದಾರು ವರ್ಷಗಳಿಂದ ಮಾಧ್ಯಮಗಳಿಗೆ ದೊಡ್ಡ ಸವಾಲು ಎದುರಾಗಿದೆ. ಅದುವೇ ಡಿಜಿಟಲ್ ಮಾಧ್ಯಮದ ಸುದ್ದಿಗಳು ಎಂದರು.

ಡಿಜಿಟಲೀಕರಣ ಮತ್ತು ಸಾಮಾಜಿಕ ಮಾಧ್ಯಮಗಳು ಸಾರ್ವಜನಿಕರಿಗೆ ತಮ್ಮ ಅಭಿಪ್ರಾಯ, ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಉತ್ತಮ ವೇದಿಕೆ ಕಲ್ಪಿಸುತ್ತಿವೆ. ಆದರೆ, ಫೇಸ್‌ಬುಕ್‌, ವ್ಯಾಟ್ಸ್‌ ಆ್ಯಪ್‌ನಲ್ಲಿ ಹಲವು ಬಗೆಯ ಸುದ್ದಿಗಳು ಹರಿದಾಡುತ್ತಿವೆ. ಇಂತಹ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸದೆ ಸುದ್ದಿ ನೀಡುವ ಧಾವಂತದಲ್ಲಿ ಒಬ್ಬರಿಂದ ಮತ್ತೂಬ್ಬರಿಗೆ ಪ್ರಸಾರ ಮಾಡುವ ಪದ್ಧತಿ ಬೆಳೆಯುತ್ತಿರುವುದು ದುರಂತ ಎಂದು ಉದಾಹರಣೆ ಸಮೇತ ಹೇಳಿದರು.

2017-18ರಲ್ಲಿ ದೇಶದ ವಿವಿಧ ಕಡೆಗಳಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡಿತ್ತು. ಇದನ್ನೇ ಆಧಾರವಾಗಿ ಇಟ್ಟುಕೊಂಡು ಹರಡಿದ ಸುದ್ದಿಗಳಿಂದ ಬೀದರ್‌ ಸೇರಿದಂತೆ ದೇಶಾದ್ಯಂತ 31 ಜನ ಅಮಾಯಕರ ಹತ್ಯೆಯಾಗಿದೆ ಎಂದು ವಿಶ್ಲೇಷಿಸಿದರು.

Advertisement

ಎಂ.ಎಂ. ಕಲಬುರ್ಗಿ ಹತ್ಯೆ: ಹಿರಿಯ ಸಂಶೋಧಕ ದಿ. ಎಂ.ಎಂ. ಕಲಬುರ್ಗಿ ಅವರು ದೇವರ ಬಗ್ಗೆ ಅವಹೇಳನ ಮಾತುಗಳನ್ನು ಆಡಿರಲಿಲ್ಲ. ಕಾರ್ಯಕ್ರಮವೊಂದರಲ್ಲಿ ಕಲಬುರ್ಗಿ ಅವರು ಭಾಷಣ ಮಾಡುತ್ತಾ ಯು.ಆರ್‌. ಅನಂತಮೂರ್ತಿ ಪ್ರಸ್ತಾಪಿಸಿದ ಘಟನೆ ಉಲ್ಲೇಖೀಸಿ ಮಾತನಾಡಿದ್ದರು. ಆ ಮಾತುಗಳನ್ನು ಕಲಬುರ್ಗಿ ಅವರೇ ಆಡಿದ್ದಾರೆ ಎಂಬಂತೆ ಸುದ್ದಿ ಪ್ರಸಾರವಾಯಿತು. ಇದರಿಂದ ಕೊನೆಗೆ ಅವರೇ ಬಲಿಪಶುವಾದರು. ನಿಜ ಅಂಶವೆಂದರೆ ಆ ಘಟನೆ ನಡೆದ 60 ವರ್ಷಗಳ ಬಳಿಕ ಕಲಬುರ್ಗಿ ಅವರು ಹೇಳಿದ್ದು. ತಮ್ಮ ಮಾತುಗಳ ಬಗ್ಗೆ ಅನೇಕ ಬಾರಿ ಕಲಬುರ್ಗಿ ಸ್ಪಷ್ಟನೆ ಸಹ ಕೊಟ್ಟಿದ್ದರು ಎಂದರು.

ಹೊಸ ಎರಡು ಸಾವಿರ ರೂ. ನೋಟ್‌ಗಳಲ್ಲಿ ಚಿಪ್‌ ಇದೇ ಎನ್ನುವ ಸಂದೇಶ ಹರಿದಾಡಿತು. ಇದನ್ನು ಟಿವಿಗಳು ಸುದ್ದಿ ಮಾಡಿದವು. ನಂತರ ಅದು ಸುಳ್ಳು ಎಂದು ಗೊತ್ತಾಗಿ ಸುದ್ದಿ ಪ್ರಸಾರ ಮಾಡಿದವರು ಕ್ಷಮೆ ಯಾಚಿಸಿದರು. ಆದ್ದರಿಂದ ವ್ಯಾಟ್ಸಆ್ಯಪ್‌ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡುವ ಸುದ್ದಿಗಳು ಸತ್ಯವಲ್ಲ. ಅವುಗಳನ್ನು ಮರು ಪರಿಶೀಲನೆ ಮಾಡುವುದು ಅತ್ಯಗತ್ಯವಾಗಿದೆ ಎಂದರು.

ಶರಣಬಸವ ವಿವಿ ಸಮ ಕುಲಪತಿ ಡಾ| ವಿ.ಡಿ. ಮೈತ್ರಿ, ಕುಲಸಚಿವ ಡಾ| ಅನೀಲಕುಮಾರ ಬಿಡವೆ, ಡೀನ್‌ ಡಾ| ಲಕ್ಷ್ಮೀಮಾಕಾ, ಗುಲಬರ್ಗಾ ವಿಶ್ವವಿದ್ಯಾಲಯ ಕುಲಸಚಿವ ಡಾ| ಸೋಮಶೇಖರ, ಶರಣಬಸವ ವಿವಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್‌, ಪತ್ರಕರ್ತ ವಾದಿರಾಜ ವ್ಯಾಸಮುದ್ರ, ಡಾ| ವೀಣಾ ವಿಕ್ರಂ ಸಿದ್ಧರೆಡ್ಡಿ ಹಾಜರಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಹೆಸರು ಬಳಸಿ ಸಂದೇಶ ಹರಿಬಿಡುವ ಪ್ರವೃತ್ತಿ ಬೆಳೆಯುತ್ತಿದೆ. ಹೀಗಾಗಿ ಮೊಬೈಲ್ನಲ್ಲಿ ಬರುವ ಸಂದೇಶಗಳೆಲ್ಲ ಸತ್ಯ ಎಂದು ತಿಳಿದುಕೊಳ್ಳಬಾರದು. ಸುದ್ದಿ ಮೂಲ ಮತ್ತು ಸುದ್ದಿ ಸತ್ಯಾಸತ್ಯತೆ ಪರಿಶೀಲಿಸುವ ಗುಣ ರೂಢಿಸಿಕೊಳ್ಳಬೇಕು. ಆಗ ಮಾತ್ರವೇ ಸುಳ್ಳು ಸುದ್ದಿಗಳನ್ನು ತಡೆಯಲು ಸಾಧ್ಯ.
ಎಸ್‌. ಭಾಗೇಶ್ರೀ,
ಹಿರಿಯ ಪತ್ರಕರ್ತರು

Advertisement

Udayavani is now on Telegram. Click here to join our channel and stay updated with the latest news.

Next