Advertisement

ಖಾದರ್‌-ಪ್ರಿಯಾಂಕ್‌ ನಗರ ಪ್ರದಕ್ಷಿಣೆ

09:56 AM Jul 03, 2019 | Team Udayavani |

ಕಲಬುರಗಿ: ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳವಾರ ಬೆಳಗ್ಗೆ ಮಹಾನಗರ ಪ್ರದಕ್ಷಿಣೆ ಮಾಡಿದರು. ಪಾಲಿಕೆ ವ್ಯಾಪ್ತಿಯ ಕಾಮಗಾರಿ ಹಾಗೂ ಯೋಜನೆಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು.

Advertisement

ಐವಾನ್‌-ಇ-ಶಾಹಿ ಅತಿಥಿ ಗೃಹದಿಂದ ನಗರ ಪ್ರದಕ್ಷಿಣೆ ಶುರು ಮಾಡಿದ ಸಚಿವರು, ಮೊದಲು ಜಿಮ್ಸ್‌ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ ಅಡುಗೆ ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು. (ಇಲ್ಲಿಂದಲೇ ನಗರದಲ್ಲಿರುವ ಏಳು ಇಂದಿರಾ ಕ್ಯಾಂಟೀನ್‌ಗಳಿಗೆ ಅಡುಗೆ ಪೂರೈಕೆ ಆಗುತ್ತದೆ.) ಅಡುಗೆಗೆ ಬಳಸುವ ಸಾಮಾಗ್ರಿ ಮತ್ತು ಧಾನ್ಯಗಳನ್ನು ಪರಿಶೀಲಿಸಿದ ಸಚಿವರು, ಅಲ್ಲಿ ತಯಾರಿಸಲಾಗಿದ್ದ ಅನ್ನ, ಸಾಂಬಾರ್‌ ರುಚಿ ನೋಡಿದರು. ಸಾಂಬಾರ್‌ ರುಚಿ ಸವಿದು, ಇದೇ ಗುಣಮಟ್ಟ ಮುಂದುವರಿಸಿಕೊಂಡು ಹೋಗಿ ಮತ್ತು ಘಟಕದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಅಡುಗೆ ಸಿಬ್ಬಂದಿಗೆ ಸೂಚಿಸಿದರು.

ಆಹಾರ ಸಾಮಗ್ರಿ ಸಂಗ್ರಹಿರುವ ಕೋಣೆ ವೀಕ್ಷಿಸಿದ ಅವರು, ಪತ್ರಿಯೊಂದು ದಿನಸಿ ವಸ್ತುಗಳ ಬಗ್ಗೆ ಮಾಹಿತಿ ಪಡೆದರು. ಅಕ್ಕಿ, ಬೇಳೆ, ರವೆ, ಬಟಾಣಿ, ಒಂದು ಟಿನ್‌ ಬಾಕ್ಸ್‌ ಎಣ್ಣೆ ವೀಕ್ಷಿಸಿ, ಅವುಗಳ ಮಾದರಿ ತೆಗೆದುಕೊಂಡರು.

ಆಹಾರ ಸಾಮಗ್ರಿಗಳ ಗುಣಮಟ್ಟ ತಿಳಿಯುವುದಕ್ಕಾಗಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿ ವರದಿ ತರಿಸಿಕೊಳ್ಳಲಾಗುವುದು ಎಂದು ಸಚಿವ ಖಾದರ್‌ ತಿಳಿಸಿದರು. ಈ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿ ಯೋಗ-ಕ್ಷೇಮವನ್ನು ಸಚಿವರು ವಿಚಾರಿಸಿದರು.

ಗ್ರಂಥಾಲಯ ಸ್ಥಾಪಿಸಿ: ಸ್ವಸ್ತಿಕ ನಗರದಲ್ಲಿ ಅಮೃತ್‌ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಸಾರ್ವಜನಿಕ ಉದ್ಯಾನವನಕ್ಕೆ ಭೇಟಿ ನೀಡಿ ಉದ್ಯಾನವನ ನಿರ್ವಹಣೆಯನ್ನು ಸಚಿವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಚಿವರನ್ನು ಭೇಟಿಯಾದ ಸ್ಥಳೀಯರು ಉದ್ಯಾನವನದಲ್ಲಿ ಗ್ರಂಥಾಲಯ ಸ್ಥಾಪಿಸಿ, ಓದುಗರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಗ್ರಂಥಾಲಯ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಉದ್ಯಾನವನದಲ್ಲಿ ಪ್ರತಿನಿತ್ಯ ಸ್ವಚ್ಛತೆ ಕಾಪಾಡಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬಳಿಕ ನಗರದ ಹೊರವಲಯದ ಕಪನೂರ ಬಳಿಯ ಒಳಚರಂಡಿ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿ ಘಟಕದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಘಟಕದ ನಿರ್ಮಾಣದ ಅಂದಾಜು ವೆಚ್ಚ 17.65. ಕೋಟಿ ರೂ.ಗಳಾಗಿದ್ದು, ಒಟ್ಟು ವೆಚ್ಚ 19.08 ಕೋಟಿ ರೂ.ಗಳಾಗಿದೆ. 25 ಎಂಎಲ್ಡಿ ಸಾಮರ್ಥ್ಯದ ಈ ಶುದ್ಧೀಕರಣ ಘಟಕದಿಂದ ಶುದ್ಧೀಕರಣಗೊಂಡ ನೀರನ್ನು ಹೊಲಗಳಿಗಾಗಿ ಕಾಲುವೆಗೆ ಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ನಂತರ ಸಚಿವದ್ವಯರು ಘಟಕದ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು.

ಶಾಸಕಿ ಖನೀಜ್‌ ಫಾತೀಮಾ, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜುಂ ಪರ್ವೇಜ್‌, ಮಹಾನಗರ ಪಾಲಿಕೆ ಆಯುಕ್ತೆ ಬಿ.ಫೌಜಿಯಾ ತರನ್ನಮ್‌, ಕಲಬುರಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಅಭಿಯಂತರ ದಿನೇಶ ಕುಮಾರ, ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರ ಶಿವನಗೌಡ ಮುಂತಾದವರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next