Advertisement

ಹಾಸ್ಟೆಲ್ ಸಮಸ್ಯೆ ಪರಿಹರಿಸಲು ಒತ್ತಾಯ

12:49 PM Jul 20, 2019 | Naveen |

ಕಲಬುರಗಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಯಾವುದೇ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿ ಗುರುವಾರ ಕರ್ನಾಟಕ ವಿದ್ಯಾರ್ಥಿ ಸಂಘಟನೆ ವತಿಯಿಂದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ವಸತಿ ನಿಲಯಗಳಿಗೆ ಅರ್ಜಿ ಹಾಕುವ ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕೆಂದು ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಇದು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯದ ದೂರದ ಅಂತರವೂ ಹೆಚ್ಚಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಶೈಕ್ಷಣಿಕ ವರ್ಷ ಪ್ರಾರಂಭದ ಮುಂಚಿತವಾಗಿಯೇ ಮೆಟ್ರಿಕ್‌ ನಂತರದ ವೃತ್ತಿಪರ ಹಾಗೂ ಎಲ್ಲ ಪದವಿ ಶಿಕ್ಷಣ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಶಿಫಾರಸ್ಸು ಮಾಡಬೇಕು. ಕಟ್ಟಡಗಳನ್ನಾದರೂ ಬಾಡಿಗೆ ಪಡೆದು ಅರ್ಜಿ ಹಾಕುವ ಎಲ್ಲ ವಿದ್ಯಾರ್ಥಿಗಳಿಗೆ ಮೂರ್‍ನಾಲ್ಕು ವಿದ್ಯಾರ್ಥಿಗಳು ಇರುವಂತೆ ಅಧ್ಯಯನ ಸ್ನೇಹಿ ಕೊಠಡಿಗಳ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಗ್ರಂಥಾಲಯದ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.

ಗುಣಮಟ್ಟದ ಆಹಾರದ ಜತೆಗೆ ವಾರಕ್ಕೊಂದು ಮೊಟ್ಟೆ, ಸಿಹಿಯೂಟ, ಬಾಳೆಹಣ್ಣು ಹಾಗೂ 15 ದಿನಗಳಿಗೊಮ್ಮೆ ಮಾಂಸದೂಟ ನೀಡಬೇಕು. ವಸತಿ ನಿಲಯದ ಆವರಣ, ಶೌಚಾಲಯವನ್ನು ನಿತ್ಯ ಶುಚಿ ಮಾಡಬೇಕು. ಶುಚಿಗೊಳಿಸುವ ನೌಕರರನ್ನು ಸೂಕ್ತವಾದ ವೇತನದ ಜತೆ ಕಾಯಂ ನೌಕರರನ್ನಾಗಿ ನೇಮಿಸಿಕೊಳ್ಳಬೇಕೆಂದು ಪ್ರತಿಭಟನಾ ನಿರತರು ಹೇಳಿದರು.

ಐಟಿಐ ಮತ್ತು ಐಟಿಸಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯಗಳನ್ನು ಪ್ರಾರಂಭಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವೃತ್ತಿಪರ ವಸತಿ ನಿಲಯಗಳನ್ನು ಪ್ರಾರಂಭಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

Advertisement

ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ, ಶರಣು ಕೋಲಿ, ನಾಗರಾಜ ಯಡ್ರಾಮಿ, ಕಾಶಿನಾಥ ಹಂಗರಗಿ, ವಿಜಯಕುಮಾರ ರಾಠೊಡ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next