Advertisement
ಬೆಳಗ್ಗೆಯಿಂದಲೇ ಚಿಣ್ಣರು, ಯುವಕ-ಯುವತಿಯರು, ಮಹಿಳೆಯರು ವಿವಿಧ ಬಗೆಯ ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಸಂಭ್ರಮಿಸಿದರು. ಹಳ್ಳಿಗಳಲ್ಲದೇ ಮಹಾನಗರದ ಪ್ರತಿ ಬಡಾವಣೆಯ ಬೀದಿಗಳಲ್ಲೂ ಜನತೆ ಮುಖ ಮತ್ತು ಮೈಗೆ ಬಣ್ಣ ಬಳಿದುಕೊಂಡು ರಂಗಿನಾಟ ಆಡಿದರು.
Related Articles
Advertisement
ಶಾಂತಿನಗರ, ವಡ್ಡರಗಲ್ಲಿ, ಬ್ರಹ್ಮಪುರ ಬಡಾವಣೆ, ಗಂಗಾನಗರ, ಆಳಂದ ನಾಕಾ ರಸ್ತೆ, ಕೋಟೆ ಪ್ರದೇಶ, ಸೂಪರ್ ಮಾರ್ಕೆಟ್, ಕೋಟೆ ವೆಂಕಟೇಶ ನಗರ, ಗೋವಾ ಹೋಟೆಲ್, ಆನಂದ ಹೋಟೆಲ್, ಮಹಾವೀರ ನಗರ, ಲಾಲಗೇರಿ ಕ್ರಾಸ್, ಶಹಾಬಜಾರ, ಸುಂದರ ನಗರ, ಜಗತ್ ವೃತ್ತ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಸೇರಿದಂತೆ ನಗರದ ತುಂಬೆಲ್ಲ ರಂಗಿನಾಟ ಜೋರಾಗಿತ್ತು.
ಸೂಪರ್ ಮಾರ್ಕೆಟ್‌ನ ಚೌಕ್‌ಯಲ್ಲಿ ಯುವಕರು ಗುಂಪು ಧ್ವನಿವರ್ಧಕಗಳನ್ನು ಹಚ್ಚಿ ಕುಣಿದು ಕುಪ್ಪಳಿಸಿದರು. ಹಲವೆಡೆ ಮೊಸರಿನ ಗಡಿಗೆ ಕಟ್ಟಿ ಅದನ್ನು ಯುವಕರು ಒಬ್ಬರ ಮೇಲೆ ಒಬ್ಬರು ನಿಂತು ಹರಸಾಹಸ ಪಟ್ಟು ಒಡೆದು ಸಂಭ್ರಮಿಸಿದರು.
ಜತೆಗೆ ಪ್ರಮುಖ ರಸ್ತೆಗಳಲ್ಲಿ ನಿಂತು ಯುವಕರು ಬಣ್ಣವನ್ನು ಮೈಮೇಲೆ ಹಾಕಲು ಕಾಯ್ದುಕುಳಿತಿದ್ದರು. ಅನೇಕ ಕಡೆಗಳಲ್ಲಿ ವಾಹನ ಸವಾರರು, ಪಾದಚಾರಿಗಳು ಬಣ್ಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಮಕ್ಕಳು, ಯುವಕರು ಓಡೋಡಿ ಬಣ್ಣ ಎರಚಿದರು.
ಬಿಗಿ ಬಂದೋಬಸ್ತ್: ಹೋಳಿ ಆಚರಣೆಯಿಂದಾಗಿ ಗರದಾದ್ಯಂತಹ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವುದೇ ಅಹಿತರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು, ಸಿಐಎಸ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಡ್ಡಾ-ದಿಡ್ಡಿ ಬೈಕ್ ಓಡಾಟ ತಡೆಯಲು ರಸ್ತೆಗಳ ಮಧ್ಯೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.
ನಗರ ಸ್ತಬ್ದ: ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಇಡೀ ನಗರ ಸ್ತಬ್ದವಾಗಿತ್ತು. ಅಂಗಡಿ-ಮುಗಟ್ಟುಗಳು, ಹೋಟೆಲ್, ಮಾಲ್ ಗಳು ಮುಚ್ಚಿದ್ದರಿಂದ ಸ್ವಯಃ ಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆಯಿಂದ ನಗರ ಸಾರಿಗೆ ಬಸ್‌ಗಳು, ಭಾರಿ ಗಾತ್ರದ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಅಲ್ಲಲ್ಲಿ ಆಟೋಗಳು, ಕಾರುಗಳು, ಬೈಕ್‌ಗಳ ಸಂಚಾರ ಸಾಮಾನ್ಯವಾಗಿತ್ತು. ಸಂಜೆ ವೇಳೆಗೆ ನಗರ ಮತ್ತೆ ಯಥಾ ಸ್ಥಿತಿಗೆ ಮರಳಿತು.