ಕಲಬುರಗಿ: ವ್ಯಾಪಕ ಮೋಡಗಳ ಸಂಚಲನ ಕಾಣುತ್ತಿದ್ದರೂ ಮಳೆ ಬಾರದೇ ಇರುವುದರಿಂದ ಸರ್ಕಾರ ಈ ಕೂಡಲೇ ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಮೋಡ ಬಿತ್ತನೆಗೆ ಮುಂದಾಗಬೇಕೆಂದು ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ (ಎಚ್ಕೆಸಿಸಿಐ) ಸಂಸ್ಥೆ ಆಗ್ರಹಿಸಿದೆ.
ಮಳೆಗಾಲ ಪ್ರಾರಂಭವಾಗಿ ಎರಡು ತಿಂಗಳಾದರೂ ಸಮರ್ಪಕ ಮಳೆ ಬಾರದೇ ಇರುವುದು, ಎಲ್ಲೆಲ್ಲೂ ನೀರಿಗೆ ಹಾಹಾಕಾರ ಇರುವುದರಿಂದ ಹಾಗೂ ಮೋಡಗಳು ದಟ್ಟವಾಗಿ ಹರಿದಾಡುತ್ತಿದ್ದರೂ ಮಳೆ ಸುರಿಯದ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ಮುಖ್ಯಮಂತ್ರಿಗಳು ಮುಂದಾಗುವ ಮೂಲಕ ಹೈ.ಕ ಭಾಗಕ್ಕೆ ಸ್ಪಂದಿಸಬೇಕೆಂದು ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ, ಜಂಟಿ ಗೌರವ ಕಾರ್ಯದರ್ಶಿ ರವಿಕುಮಾರ ಸರಸಂಬಿ, ಎಪಿಎಂಸಿ ಸಮಿತಿ ಚೇರ್ಮನ್ ಶಿವರಾಜ ಇಂಗಿನಶೆಟ್ಟಿ ಆಗ್ರಹಿಸಿದ್ದಾರೆ.
ಸರಕಾರ ಶುಕ್ರವಾರದಿಂದ ಮೈಸೂರು ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಸ್ವಾಗತಾರ್ಹವಾಗಿದೆ. ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಸಕಾಲಕ್ಕೆ ಮಳೆ ಬಾರದಿರುವುದರಿಂದ ಬರಗಾಲದ ಪರಿಸ್ಥಿತಿ ಉದ್ಭವಿಸಿದೆ. ಇದರ ಪರಿಣಾಮವಾಗಿ ರೈತರ ಕೃಷಿ ಚಟುವಟಿಕೆಗಳಾದ ಹೆಸರು, ಉದ್ದು ಮತ್ತು ತೊಗರಿ ಬೆಳೆಗಳ ಬಿತ್ತಣಿಕೆ ಕಾರ್ಯಗಳಲ್ಲಿ ಸಾಕಷ್ಟು ವಿಳಂಬವಾಗಿದೆ. ಆದುದ್ದರಿಂದ ಮೋಡ ಬಿತ್ತನೆ ಕೈಗೊಳ್ಳಬೇಕೆಂದು ಈ ಹಿಂದೆಯೂ ವಿನಂತಿಸಿಕೊಳ್ಳಲಾಗಿದೆ. ಆದರೆ ಯಾವುದೇ ನಿರ್ಣಯ ಕೈಗೊಳ್ಳದಿರುವುದು ಬೇಸರ ತರಿಸಿದೆ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಹೈದ್ರಾಬಾದ ಕರ್ನಾಟಕ ಪ್ರದೇಶದ ತಲಾ ಆದಾಯವು ಕೇವಲ 141ರೂ. ಇದ್ದು ಜೀವನ ನಿರ್ವಹಣೆ ಅಸಾಧ್ಯವಾಗಿದೆ. ಈ ಭಾಗದಲ್ಲಿ 303ಎಮ್.ಎಮ್. ಮಳೆಯಾಗುವ ನಿರೀಕ್ಷೆ ಇದ್ದರೂ ಕೇವಲ ಶೇ. 50ರಷ್ಟೇ ಮಳೆಯಾಗಿದೆ. ಪರಿಸ್ಥಿತಿ ಗಾಂಭಿರ್ಯ ಪರಿಗಣಿಸಿಲಾರದೆ ಸರಕಾರವು ಮೋಡ ಬಿತ್ತನೆ ಕಾರ್ಯಕ್ರಮವನ್ನು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಆದ್ಯತೆ ಮೇರೆಗೆ ಕೈಗೊಳ್ಳುವುದರ ಬದಲಾಗಿ ಶೇ. 15 ಮಳೆ ಅಭಾವವಿರುವ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಕೈಗೊಳ್ಳುವ ಬಗ್ಗೆ ಘೋಷಿಸಿರುವುದು ವಿಷಾದಕರವಾದ ಸಂಗತಿ. ದಕ್ಷಿಣ ಕರ್ನಾಟಕದಲ್ಲಿ ಕೈಗೊಂಡ ಮೋಡ ಬಿತ್ತನೆ ಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ ಹೈ.ಕ. ಪ್ರದೇಶದ ವಸ್ತು ಸ್ಥಿತಿ ನಿರ್ಲಕ್ಷಿಸಿ ಅದರ ಬಗ್ಗೆ ಪ್ರಾಮುಖ್ಯತೆ ನೀಡದೇ ದಕ್ಷಿಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿರುವುದು ಮಾತ್ರ ಆಶ್ಚರ್ಯಕರ ಸಂಗತಿಯಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮಳೆ ನಾಪತ್ತೆ ಆಗಿರುವುದರಿಂದ ಜಲಾಶಯಗಳೆಲ್ಲ ಖಾಲಿಯಾಗಿವೆ. ಆದ್ದರಿಂದ ಮೋಡ ಬಿತ್ತನೆ ಈಗಲೇ ಮುಂದಾಗಬೇಕು. ಕಲಬುರಗಿ ವಿಮಾನ ನಿಲ್ದಾಣ ಜಾಗದಿಂದಲೇ ಮೋಡ ಬಿತ್ತುವ ಕೆಲಸ ಕೈಗೊಳ್ಳಬಹುದಾಗಿದೆ. ಹೈದ್ರಾಬಾದ ಕರ್ನಾಟಕ ಪ್ರದೇಶದ ಯಾದಗಿರಿ ಜಿಲ್ಲೆಯ ಸೂರಪುರದಲ್ಲಿ ರಡಾರ್‌ವನ್ನು ಸ್ಥಾಪಿಸಿ ಮೋಡ ಬಿತ್ತನೆಯ ಕಾರ್ಯಕ್ರಮವನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕೆಂದು ಎಚ್ಕೆಸಿಸಿಐ ಪದಾಧಿಕಾರಿಗಳು ವಿನಂತಿಸಿದ್ದಾರೆ