Advertisement

ಐತಿಹಾಸಿಕ ದ್ವಾರದ ಸೊಬಗಿಗೆ ಧಕ್ಕೆ

12:54 PM Aug 07, 2019 | Team Udayavani |

ಕಲಬುರಗಿ: ಮಹಾನಗರದ ಸಾರ್ವಜನಿಕ ಉದ್ಯಾನದಲ್ಲಿರುವ ಏಕೈಕ ಐತಿಹಾಸಿಕ ಮಹಾದ್ವಾರಕ್ಕೆ ಧಕ್ಕೆ ಬರುವಂತೆ ಬೃಹತ್‌ ಕಟ್ಟಡವೊಂದು ನಿರ್ಮಾಣವಾಗುತ್ತಿದೆ.

Advertisement

ಉದ್ಯಾನದಲ್ಲಿರುವ ಶತಮಾನದಷ್ಟು ಹಳೆಯದಾದ ಹೈದ್ರಾಬಾದ ನಿಜಾಂ ಕಾಲದ ಮಹಾದ್ವಾರಕ್ಕೆ ಹತ್ತಿಕೊಂಡು ಖಾಸಗಿ ಕಟ್ಟಡವೊಂದು ನಿರ್ಮಾಣವಾಗುತ್ತಿದ್ದು, ಮಹಾದ್ವಾರದ ಸೌಂದರ್ಯ ಹಾಗೂ ಮಹಾದ್ವಾರಕ್ಕೆ ಧಕ್ಕೆ ಬರುವುದರ ಜತೆಗೆ ದ್ವಾರವೇ ಬೀಳುವಂತೆ ವಾತಾವರಣ ನಿರ್ಮಿಸುತ್ತಿರುವುದು ನಿಜಕ್ಕೂ ತಲೆ ತಗ್ಗಿಸುವ ವಿಚಾರವಾಗಿದೆ. ಉದ್ಯಾನದ ದಕ್ಷಿಣ ಭಾಗದ ಕಡೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರ ಕಚೇರಿಗೆ ಎದರುಗಡೆ ಇರುವ ಈ ದ್ವಾರಕ್ಕೆ ಹತ್ತಿಕೊಂಡಂತೆ ಬಲಾಡ್ಯರು ತಮ್ಮ ಎಲ್ಲ ಶಕ್ತಿ ಬಳಸಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಇದನ್ನು ತಡೆಯುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗದಿರುವುದು ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ.

ಮಹಾನಗರದ ಉದ್ಯಾನಕ್ಕೆ ಪ್ರವೇಶಿಸುವ ನಿಟ್ಟಿನಲ್ಲಿ ಹೈದ್ರಾಬಾದ ನಿಜಾಂ ನಾಲ್ಕು ಮಹಾದ್ವಾರ ನಿರ್ಮಿಸಿದ್ದ. ಈಗ ಮೂರು ದ್ವಾರಗಳು ಒಂದಿಲ್ಲ ಒಂದು ಕಾರಣಕ್ಕೆ ಕಾಣದಂತಾಗಿವೆ. ಈಗ ಉಳಿದಿರುವುದು ಇದೊಂದೇ ಮಹಾದ್ವಾರ ಮಾತ್ರ. ಈಗ ಇದಕ್ಕೂ ಅಳಿವಿನ ಪರಿಸ್ಥಿತಿ ಎದುರಾಗಿದೆ.

ಐತಿಹಾಸಿಕ ಶರಣಬಸವೇಶ್ವರ ಕೆರೆ ನೀರು ಯಾವುದೇ ಮೋಟಾರ್‌ ಸಹಾಯವಿಲ್ಲದಂತೆ ಗಿಡ ಮರಗಳಿಗೆ ನೀರು ಬರುವ ಹಾಗೆ ಕೆಳಗಡೆ ಐತಿಹಾಸಿಕ ಮಹಿಬೂಬ ಸಾಹಿ ಗುಲ್ಷನ್‌ ಉದ್ಯಾನ ನಿರ್ಮಿಸಲಾಗಿದೆ. ಇದಕ್ಕೆ ಮೆರಗು ಎನ್ನುವಂತೆ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಆದರೆ ಉಳಿದಿರುವ ಏಕೈಕ ಮಹಾದ್ವಾರಕ್ಕೂ ಕಂಟಕ ಎದುರಾಗಿದೆ. ಐತಿಹಾಸಿಕ ಕೋಟೆಯೊಳಗೆ ವಾಸವಾಗಿರುವರನ್ನು ಹೊರಗೆ ಕಳುಹಿಸಲು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿರುವಾಗ, ಇತ್ತ ಮಹಾನಗರದ ಐತಿಹಾಸಿಕ ಸಾರ್ವಜನಿಕ ಉದ್ಯಾನದಲ್ಲಿರುವ ಐತಿಹಾಸಿಕ ಮಹಾದ್ವಾರಕ್ಕೆ ಹತ್ತಿಕೊಂಡಂತೆ ಕಟ್ಟಡ ಕಟ್ಟುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

ಉದಯವಾಣಿ’ ವರದಿ ನಂತರ ಸ್ಥಗಿತ
ಎರಡು ವರ್ಷಗಳ ಹಿಂದೆ 2017ರ ಜುಲೈ 18ರಂದು ‘ಉದಯವಾಣಿ’ಯಲ್ಲಿ ಕಲಬುರಗಿ ಮಹಾನಗರದ ಸಾರ್ವಜನಿಕ ಉದ್ಯಾನದಲ್ಲಿರುವ ಐತಿಹಾಸಿಕ ಮಹಾದ್ವಾರಕ್ಕೆ ಹತ್ತಿಕೊಂಡೇ ಖಾಸಗಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಇದರಿಂದ ಐತಿಹಾಸಿಕ ಮಹಾದ್ವಾರದ ಸೊಬಗಿಗೆ ಧಕ್ಕೆ ಎಂಬುದಾಗಿ ಸಮಗ್ರ ವಿವರಣೆಯೊಂದಿಗೆ ವರದಿ ಮಾಡಲಾಗಿತ್ತು. ಉಳಿದ ಏಕೈಕ ಮಹಾದ್ವಾರಕ್ಕೂ ಕಂಟಕವಾಗಿದ್ದು, ಕಟ್ಟಡ ನಿರ್ಮಾಣ ತಡೆಯಬೇಕು ಎಂದು ವರದಿ ಮಾಡಿದ್ದರಿಂದ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಆದರೆ ಈಗ ಕಳೆದೆರಡು ತಿಂಗಳಿನಿಂದ ಕಟ್ಟಡ ಕಾರ್ಯ ಮತ್ತೆ ಆರಂಭಿಸಲಾಗಿದೆ. ಕಟ್ಟಡ ನಿರ್ಮಾಣ ಮೊದಲಿನ ದ್ವಾರ ಹಾಗೂ ಈಗ ದ್ವಾರ ಹೇಗೆ ಕಾಣುತ್ತಿದೆ ಎಂಬುದನ್ನು ಈ ಚಿತ್ರಗಳನ್ನು ನೋಡಿದರೆ ಅರಿವಿಗೆ ಬರುತ್ತದೆ. ಕಟ್ಟಡ ನಿರ್ಮಾಣ ಕಾರ್ಯ ತಡೆಯದಿದ್ದರೆ ಮುಂದೆ ದ್ವಾರವೇ ಬಿದ್ದು ಹೋದರೂ ಆಶ್ಚರ್ಯವಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next