ಕಲಬುರಗಿ: ಬಿಸಿಲಿಗೆ ಹೆಸರಾಗಿರುವ ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಪ್ರಸಕ್ತ ವರ್ಷ ಸೂರ್ಯ ಕೆಂಡ ಉಗುಳುತ್ತಿದ್ದು, ಸೂರ್ಯನ ಪ್ರತಾಪಕ್ಕೆ ನಾಗರಿಕರು ಕಂಗೆಟ್ಟು ಹೋಗಿದ್ದಾರೆ. ಗರಿಷ್ಠ 45 ಡಿಗ್ರಿ ಸೆಲಿಯಸ್ಸ್ ಉಷ್ಣಾಂಶ ಇದ್ದರೆ, ಕನಿಷ್ಠ ಉಷ್ಣಾಂಶವೇ ಪ್ರತಿ ದಿನ 30 ಡಿಗ್ರಿ ಸೆಲಿಯಸ್ಸ್ ದಾಖಲಾಗುತ್ತಿದೆ.
Advertisement
ಹೈಕ ಪ್ರದೇಶದ ಜನತೆಗೆ ಬಿಸಿಲು ಹೊಸದಲ್ಲ. ಆದರೆ, ಬಿಸಿಲಿನ ಝಳದೊಂದಿಗೆ ಬಿಸಿ ಗಾಳಿ ಬೀಸುತ್ತಿದೆ. ಮುಖಕ್ಕೆ ಗಾಳಿ ತಾಗುತ್ತಿದ್ದಂತೆ ಸುಡುವ ಕೆಂಡವೇ ತೆಗೆದು ಬಾರಿಸಿದಂತೆ ಭಾಸವಾಗುತ್ತದೆ. ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೀದರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಿತ್ಯ 42ರಿಂದ 45 ಡಿಗ್ರಿ ಸೆಲಿಯಸ್ಸ್ ತಾಪಮಾನ ದಾಖಲಾಗುತ್ತಿದೆ.
Related Articles
Advertisement
ಕನಿಷ್ಠ ಉಷ್ಣಾಂಶವೂ ಏರಿಕೆಕಲಬುರಗಿ ಜಿಲ್ಲೆಯಲ್ಲಿ 2010ರಲ್ಲಿ 46.1 ಡಿಗ್ರಿ ಸೆಲಿಯಸ್ಸ್ ಉಷ್ಣಾಂಶ ದಾಖಲಾಗಿದ್ದು, ಇದು ಸಾರ್ವಕಾಲಿಕ ಗರಿಷ್ಠ ಉಷ್ಣಾಂಶವಾಗಿದೆ. ಕನಿಷ್ಠ ಉಷ್ಠಾಂಶ ಸಾಮಾನ್ಯವಾಗಿ 20 ಡಿಗ್ರಿಯಿಂದ 26, 28 ಡಿಗ್ರಿ ಸೆಲಿಯಸ್ಸ್ ಇರುತ್ತದೆ. ಪ್ರಸಕ್ತ ವರ್ಷ ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗಿದ್ದು, 30 ಡಿಗ್ರಿ ಸೆಲಿಯಸ್ಸ್ ದಾಖಲಾಗಿದೆ. ಮೇ 29ರಂದು ಕಲಬುರಗಿಯಲ್ಲಿ 30.2, ರಾಯಚೂರಲ್ಲಿ 28.5, ಕೊಪ್ಪಳದಲ್ಲಿ 25.5, ಬೀದರ್‌ನಲ್ಲಿ 26.0 ಡಿಗ್ರಿ ಸೆಲಿಯಸ್ಸ್ ಕನಿಷ್ಠ ತಾಪಮಾನ ಇತ್ತು. ಅದೇ ರೀತಿ ಗರಿಷ್ಠ ತಾಪಮಾನ ಕಲಬುರಗಿಯಲ್ಲಿ 44.7, ರಾಯಚೂರಿನಲ್ಲಿ 42.5, ಬೀದರ್‌ನಲ್ಲಿ 42 ಹಾಗೂ ಕೊಪ್ಪಳದಲ್ಲಿ 38.5 ಡಿಗ್ರಿ ಸೆಲಿಯಸ್ಸ್ ದಾಖಲಾಗಿತ್ತು. ಕಲಬುರಗಿ ಭಾಗದಲ್ಲಿ ಸದ್ಯಕ್ಕೆ ಮಳೆಯಾಗುವ ಯಾವುದೇ ಮುನ್ಸೂಚನೆ ಇಲ್ಲ. ಇನ್ನೂ ಮೂರ್‍ನಾಲ್ಕು ದಿನ ಇದೇ ತಾಪಮಾನ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.