ಹಣಮಂತರಾವ ಭೈರಾಮಡಗಿ
ಕಲಬುರಗಿ: ಗ್ರಾಮಗಳಲ್ಲಿ ಹಲವಾರು ಸರ್ಕಾರಿ ಸೌಲಭ್ಯಗಳಿವೆ. ಆದರೆ ಅವುಗಳು ಈಗ ಜನರನ್ನು ತಲುಪಲು ಮುಂದಾಗುತ್ತಿರುವುದು ತಾಲೂಕಿನ ಹೇರೂರ ಬಿ ಗ್ರಾಮದಲ್ಲಿ ಮುಖ್ಯಮಂತ್ರಿಗಳು ವಾಸ್ತವ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ!
ಗ್ರಾಮದಲ್ಲಿರುವ ಪಶು ಚಿಕಿತ್ಸಾಲಯ, ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ, ಆಗೊಮ್ಮೆ-ಈಗೊಮ್ಮೆ ಕಾರ್ಯನಿರ್ವಹಿಸುತ್ತಿದ್ದ ಪ್ರಾಥಮಿಕ ಉಪ ಆರೋಗ್ಯ ಕೇಂದ್ರ, ಹೆಸರಿಗೆ ಮಾತ್ರ ಇದ್ದ ಅಂಗನವಾಡಿ ಕೇಂದ್ರಗಳು ಸರಿಯಾಗಿ ನಡೆಯಲು ಮುಖ್ಯಮಂತ್ರಿಯೇ ಬರಬೇಕಾಯಿತು. ಜೂ.22ರಂದು ಸಿಎಂ ಕುಮಾರಸ್ವಾಮಿ ಹೇರೂರ ಬಿ. ಗ್ರಾಮದಲ್ಲಿ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಯೋಜನೆಗಳು ಈಗ ಅನಾವರಣಗೊಳ್ಳುತ್ತಿವೆ. ಸರ್ಕಾರದ ಆಡಳಿತ ಯಂತ್ರ ಚುರುಕಾಗಿ ಎಲ್ಲ ಇಲಾಖೆಗಳು ಕಾರ್ಯೋನ್ಮುಖವಾಗುತ್ತಿವೆ.
ಹೇರೂರ ಬಿ. ಗ್ರಾಮದಲ್ಲಿ ಪಶು ಚಿಕಿತ್ಸಾಲಯಕ್ಕೆ ಸ್ವಂತ ಕಟ್ಟಡವಿದೆ. ಆಸ್ಪತ್ರೆಯಿಂದ ದನಕರುಗಳಿಗೆ ಚಿಕಿತ್ಸೆ ನೀಡದೇ ಅದೆಷ್ಟೋ ವರ್ಷಗಳಾಗಿವೆ. ಆದರೆ ಈಗ ಸ್ವಚ್ಛಗೊಳಿಸಿ ಬಣ್ಣ ಬಳೆದು ಒಂದೊಂದೇ ಅವಶ್ಯಕ ಪರಿಕರಗಳನ್ನು ತಂದಿಡಲಾಗುತ್ತಿದೆ. ಚಿಕಿತ್ಸಾಲಯ ಕಾರ್ಯಾರಂಭವಾಗದೇ ಇರುವ ಹಿನ್ನೆಲೆಯಲ್ಲಿ ಒಂದು ಕೋಣೆಯನ್ನು ಗ್ರಾಪಂ ಉಗ್ರಾಣವನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಪಶು ಆಸ್ಪತ್ರೆ ತೆರೆದಿದ್ದೇ ನೋಡಿಲ್ಲ, ಇನ್ನು ವೈದ್ಯರಂತು ಬರುವುದೇ ಇಲ್ಲ. ಇನ್ನುಳಿದಂತೆ ನದಿ ದಂಡೆಯಲ್ಲಿದ್ದರೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಈಗ ದುರಸ್ತಿಗೊಳಿಸಿ ಕಾರ್ಯಾರಂಭ ಮಾಡಲಾಗುತ್ತಿದೆ. ಗ್ರಾಮದ ಜನನಿಬಿಡ ಪ್ರದೇಶದಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡವಿದ್ದರೂ ಅದನ್ನು ಬೇರೆಯವರಿಗೆ ನೀಡಿ ಯಾರಧ್ದೋ ಮನೆಯಲ್ಲಿ ನಡೆಸಲಾಗುತ್ತಿದೆ. ಏಕೆಂದರೆ ಅಲ್ಲಿ ಅಂಗನವಾಡಿ ನಡೆಯುತ್ತಿದೆಯೋ ಇಲ್ಲವೋ ಎನ್ನುವುದು ಯಾರಿಗೂ ತಿಳಿಯಲ್ಲ. ಪ್ರಾಥಮಿಕ ಉಪ ಆರೋಗ್ಯ ಕೇಂದ್ರವಿದೆಯಾದರೂ ವಾರಕ್ಕೊಮ್ಮೆ ಕಾರ್ಯನಿರ್ವಹಿಸಿದರೆ ಅದೇ ದೊಡ್ಡದು. ಹೀಗೆ ಹತ್ತಾರು ಆಡಳಿತ ಲೋಪಗಳು ಸಾಲು-ಸಾಲಾಗಿ ಕಂಡು ಬರುತ್ತವೆ.
ಬಾಯಿ ಬಿಡದ ಜನತೆ: ಗ್ರಾಮದಲ್ಲಿ 8ರಿಂದ 10 ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಸಮುದಾಯಕ್ಕೊಬ್ಬರು ಎನ್ನುವಂತೆ ಗ್ರಾಮದ ಯಾವುದೇ ಓಣಿಯಲ್ಲಿ ಮದ್ಯ ಮಾರಾಟವಿದೆ. ಯುವಕರು ಕುಡಿತದ ಚಟಕ್ಕೆ ಒಳಗಾಗಿ ಕುಟುಂಬಗಳು ಹಾಳಾಗುತ್ತಿದ್ದರೂ ಯಾರೂ ಧ್ವನಿ ಎತ್ತುತ್ತಿಲ್ಲ. ಇನ್ನುಳಿದಂತೆ ಗ್ರಾಮದ ದಡದಲ್ಲೇ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತದೆ. ಈಗಷ್ಟೇ ಸ್ವಲ್ಪಮಟ್ಟಿಗೆ ಕಂಡುಬರುತ್ತಿಲ್ಲ. ಆದರೆ ಈ ಎರಡು ಅಕ್ರಮಗಳ ವಿರುದ್ಧ ಗ್ರಾಮಸ್ಥರು ಎಲ್ಲೂ ಬಹಿರಂಗವಾಗಿ ಸಂಘಟನಾತ್ಮಕವಾಗಿ ಮಾತನಾಡುತ್ತಿಲ್ಲ. ದೊಡ್ಡವರ ಉಸಾಬರೀ ನಮಗ್ಯಾಕ್ರೀ ಎನ್ನುತ್ತಾ ಹಿಂದೆಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕಲು ತಮ್ಮೂರಲ್ಲೊಂದು ಪೊಲೀಸ್ ಠಾಣೆ ಆಗಬೇಕುನ್ನುತ್ತಾರೆ ಹೇರೂರ ಬಿ. ಗ್ರಾಮಸ್ಥರು.
ಅಷ್ಟೇ ಏಕೆ ನಾಲ್ಕೈದು ವರ್ಷದ ಹಿಂದೆ ಗ್ರಾಮದಲ್ಲಿ 3.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಜಲ ನಿರ್ಮಲ ಯೋಜನೆ ಅಡಿ ಜಲ ಸಂಗ್ರಹಾಗಾರ ಹಾಗೂ ನೀರು ಶುದ್ಧೀಕರಣ ಟ್ಯಾಂಕ್ ತುಕ್ಕು ಹಿಡಿದು ಅವಸಾನದ ಅಂಚಿಗೆ ತಲುಪಿದೆ. ಶಾಲಾ ಕಟ್ಟಡಗಳು ಸೇರಿದಂತೆ ಇತರ ಯೋಜನೆಗಳು ಕಾಗದದಲ್ಲೇ ಮುಗಿಸಲಾಗಿದೆ. ಗ್ರಾಮದ ಶಾಲಾ ಶಿಕ್ಷಕನೇ ಶಾಲಾ ಕೋಣೆಗಳ ನಿರ್ಮಾಣ ಗುತ್ತಿಗೆ ಹಿಡಿದು ಕಳಪೆಯಾಗಿ ನಿರ್ಮಿಸಲಾಗಿದೆ. ಗ್ರಾಮದ ಕೆಲವರು ತಮ್ಮ ಮಕ್ಕಳನ್ನು ಅಕ್ಕಪಕ್ಕದ ಗ್ರಾಮದ ಖಾಸಗಿ ಶಾಲೆಗೆ ಕಳುಹಿಸುತ್ತಿರುವುದನ್ನು ನೋಡಿದರೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಸರಿಯಾಗಿ ನಡೆಯುತ್ತಿಲ್ಲ ಎನ್ನುವುದನ್ನು ನಿರೂಪಿಸುತ್ತದೆ.